ಅತಿರೇಕಕ್ಕೆ ಅವಕಾಶ ನೀಡದೇ ವಸ್ತುನಿಷ್ಠವಾಗಿ ಕಾರ್ಯನಿರ್ವಹಿಸುತ್ತಿರುವ ‘ಜಸ್ಟ್ ಕನ್ನಡ’ ಇತರರಿಗೆ ಮಾದರಿ-ಡಾ.ಯತೀಂದ್ರ ಸಿದ್ದರಾಮಯ್ಯ ಶ್ಲಾಘನೆ.
ಮೈಸೂರು,ಡಿಸೆಂಬರ್,14,2023(www.justkannada.in): ಕನ್ನಡ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಹದಿಮೂರು ವಸಂತಗಳನ್ನು ಪೂರೈಸಿರುವ ಜಸ್ಟ್ ಕನ್ನಡ ಸುದ್ದಿ ತಾಣದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.
ಕುವೆಂಪುನಗರದ ಪಿ ಆಂಡ್ ಟಿ ಬ್ಲಾಕ್’ನ ಮಹರ್ಷಿ ದಯಾನಂದ ಸರಸ್ವತಿ ರಸ್ತೆಯಲ್ಲಿರುವ ನೂತನ ಕಚೇರಿಯನ್ನು ಮಾಜಿ ಶಾಸಕರು, ಕೆಡಿಪಿ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಸ್.ಸಪ್ನ ಉದ್ಘಾಟಿಸಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಡಾ.ಯತೀಂದ್ರ ಸಿದ್ದರಾಮಯ್ಯ, ಆ ಕ್ಷಣದ ಸುದ್ದಿಗಳನ್ನು ಅಂದೇ ಸಮರ್ಪಕವಾಗಿ ಓದುಗರಿಗೆ ತಲುಪಿಸುತ್ತಿರುವ ಜಸ್ಟ್ ಕನ್ನಡ ತಂಡದ ಕಾರ್ಯವನ್ನು ಶ್ಲಾಘಿಸಿದರು.
ಸೋಷಿಯಲ್ ಮೀಡಿಯಾ ಕಾಲದಲ್ಲಿ ಯಾವುದೇ ಅತಿರೇಕಕ್ಕೆ ಅವಕಾಶ ನೀಡದೇ ವಸ್ತುನಿಷ್ಠವಾಗಿ ಕಾರ್ಯನಿರ್ವಹಿಸುತ್ತಿರುವ ಜಸ್ಟ್ ಕನ್ನಡ ಇತರರಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ಹಲವಾರು ವರ್ಷಗಳಿಂದ ಜಸ್ಟ್ ಕನ್ನಡ ಸುದ್ದಿ ತಾಣವನ್ನು ನೋಡುತ್ತಾ ಬರುತ್ತಿದ್ದೇನೆ. ವಸ್ತುನಿಷ್ಠ ವರದಿ ಹಾಗೂ ಜನರಿಗೆ ಬೇಕಾದ ಉತ್ತಮ ಸುದ್ದಿಗಳನ್ನು ನೀಡುವುದರಲ್ಲಿ ಜಸ್ಟ್ ಕನ್ನಡ ಸದಾ ಮುಂದು ಎಂದು ಹೇಳಿದರು.
ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಸ್.ಸಪ್ನ ಮಾತನಾಡಿ, 13 ವರ್ಷಗಳಿಂದ ಜಸ್ಟ್ ಕನ್ನಡ ಮಾದರಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ಓದುಗರಿಗೆ ಅಗತ್ಯವಾದ ಸುದ್ದಿ-ಮಾಹಿತಿಯನ್ನು ಶೀಘ್ರವಾಗಿ ನೀಡುತ್ತಿದೆ ಎಂದರು.
ಜಸ್ಟ್ ಕನ್ನಡ ಸುದ್ದಿತಾಣದ ಸಂಪಾದಕ ಕೊಳ್ಳೇಗಾಲ ಮಹೇಶ್, ಯೆಸ್ ಟೆಲ್ ಸುದ್ದಿವಾಹಿನಿ ಸ್ಥಾಪಕ ಕೆ. ಮಂಜುನಾಥ್, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್, ಎಚ್.ಎ. ವೆಂಕಟೇಶ್, ಹಿರಿಯ ವಕೀಲ, ಲಾಗೈಡ್ ಸಂಪಾದಕ ಎಚ್.ಎನ್.ವೆಂಕಟೇಶ್, ಮೈಸೂರು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಉಮೇಶ್, ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಕೆ.ಶಿವರಾಂ, ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ, ಹಿರಿಯ ವಕೀಲರಾದ ಆ.ಮಾ.ಭಾಸ್ಕರ್, ಹಿರಿಯ ಪತ್ರಕರ್ತರಾದ ಎಂ.ಬಿ.ಮರಮ್ಕಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Key words: Appreciation - Dr. Yatindra Siddaramaiah - role model -Just Kannada