For the best experience, open
https://m.justkannada.in
on your mobile browser.

ಅರುಣ್ ಶಹಾಪುರ ರಿಂದ ಕಾಂಗ್ರೆಸ್ ಬಗ್ಗೆ ಹಗುರ ಮಾತು: ಶಿಕ್ಷಕರ ಗಮನ ಸೆಳೆಯುವ ವಿಫಲ ಪ್ರಯತ್ನ- ಹೆಚ್.ಎ ವೆಂಕಟೇಶ್.

11:23 AM May 17, 2024 IST | prashanth
ಅರುಣ್ ಶಹಾಪುರ ರಿಂದ ಕಾಂಗ್ರೆಸ್ ಬಗ್ಗೆ ಹಗುರ ಮಾತು  ಶಿಕ್ಷಕರ ಗಮನ ಸೆಳೆಯುವ ವಿಫಲ ಪ್ರಯತ್ನ  ಹೆಚ್ ಎ ವೆಂಕಟೇಶ್

ಮೈಸೂರು,ಮೇ,17,2024 (www.justkannada.in): ವಾಯುವ್ಯ ಶಿಕ್ಷಕರ ಕ್ಷೇತ್ರದ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಅವರು ಅತ್ಯಂತ ಪ್ರಜ್ಞಾವಂತ ರಾಜಕಾರಣಿ ಎಂದು ಭಾವಿಸಿದ್ದೆ ಆದರೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ತಮ್ಮ 2022ರ ಸೋಲಿನ ಹತಾಶೆ ಭಾವನೆಯಿಂದ ಇನ್ನೂ ಸಹ ಹೊರಬರದೇ ಸಂವೇದನ ಶೀಲತೆ ಕಳೆದುಕೊಂಡು ಸುಳ್ಳು ಹೇಳುವ ಮೂಲಕ ಮೈಸೂರಿನ ಪ್ರಜ್ಞಾವಂತ ಶಿಕ್ಷಕರ ಗಮನ ಸೆಳೆಯುವ ವಿಫಲ ಪ್ರಯತ್ನ ನೆಡೆಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದರು.

ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಮೊನ್ನೆ ದಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡ ರವರು ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ಹಾಸನ, ಚಾಮರಾಜನಗರ, ಮಂಡ್ಯ,ಮೈಸೂರು ಜಿಲ್ಲೆಯ ಸಚಿವರುಗಳು, ಶಾಸಕರುಗಳು,ಮಾಜಿ ಶಾಸಕರುಗಳು, ಪಕ್ಷದ ವಿವಿಧ ಮುಖಂಡರುಗಳು, ಶಿಕ್ಷಕ ಸಂಘದ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು,ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮರಿತಿಬ್ಬೇಗೌಡರ ಅಭಿಮಾನಿಗಳು, ಹಿತೈಷಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದನ್ನು ಕಂಡು ಹತಾಶರಾಗಿದ್ದಾರೆ.

