For the best experience, open
https://m.justkannada.in
on your mobile browser.

ನಾನು ಕಂಡ ಕಾನೂನಿನ ಧೃವತಾರೆ - ಕಾನೂನು ತಜ್ಞ ಜಿ ವೈ ಅಜ್ಜಪ್ಪ

02:57 PM Jun 04, 2024 IST | mahesh
ನಾನು ಕಂಡ ಕಾನೂನಿನ ಧೃವತಾರೆ   ಕಾನೂನು ತಜ್ಞ ಜಿ ವೈ ಅಜ್ಜಪ್ಪ

MYSORE: ಜಿ ವೈ ಅಜ್ಜಪ್ಪ  ಈ ಹೆಸರು ಕೇಳಿದರೆ ಕಾನೂನು ಅಂಗಳದಲ್ಲಿ ವಿಶೇಷ ಗೌರವ. ಹೌದು ಮೂಲತಃ ದಾವಣಗೆರೆ ಜಿಲ್ಲೆ ಡಿ ದುರ್ಗದ ಜಿ ವೈ ಅಜ್ಜಪ್ಪ ಕಾನೂನು ಕ್ಷೇತ್ರದ ಪಿತಾಮಹಾ ಅಂದರೂ ತಪ್ಪಾಗಲಾರದು. ಕಾನೂನಿನ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದ್ದ ಅಜ್ಜಪ್ಪ ಈಗ ನೆನಪು.

ಸೋಮವಾರ 03/06/2024 ಬೆಳಗ್ಗೆ ತಮ್ಮ 95ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಅತ್ಯಂತ ಶಿಸ್ತಿನ ಸಿಪಾಯಿಯಾಗಿದ್ದ ಅಜ್ಜಪ್ಪ ಅಂತಿಮ ದಿನದವರೆಗೂ ಸ್ವಾವಲಂಬಿಯಾಗಿ ಬದುಕಿದ್ದರು. 95ನೇ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಾಗಿದ್ದರು. ಸಾಯುವ ಕೊನೆಯ ಕ್ಷಣದವರೆಗೂ ಕಾನೂನು ವಿಚಾರವಾಗಿ ಯಾರು ಏನೇ ಕೇಳಿದರು ಅದಕ್ಕೊಂದು ಸಲಹೆ ಸೂಕ್ತ ಪರಿಹಾರ ನೀಡುತ್ತಿದ್ದರು. ನಾನು ಪ್ರತಿ ಬಾರಿ ಅವರನ್ನು ಭೇಟಿಯಾದಗಲೂ ಹೊಸದೊಂದು ಕಲಿಯುವ ಅವಕಾಶ ನನಗೆ ಸಿಗುತಿತ್ತು. ಪ್ರತಿ ಬಾರಿಯೂ ಅದೇ ಆತ್ಮೀಯತೆ ಪ್ರೀತಿ ಅವರಲ್ಲಿತ್ತು.

ಕಾನೂನು ತಜ್ಞ ಅಜ್ಜಪ್ಪ

ಕಾನೂನಿನ ಆಳ‌ ಅಗಲವನ್ನು ಅರಿತಿದ್ದ ಅಜ್ಜಪ್ಪ ಹತ್ತಾರು ಪ್ರತಿಷ್ಠಿತ ವಿ ವಿಗಳನ್ನು ಕೆಲಸ ನಿರ್ವಹಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮೈಸೂರಿನ ಜೆ ಎಸ್ ಎಸ್ ಕಾನೂನು ಕಾಲೇಜು ಕೆಐಐಟಿ ಕಾನೂನು ಕಾಲೇಜು, ಧಾರವಾಡ ಕಾನೂನು ಕಾಲೇಜು, ಯುಜಿಸಿ ಸೇರಿ ಹಲವು ಕಡೆ ಸೇವೆ ಸಲ್ಲಿಸಿದ್ದಾರೆ.  ಅಷ್ಟೇ ಅಲ್ಲ ಕಾನೂನು ವಿಚಾರಕ್ಕೆ ಸಂಬಂಧಪಟ್ಟಂತೆ ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ. ಇದು ಕಾನೂನ ಕಲಿಯವವರಿಗೆ ಅತ್ಯಂತ ಸಹಕಾರಿಯಾಗಿದೆ. ಇನ್ನು ಅಜ್ಜಯ್ಯ ಅಪಾರ ಜ್ಞಾನ ಸಂಪತ್ತು ಹೊಂದಿದ್ದ ಅವರು ಅತ್ಯಂತ ಸರಳವಾಗಿದ್ದರು. ಕಾನೂನು ವಿಚಾರದಲ್ಲಿ ಯಾರು ಏನೇ ಕೇಳಿದರು ತಮ್ಮ ಜ್ಞಾನ ಭಂಡಾರದಿಂದ ಸಲಹೆ ಸೂಚನೆ ನೀಡಿ‌ ಮಾರ್ಗದರ್ಶನ ಮಾಡುತ್ತಿದ್ದರು.

