For the best experience, open
https://m.justkannada.in
on your mobile browser.

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಬೇಡಿ: ಎಸ್ಇಪಿ ಜಾರಿ ನಿರ್ಧಾರ ಕೂಡಲೇ ಕೈಬಿಡಿ- ಸಿ.ಟಿ ರವಿ ಆಗ್ರಹ.

03:56 PM Dec 01, 2023 IST | prashanth
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಬೇಡಿ  ಎಸ್ಇಪಿ ಜಾರಿ ನಿರ್ಧಾರ ಕೂಡಲೇ ಕೈಬಿಡಿ  ಸಿ ಟಿ ರವಿ ಆಗ್ರಹ

ಮೈಸೂರು,ಡಿಸೆಂಬರ್,1,2023(www.justkannada.in): ಕರ್ನಾಟಕ ಸರ್ಕಾರ ರಾಜ್ಯ ಶಿಕ್ಷಣ ನೀತಿ(SEP) ಹೆಸರಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದೆ. ಎಸ್ ಇಪಿ ಜಾರಿಗೆ ತರಲು ಹೊರಟಿರುವ ನಿರ್ಧಾರ ಈ ಕೂಡಲೇ ಕೈಬಿಡಬೇಕು ಎಂದು ಮಾಜಿ ಸಚಿವ ಸಿ.ಟಿ ರವಿ ಆಗ್ರಹಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಶಿಕ್ಷಣ ಅನ್ನುವುದು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಬೇಕು ಎಂದು ಕರ್ನಾಟಕದವರೇ ಆದ ಕಸ್ತೂರಿ ರಂಗನ್ ನೇತೃತ್ವದಲ್ಲಿ 12 ಜನರ ಸಮಿತಿ ಮಾಡಿ ದೇಶದ ಉದ್ದಗಲಕ್ಕೂ ಜನರ ಅಭಿಪ್ರಾಯ ಸಂಗ್ರಹಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಶಿಫಾರಸು ಮಾಡಿತು. ಆಧುನಿಕ ಸವಾಲು ಎದುರಿಸಲು ವಿವಿಧತೆಯಲ್ಲಿ  ಏಕತೆಯನ್ನು  ಅಳವಡಿಸಿಕೊಂಡು ನಮ್ಮ ಮಕ್ಕಳನ್ನ ಸ್ವಾವಲಂಬಿಯಾಗಿ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಪ್ರಾದೇಶಿಕ ಭಾಷೆ ರಕ್ಷಣೆ ಮಾಡಲು ಮಾತೃಭಾಷೆಯನ್ನು ಅಳವಡಿಸಿಕೊಂಡಿದೆ. ನಮ್ಮ ಮಕ್ಕಳು ಡಿಗ್ರಿ ಪಡೆದು  ನಿರುದ್ಯೋಗಿಗಳಾಗಬಾರದು ಎಂದು ಕೌಶಲ್ಯ ತರಬೇತಿಯನ್ನೂ ಅಳವಡಿಸಿಕೊಂಡಿದೆ. ಕರ್ನಾಟಕ ಎಂದರೆ ಹಲವು ವರ್ಷಗಳಿಂದ ತಮಿಳು, ಕರ್ನಾಟಕ, ಮರಾಠಿ ಕನ್ನಡ  ಜಗಳ ಬಿಟ್ಟು ಭಾಷಾ ಬಾಂಧವ್ಯ ಬೆಳೆಯಲು ಎಲ್ಲಾ ರಾಜ್ಯಗಳಲ್ಲಿ ತಮ್ಮ ಮಾತೃ ಭಾಷೆ ಕಲಿಯಲು ಅವಕಾಶ ಮಾಡಿಕೊಟ್ಟಿದೆ. ಯಾಕೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿದ್ದಾರೆ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಯಾವ ರೀತಿಯಲ್ಲಿ ತಪ್ಪಾಗಿ ಕಾಣುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಬಿಜೆಪಿ ಯವರು ಜಾರಿ ಮಾಡಿದ್ದಾರೆ ಅಂತ ವಿರೋಧಿಸುತ್ತಿದ್ದಾರೋ ಗೊತ್ತಿಲ್ಲ. ಒಂದು ಹೊಸ ಆವಿಷ್ಕಾರದ ಶಿಕ್ಷಣ ನೀತಿಯನ್ನ ವಿರೋಧ  ಮಾಡುತ್ತಿದ್ದಾರೆ. ಎಸ್.ಇ.ಪಿ ಅಂತ ಇವರು ಒಂದು ಕಮಿಟಿ ಮಾಡಿದ್ದಾರೆ. ಅಲ್ಲಿರುವವರು ಅರ್ಧಕ್ಕೆ ಅರ್ಧ ನಮ್ಮ ರಾಜ್ಯದವರೇ ಅಲ್ಲ. ಹೊರ ರಾಜ್ಯದವರನ್ನ ನೇಮಕ ಮಾಡಿಕೊಂಡು ಹೆಸರಿಗೆ ಮಾತ್ರ ಎಸ್.ಇ.ಪಿ ಅಂತ ಮಾಡಿದ್ದಾರೆ. ಮಕ್ಕಳ ಭವಿಷ್ಯದ ಜೊತೆ ಆಟ ಆಡಬೇಡಿ. ಮಕ್ಕಳ ಭವಿಷ್ಯದ ಜೊತೆ ಆಟವಾಡುವ ಅಧಿಕಾರ ನಿಮಗೆ ಯಾರು ಕೊಟ್ಟಿಲ್ಲ.  ಏನು ದಲಿತ, ಹಿಂದುಳಿದ ವರ್ಷಗಳ ನೇತಾರರು ಅಂತ ಕರೆಸಿಕೊಳ್ಳುವ ನೀವು ಸರ್ಕಾರಿ ಶಾಲೆಯಲ್ಲಿ ಓದುವವರು ದಲಿತ,ಹಿಂದುಳಿದ ವರ್ಗದ ಮಕ್ಕಳೆ.  ಬಡ ಮಕ್ಕಳು ಡಿ.ಕೆ ಶಿವಕುಮಾರ್ ಅವರ ಸಂಸ್ಥೆಯಲ್ಲಿ, ಪರಮೇಶ್ವರ ಅವರ ಶಿಕ್ಷಣ ಸಂಸ್ಥೆಯಲ್ಲಿ ಓದಲಿಕ್ಕೆ ಆಗಲ್ಲ. ಇದರಿಂದ ಕರ್ನಾಟಕದ ದಲಿತ, ಹಿಂದುಳಿದ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಮಕ್ಕಳು ಆಧುನಿಕತೆ ತಂತ್ರಜ್ಞಾನ ಕಲಿಯಬೇಕು.  ಎಸ್ ಇಪಿ ಜಾರಿಗೆ ತರಲು ಹೊರಟಿರುವ ನಿರ್ಧಾರ ಈ ಕೂಡಲೇ ಕೈಬಿಡಬೇಕು ಎಂದು ಸಿ.ಟಿ ರವಿ ಒತ್ತಾಯಿಸಿದರು.

