For the best experience, open
https://m.justkannada.in
on your mobile browser.

ಸಂಪೂರ್ಣ ಮನೆ ಹಾನಿಗೆ 1.2 ಲಕ್ಷ ರೂ ಪರಿಹಾರ ಮತ್ತು ಮನೆ ಒದಗಿಸಲು ತೀರ್ಮಾನ: ಸಿಎಂ  ಸಿದ್ದರಾಮಯ್ಯ

02:32 PM Aug 05, 2024 IST | prashanth
ಸಂಪೂರ್ಣ ಮನೆ ಹಾನಿಗೆ 1 2 ಲಕ್ಷ ರೂ ಪರಿಹಾರ ಮತ್ತು ಮನೆ ಒದಗಿಸಲು ತೀರ್ಮಾನ  ಸಿಎಂ  ಸಿದ್ದರಾಮಯ್ಯ

ಬೆಳಗಾವಿ, ಆಗಸ್ಟ್‌, 5,2024 (www.justkannada.in): ಮಳೆಯಿಂದ ಸಂಪೂರ್ಣ ಮನೆ ಹಾನಿ ಸಂಭವಿಸಿದ ಸಂತ್ರಸ್ತರಿಗೆ 1.2 ಲಕ್ಷ ರೂ. ಪರಿಹಾರದ ಜೊತೆಗೆ ಮನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಇಂದು ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಬಿಜೆಪಿಯು ಆರೋಪಿಸಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಈ ನೆರವಿನ ದುರುಪಯೋಗವಾಯಿತು. ಹಾಗೂ ಹಲವರಿಗೆ ಮೊದಲನೇ ಕಂತು ಮಾತ್ರ ಬಿಡುಗಡೆಯಾಗಿ, ಎರಡು ಹಾಗೂ ಮೂರನೇ ಕಂತಿನ ಪರಿಹಾರ ಈವರೆಗೂ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ 1.2 ಲಕ್ಷ ರೂ. ಪರಿಹಾರ ಹಾಗೂ ಮನೆ ನೀಡುವ ನಿರ್ಧಾರ ಮಾಡಿದೆ ಎಂದು ಸ್ಪಷ್ಟ ಪಡಿಸಿದರು.

ಜನರ ಸಹಕಾರವಿದ್ದರೆ ಪದೇ ಪದೇ ಮುಳುಗಡೆಯಾಗುವ ಹಳ್ಳಿಗಳ ಸ್ಥಳಾಂತರ ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸಲು ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು.

ಪರಿಹಾರ ಕೆಲಸ ಪ್ರಾರಂಭ

ರಾಜ್ಯದ ಹಲವೆಡೆ ಮಳೆಯಿಂದ ಹಾನಿಯಾಗಿದೆ. ಎಲ್ಲ ಕಡೆ ಪರಿಹಾರ ಕೆಲಸಗಳನ್ನು ಪ್ರಾರಂಭಿಸಲಾಗಿದೆ. ಮೈಸೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಭೇಟಿ ನೀಡಲಾಗಿದ್ದು, ಮೃತಪಟ್ಟವರಿಗೆ ಹಾಗೂ ಜಾನುವಾರುಗಳು ಸತ್ತಿರುವುದಕ್ಕೆ ಕೂಡಲೇ ಪರಿಹಾರ ವಿತರಿಸಲಾಗುತ್ತಿದೆ. ಮನೆಗಳು ಬಿದ್ದಿರುವುದಕ್ಕೆ ಪರಿಹಾರ, ವಿದ್ಯುತ್‌ ಕಂಬ, ಟ್ರಾನ್ಸ್‌ ಫಾರ್ಮರ್‌ ಗಳ ದುರಸ್ತಿ ಮೊದಲಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಳಗಾವಿಯಲ್ಲಿ ಕಳೆದ 42 ದಿನದಿಂದ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿಗಳಿಗೂ ರಜೆ ಘೋಷಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮುಂದಿನ ವಾರ ಹೆಚ್ಚು ಮಳೆ: ಕಟ್ಟೆಚ್ಚರ ವಹಿಸಲು ಸೂಚನೆ

ಮುಂದಿನ ವಾರ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಇದಕ್ಕಾಗಿ ಕಂದಾಯ, ವಿಪತ್ತು ನಿರ್ವಹಣೆ, ಅರಣ್ಯ ಇಲಾಖೆ, ಇಂಧನ, ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ ಎಂದರು.

ಮುಡಾ ಪ್ರಕರಣವನ್ನು ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಯಶಸ್ವಿಯಾಗಿ ಎದುರಿಸ್ತೀವಿ

ಮುಡಾ ಪ್ರಕರಣವನ್ನು ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಸರಿಯಸಗಿ ಎದುರಿಸ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಅವರು ಖಡಕ್ ಆಗಿ ತಿಳಿಸಿದರು.

ಮುಡಾ ಪ್ರಕರಣದ ಕುರಿತು ರಾಜ್ಯಪಾಲರು ನೀಡಿರುವ ಶೋಕಾಸ್‌ ನೊಟೀಸ್‌ ಹಿಂತೆಗೆದುಕೊಳ್ಳಬೇಕು. ಅದೇ ರೀತಿ ರಾಜ್ಯಪಾಲರಿಗೆ ಟಿ.ಜೆ.ಅಬ್ರಹಾಂ ನೀಡಿರುವ ದೂರನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದೇವೆ. ಈ ಕುರಿತಾಗಿ ರಾಜ್ಯಪಾಲರು ಯಾವ ತೀರ್ಮಾನ ಕೈಗೊಳ್ಳುತ್ತಾರೆ  ಎಂಬುದನ್ನು ಕಾದು ನೋಡುವುದಾಗಿ ತಿಳಿಸಿದರು.

ಗೃಹ ಲಕ್ಷ್ಮಿ ಮೂರು ತಿಂಗಳಿನಿಂದ ಬಾಕಿ ಇದೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಜುಲೈ ತಿಂಗಳಿನದ್ದು ಮಾತ್ರ ಬಾಕಿ ಇದೆ. ಅದನ್ನೂ ಶೀಘ್ರವೇ ವಿತರಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌, ಬೆಳಗಾವಿ ಜಿಲ್ಲೆಯ ಶಾಸಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Key words: 1.2 lakh, compensation, house damage, CM Siddaramaiah

Tags :

.