ಸಾವಿನ ಹಿಂದಿನ ದಿನವೂ ಲವಲವಿಕೆಯಿಂದ ಇದ್ದ ಅಜ್ಜಪ್ಪ

ಅಜ್ಜಪ್ಪ ಅವರ ಜೀವನ ಉತ್ಸಾಹ ಎಲ್ಲರಿಗೂ ಮಾದರಿ. ಅವರು ಸೋಮವಾರ ಕೊನೆಯುಸಿರೆಳೆದರು. ಭಾನುವಾರ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೃಷ್ಣ ದೀಕ್ಷಿತ್ ಅವರು ಅಜ್ಜಪ್ಪ ಅವರ ಆರೋಗ್ಯ ವಿಚಾರಿಸಲು ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಅಜ್ಜಪ್ಪ ತುಂಬಾ ಲವಲವಿಕೆಯಿಂದ ಮಾತನಾಡಿಸಿದರು. ಕಾನೂನು ವಿಚಾರವಾಗಿ ಸುದೀರ್ಘವಾಗಿ ಚರ್ಚೆ ಮಾಡಿದರು. ಇಳಿ ವಯಸ್ಸಿನಲ್ಲೂ ಅವರ ನೆನಪಿನ ಶಕ್ತಿ ಅವರ ಜ್ಞಾನ ಪಾಂಡಿತ್ಯ ಎಳ್ಳಷ್ಟು ಕಡಿಮೆಯಾಗಿರಲಿಲ್ಲ. ಅದೇ ಉತ್ಸಾಹ ಅದೇ ಹುರುಪು ಅವರಲ್ಲಿತ್ತು.

ಸ್ವಾಭಿಮಾನಿ ಪ್ರಾಮಾಣಿಕ ಅಜ್ಜಪ್ಪ - ನನ್ನ ಸ್ವ ಅನುಭವ.

