HomeBreaking NewsLatest NewsPoliticsSportsCrimeCinema

16ನೇ ಹಣಕಾಸು ಆಯೋಗದ ಸಭೆ: ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ವಿವರಿಸಿದ ಸಿಎಂ ಸಿದ್ದರಾಮಯ್ಯ

01:20 PM Aug 29, 2024 IST | prashanth

ಬೆಂಗಳೂರು,ಆಗಸ್ಟ್,29,2024 (www.justkannada.in): ಇಂದು ನಡೆದ 16ನೇ ಹಣಕಾಸು ಆಯೋಗದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕೇಂದ್ರಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆ, ನಷ್ಟ ಇದರಿಂದ ರಾಜ್ಯಕ್ಕಾಗಿರುವ ಅನ್ಯಾಯದ ಕುರಿತು ವಿವರಿಸಿದ್ದಾರೆ.

ಬೆಂಗಳೂರಿನ : ಹೊಟೇಲ್‌ ತಾಜ್‌ ವೆಸ್ಟೆಂಡ್‌ ನಲ್ಲಿ 16ನೇ ಹಣಕಾಸು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಿಷ್ಟು...

ಕರ್ನಾಟಕ ಸರ್ಕಾರದ ಪರವಾಗಿ ನಾನು 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಅರವಿಂದ ಪನಗಾರಿಯಾ ಅವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ, ಇದೇ ರೀತಿ ಆಯೋಗದ ಗೌರವಾನ್ವಿತ ಸದಸ್ಯರಾದ ಅಜಯ್‌ ನಾರಾಯಣ ಝಾ, ಅನ್ನಿ ಜಾರ್ಜ್‌ ಮ್ಯಾಥ್ಯೂ, ಡಾ.ಮನೋಜ್‌ ಪಾಂಡಾ ಮತ್ತು ಡಾ.ಸೌಮ್ಯ ಕಾಂತಿ ಘೋಷ್‌ ಅವರನ್ನು ಸ್ವಾಗತಿಸುತ್ತೇನೆ. ರಾಜ್ಯಕ್ಕೆ ಭೇಟಿ ನೀಡಿರುವುದಕ್ಕಾಗಿ ನಾನು ಹಣಕಾಸು ಆಯೋಗಕ್ಕೆ ಅಭಾರಿಯಾಗಿದ್ದೇನೆ. ಇಂದಿನ ಮಹತ್ವದ ಈ ಸಭೆಯಲ್ಲಿ ನಡೆಯುವ ಚರ್ಚೆಗಳಿಂದ ನಾವು ಎದುರಿಸುತ್ತಿರುವ ಹಲವು ಸವಾಲುಗಳಿಗೆ ಉತ್ತರ ಕಂಡು ಕೊಳ್ಳಲು ಹಾಗೂ ದೇಶದ ಪೂರ್ಣ ಸಾಮರ್ಥ್ಯವನ್ನು ಅರಿಯಲು ಸಾಧ್ಯವಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

ಪ್ರಧಾನಿಯವರು ತಿಳಿಸಿರುವ ʻಸಹಕಾರಿ ಒಕ್ಕೂಟʼ ವನ್ನು ಉತ್ತೇಜಿಸಲು ನಮ್ಮ ದೇಶದ ಸಂವಿಧಾನದಲ್ಲಿ ಉಲ್ಲೇಖಿಸಿರುವ ಹಣಕಾಸು ಒಕ್ಕೂಟ ಮೂಲವಾಗಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಾಗೂ ರಾಜ್ಯ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ವಿಷಯದಲ್ಲಿ ಶಿಫಾರಸ್ಸುಗಳನ್ನು ಮಾಡಲು ಹಣಕಾಸು ಆಯೋಗದ ನೇಮಕಾತಿಯನ್ನು ಆರ್ಟಿಕಲ್‌ 280 ಕಡ್ಡಾಯಗೊಳಿಸಿದೆ. ಆಯೋಗ ಈ ವಿಷಯದಲ್ಲಿ ತಜ್ಞ, ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಸಂಸ್ಥೆಯಾಗಿದೆ.

