ಸಂಸತ್ ಮೇಲೆ ದುಷ್ಕರ್ಮಿಗಳ ಅಟ್ಯಾಕ್ ವಿಚಾರ: ಪ್ರತಾಪ್ ಸಿಂಹರನ್ನ ತನಿಖೆಗೆ ಒಳಪಡಿಸಬೇಕು- ಡಾ.ಯತೀಂದ್ರ ಸಿದ್ದರಾಮಯ್ಯ.
ಮೈಸೂರು,ಡಿಸೆಂಬರ್,14,2023(www.justkannada.in): ಲೋಕಸಭೆಗೆ ದುಷ್ಕರ್ಮಿಗಳು ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದಿದ್ದ ಹಿನ್ನೆಲೆ ಪ್ರತಾಪ್ ಸಿಂಹ ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದರು.
ಈ ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ಡಾ.ಯತೀಂದ್ರ ಸಿದ್ದರಾಮಯ್ಯ, ನಿನ್ನೆ ಸಂಸತ್ ಮೇಲೆ ನಡೆದಿರುವ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸಂಸತ್ ನಲ್ಲಿ ಭದ್ರತಾ ಲೋಪ ಆಗಿದೆ. ಈ ಘಟನೆ ಹಿಂದೆ ಬೇರೆಯ ಹುನ್ನಾರ ಇದೆ. ಸಂಸತ್ ಮೇಲೆ ಅಟ್ಯಾಕ್ ಮಾಡಿದ ಓರ್ವ ಮೈಸೂರಿನವನು. ಸಂಸತ್ ಒಳಗೆ ನುಗ್ಗಿರುವವರು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದು ಹೋಗಿದ್ದಾರೆ. ಪ್ರತಾಪ್ ಸಿಂಹರವರೆ ಯಾಕೆ ಅವರನ್ನ ಕಳುಹಿಸಬಾರದು? ಎಂದು ಪ್ರಶ್ನಿಸಿದರು.
ನಾವು ಸಹ ವಿಧಾನಸಭಾ ಅಧಿವೇಶನ ವೀಕ್ಷಣೆಗೆ ಪಾಸ್ ನೀಡುತ್ತೇವೆ. ಪಾಸ್ ನೀಡುವ ವೇಳೆ ಸಂಪೂರ್ಣವಾಗಿ ಪರಿಶೀಲಿಸಿ ನಂತರ ಪಾಸ್ ನೀಡುತ್ತೇವೆ. ಆಗಾಗಿ ಆ ವ್ಯಕ್ತಿಗಳಿಗೂ ಪ್ರತಾಪ್ ಸಿಂಹರಿಗೂ ಪರಿಚಯವಿರುತ್ತೆ. ಕೂಡಲೇ ಅವರನ್ನ ತನಿಖೆಗೆ ಒಳಪಡಿಸಬೇಕು. ಚುನಾವಣೆ ವೇಳೆ ಇಂತಹ ಘಟನೆ ನಡೆಯುತ್ತಿರುವುದರ ಹಿಂದೆ ಬೇರೊಂದು ಹುನ್ನಾರ ಇದ್ದೆ ಇರುತ್ತೆ ಎಂದು ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
Key words: Attack – Parliament- Pratap Simha- investigated - Dr. Yatindra Siddaramaiah.