 ನೀವೇ ಅಧಿಕಾರದಲ್ಲಿದ್ದಾಗ ವರದಿ ಏಕೆ ಸ್ವೀಕರಿಸಲಿಲ್ಲ.

ಕಾಂತರಾಜು ವರದಿ ಜಾತಿಗಣತಿ ಸಮೀಕ್ಷೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಅವರು 2017 ರಲ್ಲೇ ವರದಿ ಕೊಟ್ಟಿದ್ದಾರೆ. 2017 ರಲ್ಲಿ ಯಾರು ಮುಖ್ಯಮಂತ್ರಿಯಾಗಿದ್ರು.? ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. 2018 ಬಳಿಕ ಕಾಂಗ್ರೆಸ್ ಪ್ರಭಾವ ಇರುವ ಜೆಡಿಎಸ್ ಅಧಿಕಾರದಲ್ಲಿತ್ತು ಯಾಕೆ ನೀವು ವರದಿ ಸ್ವೀಕಾರ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ನನಗೆ ಗೊತ್ತಿರುವ ಪ್ರಕಾರ ಇನ್ನೂ ಒಂದುವರೆ ಕೋಟಿ ಜನರ ಸಮೀಕ್ಷೆಯನ್ನೇ ಮಾಡಿಲ್ಲ ಅನ್ನೋದು ಮಾಹಿತಿ ಇದೆ. ವರದಿ ಕೊಟ್ಟಾಗಿದೆ ಅಂತ ಕಾಂತರಾಜು ಅವರೇ ಹೇಳಿದ್ದಾರೆ. ಯಾಕೆ ವರದಿ ಜಾರಿಗೆ ವಿಳಂಬ ಯಾಕೆ ಮಾಡುತ್ತಾ ಇದ್ದೀರಾ..? ನಿಮ್ಮಲ್ಲೇ ವರದಿ ಬಿಡುಗಡೆಗೆ ಭಿನ್ನಾಭಿಪ್ರಾಯ ಇದೆ. ಜಾತಿ ಜಗಳ ಹಚ್ಚಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿ ಲೋಕಸಭೆಗೆ ಲಾಭ ಪಡೆಯುವ ಸಂಚು ಮಾಡುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.  ಈ ಸಂಶಯವನ್ನು ದೂರ ಮಾಡಬೇಕು. ಯಾರಿಗೆ ಅನ್ಯಾಯವಾಗಿದೆ ಅವರಿಗೆ ನ್ಯಾಯ ಕೊಡುವ ಪಾಲಿಸಿ ತನ್ನಿ. ಜಾತಿ ಜಗಳ ಹೆಚ್ಚುವ ಕೆಲಸ ಮಾಡಬೇಡಿ. ಪ್ರಸ್ತುತ ದಿನಮಾನಗಳಲ್ಲಿ ಕ್ಯಾಸ್ಟ್ ಅಂಡ್ ಕ್ಯಾಸ್ ಇದ್ದರೆ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಮನಸ್ಥಿತಿ ಇದೆ. ಔದ್ಯೋಗಿಕವಾಗಿ ಅವಕಾಶ ವಂಚಿತರನ್ನು ಗುರ್ತಿಸಿ ಒಳ ಮೀಸಲಾತಿ  ಕಲ್ಪಿಸಿಬೇಕು. ಆಗ ಅವರಿಗೆ ನ್ಯಾಯ ಸಿಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕು ಎಂದು ಸಿ.ಟಿ ರವಿ ತಿಳಿಸಿದರು.