ಆಯೋಗ ನ್ಯಾಯಸಮ್ಮತ ಮತ್ತು ದಕ್ಷ ನಿಲುವುಗಳನ್ನು ಅನುಸರಿಸಿ ಎಲ್ಲಾ ರೀತಿಯ ಅಸಮತೋಲನಗಳ ನಿವಾರಣೆ ಕುರಿತು ಕ್ರಮ ಕೈಗೊಳ್ಳುವ ವಿಶ್ವಾಸ ನಮಗಿದೆ. ರಾಜ್ಯಗಳ ನಡುವೆ ತೆರಿಗೆ ಮರು ಹಂಚಿಕೆಗೆ ನಮ್ಮ ಸಂವಿಧಾನ ಅವಕಾಶ ನೀಡಿದೆ. ಆದರೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯಗಳಿಗೆ ನೀಡುವ ಪ್ರೋತ್ಸಾಹಗಳ ಪರಿಣಾಮಗಳನ್ನು ಆಯೋಗ ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಂತಹ ರಾಜ್ಯಗಳ ತೆರಿಗೆದಾರರು, ತಮ್ಮ ತೆರಿಗೆಯ ಹಣ ಅವರ ಹಿತಕ್ಕಾಗಿ ಬಳಸುವುದನ್ನು ನಿರೀಕ್ಷಿಸುತ್ತಾರೆ. ಅಂತಹ ಕ್ರಮಗಳು ಸಾರ್ವಜನಿಕರಲ್ಲಿ ವಿಶ್ವಾಸ ಭಾವನೆ ಮೂಡಿಸುತ್ತದೆ. ಆದ್ದರಿಂದ ಆಯೋಗ ನ್ಯಾಯಪರತೆ, ದಕ್ಷತೆ ಮತ್ತು ನಿರ್ವಹಣೆಯ ನಡುವೆ ಅತ್ಯಂತ ಸೂಕ್ಷ್ಮವಾದ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ.

ಭಾರತದ ಅಭಿವೃದ್ಧಿ ಕಥನದಲ್ಲಿ ಕರ್ನಾಟಕ ಪ್ರಧಾನ ಪಾತ್ರ ವಹಿಸುತ್ತಿದೆ. ಒಟ್ಟು ಜನಸಂಖ್ಯೆಯ ಶೇ.5ರಷ್ಟಿದ್ದರೂ, ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕ ಅಂದಾಜು ಶೇ.8.4 ರಷ್ಟು ಪಾಲು ನೀಡುತ್ತಿದೆ.  ಇಡೀ ದೇಶದಲ್ಲೇ ಜಿಡಿಪಿ ದೇಣಿಗೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ.

ಪ್ರತಿ ವರ್ಷ ದೇಶದ ಒಟ್ಟು ತೆರಿಗೆ ಆದಾಯಕ್ಕೆ ಕರ್ನಾಟಕ ಸುಮಾರು ರೂ.4 ಲಕ್ಷ ಕೋಟಿಯಷ್ಟು ಪಾಲು ನೀಡುತ್ತಿದ್ದರೂ, ರಾಜ್ಯಕ್ಕೆ ತೆರಿಗೆ ಪಾಲಿನ ರೂಪದಲ್ಲಿ ರೂ.45ಸಾವಿರ ಕೋಟಿ ಹಾಗೂ ಅನುದಾನದ ರೂಪದಲ್ಲಿ ರೂ.15 ಸಾವಿರ ಕೋಟಿ ದೊರಕುತ್ತಿದೆ. ಅಂದರೆ ಕರ್ನಾಟಕ ನೀಡುವ ಪ್ರತಿ ಒಂದು ರೂಪಾಯಿಗೆ ರಾಜ್ಯ ಕೇವಲ 15 ಪೈಸೆಯನ್ನು ಮಾತ್ರ ಹಿಂದಕ್ಕೆ ಪಡೆಯುತ್ತಿದೆ ಎಂದು ವಿವರಿಸಿದರು.