ಅಜ್ಜಪ್ಪ ಎಂದು ಯಾವತ್ತು ತಮ್ಮ ಜ್ಞಾನದ ಬಗ್ಗೆ ಅಹಂಕಾರ ಹೊಂದಿರಲಿಲ್ಲ. ಅದನ್ನು ದುರ್ಬಳಕೆ ಮಾಡಿಕೊಂಡವರಲ್ಲ. ಆಸ್ತಿ ಹಣಕ್ಕಾಗಿ ಆಸೆ ಪಟ್ಟವರಲ್ಲ. ಅವರು ಎಷ್ಟು ಸ್ವಾಭಿಮಾನಿಯಾಗಿದ್ದರು ಎಂಬುದಕ್ಕೆ ಆ  ಒಂದು ಘಟನೆ ಸಾಕ್ಷಿ. ಅದು ಇತ್ತೀಚೆಗೆ ನಡೆದ ಘಟನೆ. ಅಜ್ಜಪ್ಪ ಅವರಿಗೆ ಅವರ ಸಂಬಂಧಪಟ್ಟ ಒಂದು ಸರ್ಟಿಫಿಕೇಟ್ ಅವಶ್ಯಕತೆ‌ ಇತ್ತು. ಆದರೆ ಅವರಿಗೆ ಮನೆಯಿಂದ ಬರಲು ಸಾಧ್ಯವಾಗದ ಪರಿಸ್ಥಿತಿಯಿತ್ತು‌. ಈ ವೇಳೆ ನನಗೆ ಕರೆ ಮಾಡಿ ವಿಚಾರ ತಿಳಿಸಿದರು. ತಕ್ಷಣ ನಾನು ಸಂಬಂಧಪಟ್ಟವರಿಗೆ ವಿಚಾರ ತಿಳಿಸಿ ಅವರನ್ನು ನಾನೇ ಖುದ್ದು ಅಜ್ಜಪ್ಪ ಅವರ ಮನೆಗೆ ಕರೆದುಕೊಂಡು ಹೋಗಿ ಕಾನೂನಾತ್ಮಕವಾಗಿ ನಿಯಮಾನುಸಾರ ಶುಲ್ಕವನ್ನು ನಾನೇ ಪಾವತಿಸಿ ಅವರಿಗೆ ಅಗತ್ಯವಿದ್ದ ದಾಖಲಾತಿಗಳನ್ನು ಕೊಡಿಸಿದೆ. ಈ ವೇಳೆ ಅದರ ಶುಲ್ಕದ ಹಣವನ್ನು ನಾನು ಅಜ್ಜಪ್ಪ ಅವರಿಂದ ತೆಗೆದುಕೊಂಡಿರಲಿಲ್ಲ. ಅಜ್ಜಪ್ಪ ಈ ಬಗ್ಗೆ ಸಾಕಷ್ಟು ಬಾರಿ ಹೇಳಿದರು ನಾನು ಇರಲಿ ಬಿಡಿ ಸರ್ ಅಂತಾ ಸುಮ್ಮನಾಗಿದ್ದೆ. ಆದ್ರೆ ಅಜ್ಜಪ್ಪ ಮಾತ್ರ ಅದನ್ನು ಬಿಡಲಿಲ್ಲ. ಹಿರಿಯರಾದ ಅಜ್ಜಪ್ಪರಿಂದ ಹಣ ಪಡೆಯಬಾರದು ಅಂತಾ ನಾನು ನಿರ್ಧರಿಸಿದ್ದೆ. ಆದ್ರೆ ಅಜ್ಜಪ್ಪ ಮಾತ್ರ ಆ ಹಣವನ್ನು ನನಗೆ ತಲುಪಿಸಿದ ರೀತಿ ನಿಜಕ್ಕೂ ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿತು. ಅದೊಂದು ದಿನ ಅಜ್ಜಪ್ಪ ಅವರು ನನಗೆ ಕರೆ ಮಾಡಿ ಅರ್ಜೆಂಟ್ ಆಗಿ ಮನೆಗೆ ಬರುವಂತೆ ತಿಳಿಸಿದರು. ತಕ್ಷಣ ನಾನು ಅವರ ಮನೆಗೆ ಹೋದೆ. ಮನೆಗೆ ಹೋದ ತಕ್ಷಣ ಅವರು ನನ್ನ ಕೈಗೆ ಒಂದು ಹಣವಿದ್ದ ಕವರ್ ನೀಡಿದರು. ನನಗೆ ಏನೂ ಅರ್ಥವಾಗಲಿಲ್ಲ. ಅಷ್ಟರಲ್ಲಿ ಅಲ್ಲ ಅಲ್ಲೇ ಇದ್ದ ತಮ್ಮ ಮನೆಯ ಕೆಲಸದ ಹುಡುಗಿಗೆ ಆ ಕವರ್ ಕೊಡುವಂತೆ ನನಗೆ ಹೇಳಿದರು. ನನಗೆ ಏನು ಅರ್ಥವಾಗುತ್ತಿರಲಿಲ್ಲ. ಆದರೂ ಅಜ್ಜಪ್ಪ ಅವರು ಹೇಳಿದಂತೆ ಹಣದ ಕವರ್‌ನ್ನು ಆ ಹುಡುಗಿಗೆ ಕೊಟ್ಟೆ. ಆ ಹುಡುಗಿ ಅಲ್ಲಿಂದ ಹೋದರು. ಸ್ವಲ್ಪ ಸಮಯದ ನಂತರ ಅಜ್ಜಪ್ಪ ಅವರೇ ನನ್ನ ಕಡೆ ತಿರುಗಿ, ವೆಂಕಟೇಶ್ ಆ ಹುಡುಗಿ ನಮ್ಮ ಮನೆಯಲ್ಲಿ ಕೆಲಸ ಮಾಡುವ ಹುಡುಗಿ. ಆಕೆಗೆ ತುರ್ತಾಗಿ ಹಣದ ಅವಶ್ಯಕತೆಯಿತ್ತು. ನೀವು ಆ ಸರ್ಟಿಫಿಕೇಟ್‌ಗೆ ನೀಡಿದ ಹಣ ನನ್ನ ಬಳಿಯೇ ಇತ್ತು. ನೀವಂತೂ ಎಷ್ಟು ಸಾರಿ ಹೇಳಿದರು ತೆಗೆದುಕೊಳ್ಳಲಿಲ್ಲ‌. ಹೀಗಾಗಿ ಆ ಹಣವನ್ನು ಅವಶ್ಯಕತೆಯಿದ್ದ ಆಕೆಗೆ ನಿಮ್ಮ ಕೈಲಿ ಕೊಡಿಸಿದೆ ಅಂತಾ ಹೇಳಿದರು‌. ನಾನು ಬೆಕ್ಕಸ ಬೆರಗಾಗಿ ಪೂಜ್ಯ ಭಾವನೆಯಿಂದ ಅವರನ್ನೇ ನೋಡುತ್ತಾ ನಿಂತೆ. ಇದು ಅಜ್ಜಪ್ಪ ಅವರ ಸ್ವಾಭಿಮಾನಕ್ಕೆ ಹಿಡಿದ ಕೈಗನ್ನಡಿ.

ಅಜ್ಜಪ್ಪ ಅವರ ಸಾವು ಕಾನೂನು‌ ಲೋಕಕ್ಕೆ ಅಪಾರ ನಷ್ಟ

ಹೌದು ಅಜ್ಜಪ್ಪ ಅವರ ಸಾವು ಕಾನೂನು ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಹಿರಿಯ ಕಿರಿಯ ವಕೀಲರಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದ ಅಜ್ಜಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಶಿಷ್ಯವೃಂದಕ್ಕೆ ಸ್ನೇಹಿತರಿಗೆ ಬಂಧುಗಳಿಗೆ ಕುಟುಂಬದವರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಆ ಭಗವಂತ ಕರುಣಿಸಲಿ. ಓಂ ಶಾಂತಿ.

  • ಹೆಚ್ ಎನ್ ವೆಂಕಟೇಶ್ , ಹಿರಿಯ ವಕೀಲರು,  ಗೌರವ ಸಂಪಾದಕರು ಲಾ ಗೈಡ್ ಕನ್ನಡ  ಕಾನೂನು ಮಾಸಪತ್ರಿಕೆ,  ಮೈಸೂರು. ಮೊಬೈಲ್ : 9448323246

Key words: Ajjappa, law expert, Mysore, H.N.Venkatesh

Tags :

.