For the best experience, open
https://m.justkannada.in
on your mobile browser.

ಹೊಸ ತಳಿಗಳ ತ್ವರಿತ ಬೀಜ ವಿತರಣೆಗೆ ಒಡಂಬಡಿಕೆಗೆ ಸಹಿ.

05:25 PM Oct 30, 2023 IST | prashanth
ಹೊಸ ತಳಿಗಳ ತ್ವರಿತ ಬೀಜ ವಿತರಣೆಗೆ ಒಡಂಬಡಿಕೆಗೆ ಸಹಿ

ಬೆಂಗಳೂರು ಅಕ್ಟೋಬರ್,30,2023(www.justkannada.in): ವಿವಿಧ ಬೆಳೆಗಳ ಹೊಸ ತಳಿಗಳ ತ್ವರಿತ ಬೀಜ ವಿತರಣೆ ವಿಷಯಗಳ‌ ಕುರಿತು ಇಂದು ಕರ್ನಾಟಕ ರಾಜ್ಯ ಬೀಜ ನಿಗಮ  ಮತ್ತು ಹೈದರಾಬಾದ್ ನ ಅಂತರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ (ICRISAT)   ಮಹತ್ವದ  ಒಡಂಬಡಿಕೆಗೆ ಸಹಿ‌ ಮಾಡಿವೆ.

ವಿಕಾಸಸೌಧದ ಕೃಷಿ  ಸಚಿವರ ಕೊಠಡಿಯಲ್ಲಿಂದು  ಸಚಿವ  ಚಲುವರಾಯಸ್ವಾಮಿ ಅವರ ಸಮ್ಮುಖದಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಕರ್ನಾಟಕ ರಾಜ್ಯ ಬೀಜ ನಿಗಮ ನಿ., ರಾಜ್ಯ ಸರ್ಕಾರದ  ಅಂಗ ಸಂಸ್ಥೆಯಾಗಿದ್ದು ರೈತರಿಗೆ ಗುಣಮಟ್ಟದ ಬೀಜ ಪೂರೈಕೆ ಮಾಡುವಲ್ಲಿ ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ವರ್ಷಕ್ಕೆ ಸರಾಸರಿ ಮೂರುವರೆ ಲಕ್ಷ ಕ್ವಿಂಟಲ್ ಬೀಜ ಸರಬರಾಜು ಮಾಡುತ್ತಿದ್ದು, ಉತ್ತಮ ಗುಣಮಟ್ಟದ ಬೀಜ ಪೂರೈಕೆ ಸೌಲಭ್ಯಗಳನ್ನು ಹೊಂದಿದೆ.

ICRIST ಒಂದು ಅಂತರಾಷ್ಟ್ರೀಯ ಬೆಳೆ ತಳಿ ಸಂಶೋಧನಾ ಕೇಂದ್ರವಾಗಿದ್ದು ಹೊಸ ತಂತ್ರಜ್ಞಾನದ ಮೂಲಕ ಅರೆ ಶುಷ್ಕ ವಾತಾವರಣಕ್ಕೆ ಹೊಂದಿಕೊಳ್ಳುವ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಪರಿಚಯಿಸುತ್ತಿದೆ. ಈಗಾಗಲೇ ಈ ಸಂಸ್ಥೆಯು ಅಭಿವೃದ್ಧಿಪಡಿಸಿದ ಶೇಂಗಾ, ತೊಗರಿ, ಜೋಳ, ಕಡಲೆ ಮತ್ತು ಸಜ್ಜೆ ತಳಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಚಲಿತದಲ್ಲಿವೆ.

ಈ ಒಡಂಬಡಿಕೆಯಿಂದ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ICRISAT ನ ಹೊಸ ತಳಿಗಳು ಲಭ್ಯವಾಗಲಿದ್ದು ಸಂಸ್ಥೆಯ ಉತ್ಪನ್ನಗಳ ಪಟ್ಟಿ ಬಲಿಷ್ಠವಾಗುತ್ತದೆ. ಇದರಿಂದ ರೈತರಿಗೆ ತೊಗರಿ, ಕಡಲೆ, ಜೋಳ, ಸಜ್ಜೆ, ಮತ್ತು ಸಿರಿಧಾನ್ಯಗಳಲ್ಲಿ ಹೊಸ ಶಕ್ತಿ ವರ್ಧಕ ತಳಿಗಳನ್ನು ಪರಿಚಯಿಸಲು ಅನುಕೂಲವಾಗುತ್ತದೆ. ಈ ಹೊಸ ತಳಿಗಳನ್ನು ಕೆ.ಎಸ್‌.ಎಸ್‌.ಸಿಯ ತಳಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (VRDC) ಧಾರವಾಡದಲ್ಲಿ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಮೌಲ್ಯವೀಕರಣ ಮಾಡಿ ವಿವಿಧ ಬೆಳೆಗಳಲ್ಲಿ ಹೊಸ ತಳಿ ಬಿಡುಗಡೆ ಮಾಡಲು ಸಹಾಯವಾಗುತ್ತದೆ.

ಒಟ್ಟಾರೆ ಮೂರು ವರ್ಷಗಳ ಒಡಂಬಡಿಕೆಯ ಅವಧಿಯಲ್ಲಿ, ಬರ ಮತ್ತು ರೋಗ ನಿರೋಧಕ ತಳಿಗಳನ್ನು  ರಾಜ್ಯದ ರೈತರಿಗೆ ತ್ವರಿತವಾಗಿ ತಲುಪಿಸಲು ಉಪಯೋಗವಾಗುತ್ತದೆ. ಹಾಗೂ ಈ ಬೆಳೆಗಳಲ್ಲಿ ರಾಜ್ಯದ ಸರಾಸರಿ ಉತ್ಪಾದಕತೆಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ.

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ, ಹೆಚ್.ಎಸ್.ದೇವರಾಜ,   ಹೈದರಾಬಾದ್ ನ ICRISAT ನ ಉಪ ಮಹಾ ನಿರ್ದೇಶಕರಾದ ಡಾ. ಅರವಿಂದ ಕುಮಾರ್ ಅವರು ಈ ಒಡಂಬಡಿಕೆಗೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬು ಕುಮಾರ್, , ಕೃಷಿ ಇಲಾಖೆ ಆಯುಕ್ತರಾದ  ವೈ.ಎಸ್.ಪಾಟೀಲ, ಕೃಷಿ‌ ನಿರ್ದೇಶಕರಾದ ಡಾ.ಜಿ.ಟಿ.ಪುತ್ರ,  ವಿ.ಆರ್.ಡಿ.ಸಿ,  ಮುಖಸ್ಥರಾದ  ಡಾ. ವಿ.ಎಸ್. ಸಂಗಮ, ಧಾರವಾಡ ಹಾಗೂ ICRIST ನ ಮುಖ್ಯ ಸಂಶೋಧಕರಾದ  ಡಾ. ಪ್ರಕಾಶ ಗಂಗಶೆಟ್ಟಿ, ಡಾ.ಅಶೋಕ ಕುಮಾರ್ ಇವರು ಉಪಸ್ಥಿತರಿದ್ದರು.

Key words: Agreement -signed  -seed -distribution -new varieties-minister- chaluvarayaswamy

Tags :

.