15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನೀಡುವ ಪಾಲು 4.713 ಯಿಂದ 3.647 ಗೆ ತಗ್ಗಿದೆ. ಇದರಿಂದಾಗಿ 2021-26 ರ 5 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ರೂ.68,275 ಕೋಟಿ ನಷ್ಟ ಉಂಟಾಗಿದೆ. ಕರ್ನಾಟಕಕ್ಕೆ ದೊರೆತ ಪಾಲಿನಲ್ಲಿ ಉಂಟಾದ ಇಷ್ಟು ದೊಡ್ಡ ಮೊತ್ತದ ಕಡಿತದ ಬಗ್ಗೆ ಹಣಕಾಸು ಆಯೋಗಕ್ಕೆ ಅರಿವಿದ್ದು, ರಾಜ್ಯಕ್ಕೆ ರೂ.11495 ಕೋಟಿ ನಿರ್ದಿಷ್ಟ ಅನುದಾನ ಒದಗಿಸಲು ಶಿಫಾರಸ್ಸು ಮಾಡಿದೆ. ಆದರೆ ಕೇಂದ್ರ ಸರ್ಕಾರ ಆಯೋಗದ ಈ ಶಿಫಾರಸ್ಸನ್ನು ಒಪ್ಪಿಕೊಂಡಿಲ್ಲ. ಆದ್ದರಿಂದ ಕರ್ನಾಟಕ ಈ ಅನುದಾನ ಪಡೆಯುವಲ್ಲಿಯೂ ವಂಚಿತವಾಗಿದೆ. ಈ ಎಲ್ಲಾ ಕಾರಣಗಳಿಂದ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು ರೂ.79770ಕೋಟಿ ನಷ್ಟ ಉಂಟಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇತರ ರಾಜ್ಯಗಳಿಗೆ ಪ್ರತಿ ವರ್ಷ ರೂ.35 ಸಾವಿರದಿಂದ 40 ಸಾವಿರ ಕೋಟಿಯಷ್ಟು ಇತರ ರಾಜ್ಯಗಳಿಗೆ ಆದಾಯ ವರ್ಗಾವಣೆ ಮಾಡಿರುವುದನ್ನು ಕರ್ನಾಟಕ ಗಮನಿಸಿದೆ. ಇದು ಜಿಎಸ್‌ಡಿಪಿಯ ಶೇ.1.8ರಷ್ಟಿದೆ. ರಾಜ್ಯದಿಂದ ಹೊರಗೆ ವರ್ಗಾವಣೆಯಾಗುತ್ತಿರುವ ಈ ಮೊತ್ತ ರಾಜ್ಯದ ಒಟ್ಟು ಆದಾಯದ ಶೇ.50ರಿಂದ 55ರಷ್ಟಾಗಿದೆ. ಈ ರೀತಿ ಪಾಲಿನ ಪರಿಗಣನೆಯಲ್ಲಿನ ಅಸಮತೋಲನದಿಂದಾಗಿ ಆರ್ಥಿಕವಾಗಿ ಹಾಗೂ ಜನಸಂಖ್ಯೆ ನಿಯಂತ್ರಣ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕ ಹಾಗೂ ಈ ರೀತಿಯ ರಾಜ್ಯಗಳು ದಂಡ ಎದುರಿಸುವಂತಾಗಿದೆ.

