For the best experience, open
https://m.justkannada.in
on your mobile browser.

ಸಂಸತ್ ಭವನದ ಮೇಲೆ ದಾಳಿ: ಪ್ರಧಾನಿ- ಗೃಹ ಸಚಿವರ ಬಹಿರಂಗ ಕ್ಷಮೆಯಾಚನೆಗೆ ಎಚ್.ಎ. ವೆಂಕಟೇಶ್ ಆಗ್ರಹ

10:14 PM Dec 13, 2023 IST | veerabhadra
ಸಂಸತ್ ಭವನದ ಮೇಲೆ ದಾಳಿ  ಪ್ರಧಾನಿ  ಗೃಹ ಸಚಿವರ ಬಹಿರಂಗ ಕ್ಷಮೆಯಾಚನೆಗೆ ಎಚ್ ಎ  ವೆಂಕಟೇಶ್ ಆಗ್ರಹ

ಮೈಸೂರು, ಡಿಸೆಂಬರ್ 13, 2023 (www.justkannada.in): ದೇಶದ ಪ್ರಜಾಪ್ರಭುತ್ವದ ಹೃದಯದಂತಿರುವ ಸಂಸತ್ ಭವನದ ಮೇಲೆ ದಾಳಿ ನಡೆದಿರುವುದು ದೊಡ್ಡ ಭದ್ರತಾ ಲೋಪ. ಬಿಜೆಪಿ ಸರ್ಕಾರ ಇದರ ಹೊಣೆ ಹೊರಬೇಕಿದ್ದು ಪ್ರಧಾನಿ ಮತ್ತು ಗೃಹ ಸಚಿವರು ತಮ್ಮ ವೈಫಲ್ಯವನ್ನು ಒಪ್ಪಿಕೊಂಡು ದೇಶದ ಜನತೆಯಲ್ಲಿ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಒತ್ತಾಯಿಸಿದ್ದಾರೆ.

22 ವರ್ಷಗಳ ಹಿಂದೆಯೂ ಇದೇ ಮಾದರಿಯ ದಾಳಿ ನಡೆದಿತ್ತು. ಈ ಸಮಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಈಗಲೂ ಬಿಜೆಪಿ ಅಧಿಕಾರದಲ್ಲಿದೆ. ಈ ಪಕ್ಷ ದೇಶದ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದನ್ನು ಈ ಘಟನೆ ಖಚಿತಪಡಿಸುತ್ತದೆ. ದೇಶದ ರಾಜಧಾನಿಯಲ್ಲಿರುವ ಪ್ರಜಾಪ್ರಭುತ್ವದ ಸವೋಚ್ಛ ಸೌಧವನ್ನೇ ರಕ್ಷಿಸಲು ವಿಫಲವಾಗಿರುವ ಪ್ರಧಾನಿ ಮತ್ತು ಗೃಹಮಂತ್ರಿ ಆಡಳಿತದಲ್ಲಿಯೂ ಪೂರ್ಣವಾಗಿ ಸೋತಿದ್ದಾರೆ ಎನ್ನುವುದು ಸ್ಪಷ್ಟ. ದೆಹಲಿಯಲ್ಲಿರುವ ಗೃಹ ಸಚಿವಾಲಯ ಮತ್ತು ಗುಪ್ತಚರ ವಿಭಾಗ ಇಂತಹ ದುಷ್ಕೃತ್ಯಗಳನ್ನು ತಡೆಯಲು ವಿಫಲವಾಗಿವೆ. ರಾಜಧಾನಿಯಲ್ಲೇ ಅದರಲ್ಲೂ ಸಂಸತ್ತಿನಲ್ಲಿಯೇ ಇಂತಹ ಘಟನೆ ತಡೆಯಲು ಅಸಮರ್ಥರಾದವರು ಇನ್ನು ದೇಶಪೂರ್ತಿ ಹೇಗೆ ನಿಗಾಇಟ್ಟು ನಮ್ಮ ಗಡಿಗಳು ಮತ್ತು ಜನತೆಯನ್ನು ಕಾಪಾಡುತ್ತಾರೆ ಎನ್ನುವುದು ಇಲ್ಲಿ ಪ್ರಶ್ನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾಳಿಯಲ್ಲಿ ಭಾಗಿಯಾಗಿದ್ದವರು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ಸಿಂಹ ಅವರ ಅನುಮೋದನೆಯ ಪಾಸ್ ಪಡೆದಿದ್ದರು. ಸಂಸದರು ಇಂತಹ ವ್ಯಕ್ತಿಗಳಿಗೆ ಪಾಸ್ ನೀಡಿರುವುದು ದುರದೃಷ್ಟಕರ. ಪಾಸ್ ಕೇಳುವವರ ಹಿನ್ನೆಲೆ ಗಮನಿಸದೇ ಇವರು ತಳೆದ ಬೇಜವಾಬ್ದಾರಿಯಿಂದಲೇ ಇಂತಹ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸಂಸದರನ್ನು ತನಿಖೆಗೊಳಪಡಿಸುವ ಅಗತ್ಯವಿದೆ. ಅಲ್ಲದೇ ಚುನಾವಣೆ ಸಮಯದಲ್ಲಿ ಬಿಜೆಪಿ ಎಂತಹ ಕೆಲಸಕ್ಕಾದರೂ ಮುಂದಾಗುತ್ತದೆ ಎನ್ನುವುದು ಈ ಹಿಂದೆಯೂ ಹಲವು ಬಾರಿ ಸಾಬೀತಾಗಿದೆ. ಘಟನೆಯಲ್ಲಿ ಈ ಪಕ್ಷದವರ ಕೈವಾಡವಿದ್ದರೂ ಇರಬಹುದು, ಹೀಗಾಗಿ ನಿಷ್ಪಕ್ಷಪಾತವಾದ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಘಟನೆಯಲ್ಲಿ ಭಾಗಿಯಾದವರು ಯಾವುದೇ ವಿಚಾರಧಾರೆ ಹೊಂದಿರಲಿ, ಸಂಸತ್ತಿನ ಮೇಲೆ ದಾಳಿಗೆ ಯತ್ನಿಸುವುದು ಘೋರ ತಪ್ಪು. ಹೀಗಾಗಿ ಕಠಿಣ ಶಿಕ್ಷೆಯಾಗಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಶ್ನಿಸುವ ಹಕ್ಕಿದೆ, ಆದರೆ ದಾಳಿ ನಡೆಸುವ ಮತ್ತು ಕಾನೂನು ಉಲ್ಲಂಘಿಸುವ ಹಕ್ಕನ್ನು ಯಾರಿಗೂ ಕೊಟ್ಟಿಲ್ಲ. ಸಂವಿಧಾನ ಬದ್ಧವಾಗಿ ನಡೆಯುವ ಸರ್ಕಾರವನ್ನು ಪ್ರಶ್ನಿಸುವುದಕ್ಕೆ ಹಲವು ಮಾರ್ಗಗಳಿವೆ. ಕಾನೂನುಗಳು ರೂಪುಗೊಳ್ಳುವ ಸಂಸತ್ತಿಗೇ ನುಗ್ಗಿ ದಾಂಧಲೆ ನಡೆಸುವುದು ಸೂಕ್ತ ನಡೆಯಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

.