ನಮ್ಮ ಸರಕಾರ ಬಂದ ಮೇಲೆ 73,928 ಕೋಟಿ ರೂ. ಅಭಿವೃದ್ಧಿಗೆ ಖರ್ಚು: ಪ್ರತಿಪಕ್ಷಗಳ ಆರೋಪಕ್ಕೆ ಸಿಎಂ ತಿರುಗೇಟು
ಬೆಂಗಳೂರು, ಡಿಸೆಂಬರ್ 17, 2023 (www.justkannada.in): ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಗದಗ್’ನಲ್ಲಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಪೂರ್ಣ ಅವಧಿಯಲ್ಲಿ ಅಭಿವೃದ್ಧಿಗೆ ಖರ್ಚು ಮಾಡಿದ್ದ ಒಟ್ಟು 70,814 ಕೋಟಿ. ನಮ್ಮ ಸರ್ಕಾರ ಮೇ 20 ರಂದು ಅಧಿಕಾರಕ್ಕೆ ಬಂತು. ಜುಲೈನಲ್ಲಿ ಬಜೆಟ್ ಮಂಡನೆಯಾಯಿತು. ಆಗಸ್ಟ್ ನಲ್ಲಿ ಅನುದಾನ ಬಿಡುಗಡೆಯಾಗಿದೆ. ಕೇವಲ 6 ತಿಂಗಳಲ್ಲಿ ನಮ್ಮ ಸರ್ಕಾರ 73,928 ಕೋಟಿ ಅಭಿವೃದ್ಧಿ ಖರ್ಚು ಮಾಡಲಾಗಿದೆ. ಅಲ್ಲಿಗೆ ಯಾರು ಹೆಚ್ಚು ಅನುದಾನ ಕೊಟ್ಟಿದ್ದಾರೆ ಹೇಳಿ ? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಸುಮ್ಮನೆ ಆರೋಪ ಮಾಡೋದಲ್ಲ. ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಕ್ಕೆ ಸಾಕಷ್ಟು ಅನುದಾನ ಕೊಡುತ್ತಿದ್ದೇವೆ. ಇಲ್ಲ ಸಲ್ಲದ ಆರೋಪ ಮಾಡೋದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳನ್ನ ಜಾರಿ ಮಾಡಿ ಉಳಿದ ಒಂದು ಯುವನಿಧಿ ಯೋಜನೆ ಮುಂದಿನ ಜನವರಿಯಲ್ಲಿ ಜಾರಿಯಾಗಲಿದೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಸಿಎಂ ಹೇಳಿದ್ದಾರೆ.
ಜಾತಿ ಗಣತಿ ವರದಿ ಬಿಡುಗಡೆ: ಕಾಂತರಾಜ್ ಜಾತಿ ಗಣತಿ ವರದಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕಾಂತರಾಜ ವರದಿ ಕೊಟ್ಟೇ ಇಲ್ಲ, ಇನ್ನು ಸ್ವೀಕಾರ ಮಾಡೋದು ಹೇಗೆ? ಕೆಲವರು ವಿರೋಧ ಮಾಡುತ್ತಿದ್ದರಲ್ಲ ಅವರಿಗೂ ಗೊತ್ತಿಲ್ಲ. ನನಗೆ ಗೊತ್ತಿಲ್ಲ ಏನಿದೆ ಅಂತ ವರದಿ ಬರಲಿ ನೋಡೋಣ. ನಿಮಗೆ ಗೊತ್ತ ವರದಿಯಲ್ಲೇನಿದೆ ಅಂತ ? ಸುಮ್ಮನೆ ಮಾತನಾಡಿದರೆ ಹೇಗೆ? ವರದಿ ಬರಲಿ ನೋಡೋಣ ಮಾಧ್ಯಮ ಪ್ರತಿನಿಧಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.