ಸೆಸ್‌ ಮತ್ತು ಸರ್ಚಾರ್ಜ್‌ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳುವ ಬಾಬ್ತಿನಲ್ಲಿ ಬರುವುದಿಲ್ಲ. ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರ ಸೆಸ್‌ ಮತ್ತು ಸರ್ಚಾರ್ಜ್‌ ಮೇಲಿನ ಅವಲಂಬನೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಬಂದಿದೆ. ಇದರಿಂದಾಗಿ ಒಟ್ಟು ತೆರಿಗೆ ಆದಾಯಕ್ಕೆ ಅನುಗುಣವಾಗಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಿಕೊಳ್ಳಬಹುದಾದ ಬಾಬ್ತಿನ ಪ್ರಮಾಣ ಹೆಚ್ಚಾಗುತ್ತಿಲ್ಲ. ಇದರಿಂದಾಗಿ ರಾಜ್ಯಗಳಿಗೆ ಬಹಳಷ್ಟು ನಷ್ಟ ಉಂಟಾಗುತ್ತಿದೆ. ಹಂಚಿಕೊಳ್ಳಬಹುದಾದ ಬಾಬ್ತಿನಲ್ಲಿ ಸೆಸ್‌ ಮತ್ತು ಸರ್ಚಾರ್ಜ್ ನಿಂದಾಗಿ ರಾಜ್ಯಕ್ಕೆ 2017-18 ರಿಂದ 2024-25 ನೇ ಅವಧಿಯಲ್ಲಿ ರೂ.53,359ಕೋಟಿ ನಷ್ಟ ಉಂಟಾಗಿದೆ.

ಕೇಂದ್ರ ಸರ್ಕಾರದ ಪಾಲಿನಲ್ಲಿ ಇಷ್ಟೆಲ್ಲಾ ಕಡಿತ ಉಂಟಾಗಿದ್ದರೂ, ರಾಜ್ಯ ಸರ್ಕಾರ ತಾನು ನುಡಿದಂತೆ ಐದು ಗ್ಯಾರಂಟಿಯಂತಹ ಪ್ರಮುಖ ಯೋಜನೆಗಳ ಜಾರಿಯಲ್ಲಿ ಬದ್ಧತೆಯನ್ನು ತೋರಿಸಿದೆ. ಬಂಡವಾಳ ವೆಚ್ಚದಲ್ಲಿ ಸಹ ನಾವು ಯಾವುದೇ ಹೊಂದಾಣಿಕೆಯನ್ನು ಮಾಡಿಲ್ಲ. ಬಂಡವಾಳ ವೆಚ್ಚದಲ್ಲಿ ಹೆಚ್ಚಳ ಉಂಟಾಗಿದ್ದರೂ, ಕರ್ನಾಟಕ 2013-14 ರ ಅವಧಿಯಿಂದಲೂ ಬಂಡವಾಳ ವೆಚ್ಚದ ಮೊತ್ತವನ್ನು ತನ್ನ ಜಿಎಸ್‌ಡಿಪಿಯ ಶೇ.2ರ ಮಿತಿಯಲ್ಲಿಯೇ ನಿರ್ವಹಿಸಿದೆ. ಬಂಡವಾಳ ವೆಚ್ಚದಲ್ಲಿ ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಆದರೆ ಕೇಂದ್ರ ಹಣಕಾಸು ಪಾಲಿನಲ್ಲಿನ ಕಡಿತದಿಂದಾಗಿ ರಾಜ್ಯಗಳಿಗೆ ಭೌತಿಕ ಮತ್ತು ಮಾನವ ಮೂಲಸೌಲಭ್ಯಗಳ ಮೇಲೆ ಹೂಡಿಕೆಗೆ ಅನೇಕ ಮಿತಿಗಳು ಎದುರಾಗಿವೆ. ಈ ವಿಷಯವನ್ನು  ಪರಿಹರಿಸಬೇಕಾಗಿದೆ.

ಆರ್ಥಿಕವಾಗಿ ಬಲಿಷ್ಠವಾಗಿರುವ ರಾಜ್ಯಗಳು ಇತರ ಬಡ ರಾಜ್ಯಗಳಿಗೆ ನೆರವಾಗಲು ಬದ್ಧವಾಗಿವೆ. ಆದರೆ ಇದು ತಮ್ಮದೇ ನಾಡಿನ ಜನರನ್ನು ಅಥವಾ ಆರ್ಥಿಕ ದಕ್ಷತೆಯನ್ನು ಸಂಕಷ್ಟಕ್ಕೆ ಸಿಲುಕಿಸಬಾರದು. ರಾಜ್ಯಗಳು ಗಳಿಸುವ ಸಂಪನ್ಮೂಲದ ಒಂದು ದೊಡ್ಡ ಪಾಲು ಅವುಗಳ ನಡುವೆಯೇ ಹಂಚಿಕೆಯಾಗಬೇಕು. ರಾಜ್ಯವು ಸಹ ಪ್ರಾದೇಶಿಕ ಅಸಮಾನತೆಯನ್ನು ಎದುರಿಸುತ್ತಿವೆ. ಉದಾಹರಣೆಗೆ ಕಲ್ಯಾಣ ಕರ್ನಾಟಕದ ಪ್ರದೇಶ. ಇದರೊಂದಿಗೆ ನಗರೀಕರಣದ ಸವಾಲುಗಳನ್ನು ಎದುರಿಸುತ್ತಿವೆ. ಈ ಕುರಿತು ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾಗಿದೆ.