ಬಿಜೆಪಿಯ ಕೇಂದ್ರ ಸಂಸದೀಯ ಚುನಾವಣೆ ಸಮಿತಿಯಿಂದ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಎನ್ ಡಿ ಎ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದವರನ್ನು ನಾಮಪತ್ರ ಸಲ್ಲಿಸಿ  ಹಿಂಪಡೆಯಲು  ಸೂಚಿಸಿರುವುದು ಬಿಜೆಪಿಯವರ ರಾಜಕೀಯ ಅರಾಜಕತೆಗೆ ಇಡಿದ ಕೈಗನ್ನಡಿ ಯಾಗಿದೆ .ಬಿಜೆಪಿಯವರ ಆಡಳಿತಾವಧಿಯಲ್ಲಿ ಭ್ರಷ್ಟಾಚಾರದ ಬ್ರಹ್ಮಾಂಡವೇ ನಡೆದಿತ್ತು. ಪ್ರತಿಷ್ಠಿತ ವಿಶ್ವವಿದ್ಯಾಲಯದ ಕುಲಪತಿಗಳಂತಹ ಗೌರವಯುತ ಹುದ್ದೆಗಳನ್ನು ಹರಾಜಿಗೆ ಇಟ್ಟಿದಂತಹ ದಿನಗಳನ್ನು ಜನ ಮರೆತಿಲ್ಲ.ಅಂತಹ ಪಕ್ಷದ ಅರುಣ್ ಶಹಾಪುರ ರವರು ಕಾಂಗ್ರೆಸ್ ಪಕ್ಷದಿಂದ ಶಿಕ್ಷಣ ಕ್ಷೇತ್ರ ಹಾಳಾಗಿದೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳನ್ನು ಈಡೇರಿಸುವಂತಹ ಪಕ್ಷ. ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸಿಗಬೇಕು ಎಂಬ ನೀತಿಯನ್ನು ರೂಪಿಸಿದ್ದು ಕಾಂಗ್ರೆಸ್. ರಾಜ್ಯದ ಶಿಕ್ಷಣ ನೀತಿಯ ಗುಣಮಟ್ಟವನ್ನು ಹೆಚ್ಚಿಸಲು ಕಾಂಗ್ರೆಸ್ ಸರ್ಕಾರ ಸದಾ ಬದ್ಧವಾಗಿದೆ. ನಮ್ಮ ರಾಜ್ಯದ ಮಕ್ಕಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಸಿದ್ಧಗೊಳಿಸಲು ಯೋಜನೆಗಳನ್ನು ರೂಪಿಸಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸರ್ಕಾರ ಚಿಂತನೆ ನೆಡೆಸಿದೆ. ನಮ್ಮ ಕರ್ನಾಟಕ ಶಿಕ್ಷಣ ದೇಶಕ್ಕೆ ಮಾದರಿಯಾಗಿದೆ. ಅದಕ್ಕಾಗಿಯೇ ಬೆಂಗಳೂರು ಇಂದು ಐಟಿ ರಾಜಧಾನಿಯಾಗಿದೆ. ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯಿಂದಾಗಿ ರಾಜ್ಯದ ಹಲವಾರು ಜನರು ದೇಶ ವಿದೇಶಗಳಲ್ಲಿ ಉತ್ತಮ ಸ್ಥಾನಗಳಲ್ಲಿದ್ದಾರೆ. ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮೂಲಕ ಉತ್ತಮ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತೇವೆ. ಸ್ವತ:ಬಿಜೆಪಿ ಆಡಳಿತದಲ್ಲಿ ಇರುವ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗಿಲ್ಲ.ಆದರೆ ಕರ್ನಾಟಕದಲ್ಲಿ ಜಾರಿಗೆ ತಂದು ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಕೆಲಸ ಬಿಜೆಪಿಯವರು ಮಾಡಿದ್ದರು.ಆದರೆ ನಮ್ಮ ಕಾಂಗ್ರೆಸ್ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹೆಚ್ ಎ ವೆಂಕಟೇಶ್ ಟಾಂಗ್ ಕೊಟ್ಟರು.

ಶಿಕ್ಷಣ ಇಲಾಖೆಗೆ ಅತೀ ಹೆಚ್ಚು ನೇಮಕಾತಿ ನಡೆದಿದ್ದರೆ ಅದು ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಮಾತ್ರ. ಶಿಕ್ಷಕರ, ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾಳಜಿ ಇರುವುದು ಕಾಂಗ್ರೆಸ್ ಸರ್ಕಾರಕ್ಕೆ ಈಗಾಗಲೇ ನಮ್ಮ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಅಭೂತಪೂರ್ವ ಶಿಕ್ಷಕ ಬಂಧುಗಳ ಬೆಂಬಲವಿದೆ. ಸದಾ ಶಿಕ್ಷಕರ ಧ್ವನಿಯಾಗಿ ಅವರು ಕೆಲಸ ಮಾಡಿದ್ದಾರೆ ಎಂದು ಹೆಚ್ ಎ ವೆಂಕಟೇಶ್ ನುಡಿದರು.

Key words: Arun Shahapur,  attention,  teachers, HA Venkatesh

Tags :

.