For the best experience, open
https://m.justkannada.in
on your mobile browser.

ಜನಸ್ಪಂದನ ಕಾರ್ಯಕ್ರಮದಲ್ಲಿ 108 ಅರ್ಜಿಗಳು ಸ್ವೀಕಾರ: ಸಮಸ್ಯೆಗಳ ಪರಿಹಾರಕ್ಕೆ  ಒಂದು ವಾರದ ಗಡುವು

05:25 PM Jun 20, 2024 IST | prashanth
ಜನಸ್ಪಂದನ ಕಾರ್ಯಕ್ರಮದಲ್ಲಿ 108 ಅರ್ಜಿಗಳು ಸ್ವೀಕಾರ  ಸಮಸ್ಯೆಗಳ ಪರಿಹಾರಕ್ಕೆ  ಒಂದು ವಾರದ ಗಡುವು

ಮೈಸೂರು ಜೂನ್, 20,2024 (www.justkannada.in): ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಇಂದು ನಡೆದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, 108 ಅರ್ಜಿಗಳನ್ನು ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಖುದ್ದು ಸ್ವೀಕರಿಸಿ, ಒಂದು ವಾರದ ಒಳಗೆ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸಬೇಕು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಸಾರ್ವಜನಿಕರಿಂದ ಸ್ವೀಕರಿಸಲಾಗಿದ್ದ ಕುಂದು-ಕೊರತೆಗಳ ಅರ್ಜಿಯನ್ನು ಪರಿಶೀಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ,  ಕೆಲವು ಸ್ಮಶಾನಗಳನ್ನು ಕೆರೆಗಳಾಗಿ ಮಾರ್ಪಾಡು  ಮಾಡಲಾಗಿದ್ದು ಅಂತಹ ಸ್ಮಶಾನಗಳಿಗೆ ಪರ್ಯಾಯ ಸ್ಥಳವನ್ನು ನಿಗದಿ ಮಾಡಿ ಕೆರೆಯನ್ನು ರಕ್ಷಿಸುವ ಕೆಲಸ ಆಗಬೇಕು. ಯಾವುದೇ ಸರ್ಕಾರಿ ಕಟ್ಟಡಗಳನ್ನು ಕೆಡವಲು ಮಾಡುವ ಮೊದಲು ಕಟ್ಟಡದ ಕುಂದು ಕೊರತೆಯನ್ನು ತಿಳಿಸಿ ತಾಂತ್ರಿಕ ಇಲಾಖೆಯಿಂದ ಅನುಮತಿಯನ್ನು ಪಡೆದು ನಂತರದಲ್ಲಿ ಕೆಡವಲು ಮುಂದಾಗಬೇಕು ಎಂದು ಸೂಚಿಸಿದರು.

ಧಾರಾಕಾರ ಮಳೆಯಿಂದ ಹಾನಿಯಾಗಿ ನಷ್ಟ ಅನುಭವಿಸಿದ್ದ ಸಾರ್ವಜನಿಕರಿಗೆ ಈಗಾಗಲೇ  ಸಹಾಯಧನವನ್ನು ತಲುಪಿಸುವ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಸಹಾಯಧನ ಅರ್ಹ ಸಾರ್ವಜನಿಕರಿಗೆ ತಲುಪಲಿದೆ ಎಂದು ಹೇಳಿದರು.

ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ, ವಿಧವೆಯರು, ವೃದ್ಧರು ಹಾಗೂ ವಿಶೇಷಚೇತನರಿಗೆ ಸಂಬಂಧಿಸಿದ ಪಿಂಚಣಿ  ದೊರೆಯುವಂತೆ ಸಂಬಂಧ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.

ಮೈಸೂರು ಜಿಲ್ಲೆಯ ಸ್ವಚ್ಛತೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತುರ್ತಾಗಿ ಕ್ರಮವಹಿಸಬೇಕು ಹಾಗೂ ಸಾರ್ವಜನಿಕರಿಗೆ ಯಾವುದೇ ಸರ್ಕಾರಿ ಯೋಜನೆಯನ್ನು  ನೀಡುವುದಕ್ಕೂ ಮೊದಲು ಅಗತ್ಯ ದಾಖಲೆಗಳನ್ನು ಕೂಲಂಕುಶವಾಗಿ  ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ  ಯೋಜನೆಗಳು ದೊರಕುವಂತೆ ಮಾಡಬೇಕು ಎಂದು ತಿಳಿಸಿದರು.

ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವ  ಮೈಸೂರು ಅಭಿವೃದ್ಧಿಯ ಕಾರ್ಯಗಳಿಂದ  ರಾಜ್ಯಕ್ಕೆ ಮಾದರಿಯಾಗಬೇಕು. ಯಾವುದೇ ಸಮಸ್ಯೆಯಾದರೂ ಸಹ ದೀರ್ಘಾವಧಿಯವರೆಗೆ  ಮುಂದುವರೆಯದಂತೆ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು. ಈ ವಿಷಯವಾಗಿ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಇರುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎಲ್ಲಾ ಅಧಿಕಾರಿಗಳು ತಮ್ಮ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿದರೆ ಸಮಸ್ಯೆಗಳನ್ನು ಬೇಗನೆ ಬಗೆಹರಿಸಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬ ಅಧಿಕಾರಿಯು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಇಲ್ಲವಾದರೆ ಮುಂದಿನ ಪರಿಣಾಮಕ್ಕೆ ಸ್ವತಃ ಅಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ, ವಿಧಾನ ಪರಿಷತ್ ಸದಸ್ಯ  ಸಿ.ಎನ್ ಮಂಜೇಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಶಾಸಕ ಕೆ. ವಿವೇಕಾನಂದ, ಜಿಲ್ಲಾ ಪಂಚಾಯತ್  ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ. ಎಂ ಗಾಯತ್ರಿ, ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Key words: applications, received, Janaspanda program, mysore

Tags :

.