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ರೂ.55586 ಕೋಟಿ ರೂ. ಬಂಡವಾಳ ಅಗತ್ಯವಿದೆ. ಇದರಲ್ಲಿ ನಾವು ಕೇಂದ್ರದಿಂದ ನಾವು ರೂ.27793 ಕೋಟಿ ಅನುದಾನ ಒದಗಿಸಲು ಮನವಿ ಮಾಡುತ್ತೇವೆ.  ಇದೇ ರೀತಿ ಕಲ್ಯಾಣ ಕರ್ನಾಟಕದ ಅಸಮತೋಲನ ನಿವಾರಣೆ ಮಾಡಲು ರಾಜ್ಯ ರೂ. 25 ಸಾವಿರ ಕೋಟಿ ಹೂಡಿಕೆ ಮಾಡುತ್ತಿದ್ದು, ಇದಕ್ಕೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ 16ನೇ ಹಣಕಾಸು ಆಯೋಗ ರೂ.25 ಸಾವಿರ ಕೋಟಿ ಹೊಂದಾಣಿಕೆ ಅನುದಾನ ಒದಗಿಸಲು ಮನವಿ ಮಾಡುತ್ತೇವೆ. ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟ ವಲಯದಲ್ಲಿ ಪರಿಣಾಮಕಾರಿಯಾಗಿ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಮತ್ತು ಪುನರ್‌ ವಸತಿಯನ್ನು ಖಾತ್ರಿಪಡಿಸಲು ರೂ. 10ಸಾವಿರ ಕೋಟಿ ಅನುದಾನ ಒದಗಿಸಲು ಮನವಿ ಮಾಡುತ್ತೇವೆ ಎಂದರು.