ಕೆಟ್ಟ ಸಂಪ್ರದಾಯಕ್ಕೆ ಸಾಂಪ್ರದಾಯಿಕ ನಗರಿ ಮೈಸೂರಿನ‌ ಸಿಎಂ ಒಪ್ಪಿಗೆ ಕೊಟ್ಟಿದ್ದು ಒಂದು ಕರಾಳ ಅಧ್ಯಾಯ.

ಸರ್ಕಾರ ಒಂದು ಕೆಟ್ಟ ಬೆಳವಣಿಗೆ ಸರ್ಕಾರ ಮುಂದಾಗಿದೆ.  ಡಿ.ಕೆ ಶಿವಕುಮಾರ್ ಅವರ ಪ್ರಕರಣವನ್ನು ಹಿಂತೆಗೆದುಕೊಂಡಿದ್ದು ಸಂವಿಧಾನಕ್ಕೆ ಮಾಡಿದ ಅಪಚಾರ.  ಇದು ಕಳ್ಳರ ಕೈಗೆ ಬೀಗ ಕೊಟ್ಟ ಹಾಗೆ ಆಗಿದೆ. ಹಾಗಾದರೆ ನ್ಯಾಯಾಲಯ ಯಾಕೇ ಬೇಕು.? ನಿರಪರಾಧಿಯಾಗಿದ್ದರೆ ಡಿಕೆ ಶಿವಕುಮಾರ್ ತನಿಖೆಗೆ ಯಾಕೆ ಹೆದರಬೇಕು.? ಒಂದು ರಾಂಗ್ ಪ್ರಾಕ್ಟಿಸ್ ಗೆ ಮುನ್ನುಡಿ ಬರೆದಿದ್ದಾರೆ. ಅಧಿಕಾರಕ್ಕೆ ಬಂದಾಗ ಈ ರೀತಿ ಕೇಸ್ ವಾಪಸ್ ತೆಗೆದುಕೊಂಡರೆ ಸಂವಿಧಾನ ಎಲ್ಲಿ ಉಳಿಯುತ್ತೆ. ಕೆಟ್ಟ ಸಂಪ್ರದಾಯಕ್ಕೆ ಸಾಂಪ್ರದಾಯಿಕ ನಗರಿ ಮೈಸೂರಿನ‌ ಸಿಎಂ ಒಪ್ಪಿಗೆ ಕೊಟ್ಟಿದ್ದು ಒಂದು ಕರಾಳ ಅಧ್ಯಾಯ.  ಕೆಟ್ಟ ಸಂಪ್ರದಾಯಕ್ಕೆ ನಾಂದಿ ಆಡಿದ್ದೀರಿ ಎಂದು  ಸರ್ಕಾರದ ವಿರುದ್ಧ ಸಿ.ಟಿ ರವಿ ವಾಗ್ದಾಳಿ ನಡೆಸಿದರು.

Key words: Abandon -decision – implement- SEP -immediately- CT Ravi -mysore

Tags :

.