ವಿತ್ತೀಯ ಹಂಚಿಕೆ ವಿಷಯದಲ್ಲಿ ಆಯೋಗಕ್ಕೆ ಈ ಕೆಳಕಂಡ ಶಿಫಾರಸ್ಸುಗಳನ್ನು ಮಾಡಲು ಮನವಿ ಮಾಡುತ್ತೇನೆ. ಹಂಚಿಕೆ ಮಾಡುವ ಬಾಬ್ತಿನಲ್ಲಿ (central divisible pool) ಕನಿಷ್ಟ ಶೇ.50ರಷ್ಟು ಪಾಲನ್ನು ಸಂಬಂಧಿಸಿದ ರಾಜ್ಯಗಳಿಗೆ ನಿಗದಿಪಡಿಸಬೇಕು. ಸೆಸ್‌ ಮತ್ತು ಸರ್ಚಾರ್ಜ್‌ ಒಟ್ಟು ತೆರಿಗೆ ಆದಾಯದ ಶೇ.5ಕ್ಕೆ ಮಿತಿಗೊಳಿಸಬೇಕು.  ಇದಕ್ಕಿಂತ ಹೆಚ್ಚಾಗುವ ಯಾವುದೇ ಮೊತ್ತವನ್ನು ಹಂಚಿಕೊಳ್ಳುವ ಬಾಬ್ತಿಗೆ ಪರಿಗಣಿಸಬೇಕು. ಕೇಂದ್ರ ಸರ್ಕಾರದ ತೆರಿಗೇತರ ಆದಾಯವನ್ನು ಹಂಚಿಕೊಳ್ಳುವ ತೆರಿಗೆ ಬಾಬ್ತಿನ ವ್ಯಾಪ್ತಿಗೆ ತರುವ ಕುರಿತು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಬೇಕು. ಪಾಲಿನ ಹಂಚಿಕೆ ಸಂದರ್ಭದಲ್ಲಿ ದಕ್ಷತೆ ಮತ್ತು ನಿರ್ವಹಣೆಗೆ ಸೂಕ್ತ ಪುರಸ್ಕಾರ ನೀಡುವ ಬಗ್ಗೆ ಆಯೋಗ ದಿಟ್ಟ ನಿಲುವು ತಳೆಯಬೇಕೆಂದು ನಾವು ಮನವಿ ಮಾಡುತ್ತೇವೆ. ಪಾಲಿನ ಹಂಚಿಕೆ ಸಂದರ್ಭದಲ್ಲಿ, ಹಂಚಿಕೊಳ್ಳುವ ಬಾಬ್ತಿನಲ್ಲಿ ರಾಜ್ಯಗಳಿಗೆ ತಮ್ಮ ದೇಣಿಗೆಯ ಶೇ.60ರಷ್ಟನ್ನು ನೀಡಬೇಕೆಂದು ಕರ್ನಾಟಕ ಶಿಫಾರಸು ಮಾಡುತ್ತದೆ.  ಕೇಂದ್ರ ಮತ್ತು ರಾಜ್ಯಗಳ ನಡುವಣ ಆರ್ಥಿಕ ಸಂಬಂಧ ಅತ್ಯಂತ ಮಹತ್ವವಾಗಿರುವ ಇಂದಿನ ಸಂದರ್ಭದಲ್ಲಿ, 16ನೇ ಹಣಕಾಸು ಆಯೋಗ ಮಾಡುವ ಶಿಫಾರಸ್ಸುಗಳು, ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಬಲಿಷ್ಠ ಭಾರತ ನಿರ್ಮಾಣಕ್ಕೆ ಬಲಿಷ್ಠ ಕರ್ನಾಟಕ ನಿರ್ಣಾಯಕವಾಗಿದೆ. ರಾಷ್ಟ್ರೀಯ ಜಿಡಿಪಿ ಮತ್ತು ಒಟ್ಟು ತೆರಿಗೆ ಆದಾಯಕ್ಕೆ ರಾಜ್ಯಗಳು ನೀಡುವ ಉತ್ತಮ ದೇಣಿಗೆ , ದೇಶ ನಿರ್ಮಾಣ ಕಾರ್ಯದಲ್ಲಿ ಅನೇಕ ವಿಧದಲ್ಲಿ ನೆರವಾಗುತ್ತದೆ. ದೇಶದ ನಿರ್ಮಾಣಕ್ಕೆ ಕೊಡುಗೆ ಹೆಮ್ಮೆಯಿಂದ ಕೊಡುಗೆ ನೀಡುತ್ತಿರುವ ಏಳು ಕೋಟಿ ಕನ್ನಡಿಗರು ಆಶೋತ್ತರಗಳನ್ನೂ ಹೊಂದಿದ್ದಾರೆ. ಸಂಪನ್ಮೂಲಗಳ ಹಂಚಿಕೆಯಲ್ಲಿ ಸಮತೋಲಿತ ಮತ್ತು ನ್ಯಾಯಯುತವಾದ ಹಾದಿಯನ್ನು ಆಯೋಗ ಶಿಫಾರಸು ಮಾಡುವುದನ್ನು ಅವರು ಎದುರು ನೋಡುತ್ತಿದ್ದಾರೆ. ಇಂದಿನ ಸಭೆಯಲ್ಲಿ ಫಲಪ್ರದವಾದ ಚರ್ಚೆಯನ್ನು ನಾನು ನಿರೀಕ್ಷಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಹೇಳಿದರು.

Key words: 16th Finance Commission, meeting, CM Siddaramaiah

Tags :
16th Finance CommissionCM Siddaramaiahmeeting
Next Article