ವಿದ್ಯುತ್ ಬೇಡಿಕೆ ಸರಾಸರಿ ಶೇ. 43 ರಷ್ಟು ಹೆಚ್ಚಳ- ಸಿಎಂ ಸಿದ್ದರಾಮಯ್ಯ.
ಬೆಂಗಳೂರು,ನವೆಂಬರ್,6,2023(www.justkannada.in): 2022 ನೇ ಇಸವಿಗೆ ಹೋಲಿಸಿದರೆ 2023 ರಲ್ಲಿ ವಿದ್ಯುತ್ ಬೇಡಿಕೆ ಸರಾಸರಿ ಶೇ. 43 ರಷ್ಟು ಹೆಚ್ಚಿದೆ. ಅಕ್ಟೋಬರ್ ತಿಂಗಳಲ್ಲಿ 15,978 ಮೆಗಾವ್ಯಾಟ್ ಬೇಡಿಕೆ ದಾಖಲಾಗಿದೆ. ವಿದ್ಯುತ್ ಬಳಕೆಯಲ್ಲಿ ಕಳೆದ ವರ್ಷಕ್ಕಿಂತ ಶೇ. 45 ರಷ್ಟು ಹೆಚ್ಚಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂಧನ ಇಲಾಖೆ ಪರಿಶೀಲನಾ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಕೃಷಿ ಬಳಕೆಯಲ್ಲಿ ವಿದ್ಯುತ್ ಬೇಡಿಕೆ ಶೇ. 55ರಿಂದ 119 ರಷ್ಟು ಹೆಚ್ಚಳವಾಗಿದೆ. ಇತರ ವಿಭಾಗಗಳಲ್ಲಿ ಶೇ. 9 ರಿಂದ 14 ರಷ್ಟು ಹೆಚ್ಚಳವಾಗಿದೆ. ಮಳೆ ಕೊರತೆ, ವಾಡಿಕೆಗಿಂತ ಮೊದಲೇ ಐಪಿ ಸೆಟ್ ಗಳ ಬಳಕೆ ಪ್ರಾರಂಭವಾಗಿರುವುದು ಹಾಗೂ ಕೋವಿಡ್ 19 ರ ನಂತರದ ಆರ್ಥಿಕ ಪುನಶ್ಚೇತನ ಇದಕ್ಕೆ ಕಾರಣವಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ಬಾರಿ ಪ್ರಗತಿ ಪರಿಶೀಲನೆಯ ನಂತರ ರಾಯಚೂರು, ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರಗಳ ಉತ್ಪಾದನೆ ಹೆಚ್ಚಾಗಿದೆ. ಉತ್ತರ ಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಿಂದ ವಿದ್ಯುತ್ ಪಡೆಯಲಾಗುತ್ತಿದೆ. ಸೆಕ್ಷನ್ 11 ಅಡಿ ಬೇರೆ ರಾಜ್ಯಗಳಿಗೆ ವಿದ್ಯುತ್ ನೀಡದಂತೆ ಆದೇಶ ಹೊರಡಿಸಿ, ವಿದ್ಯುತ್ ಪಡೆಯಲಾಗುತ್ತಿದೆ. ಆ ಮೂಲಕ ವಿದ್ಯುತ್ ವಿತರಣೆ ಸಹಜ ಸ್ಥಿತಿಗೆ ಬಂದಿದೆ. ನೋಡಲ್ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ವಿವಿಧ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ರೈತರ ಅಗತ್ಯತೆಗನುಗುಣವಾಗಿ ಐದರಿಂದ ಏಳು ಗಂಟೆಗಳ ಅವಧಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಾಜ್ಯದಾದ್ಯಂತ ಐಪಿ ಸೆಟ್ ಗಳಿಗೆ ನಿರಂತರ ಏಳು ಗಂಟೆಗಳ ಅವಧಿಗೆ ವಿದ್ಯುತ್ ಒದಗಿಸಲು 600 ಮೆಗಾವ್ಯಾಟ್/ಗಂಟೆ ಹಾಗೂ ಪ್ರತಿದಿನಕ್ಕೆ 14 ಮಿಲಿಯನ್ ಯುನಿಟ್‌ಗಳ ಅಗತ್ಯವಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಪ್ರತಿದಿನ ಏಳು ತಾಸು ವಿದ್ಯುತ್ ನೀಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕಾಗಿ ಸುಮಾರು 1500 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಅನುದಾನದ ಉಳಿತಾಯ, ಮರುಹಂಚಿಕೆಯ ಮೂಲಕ ಈ ವೆಚ್ಚ ಭರಿಸಲಾಗುವುದು
ಮುಂದಿನ ವರ್ಷದಲ್ಲಿ ಐಪಿ ಸೆಟ್ ಗಳಿಗೆ ವಿದ್ಯುತ್ ಪೂರೈಕೆಯನ್ನು ಸೌರವಿದ್ಯುತ್ ಮೂಲದಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ (Solarisation of EIP Feeders). ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ವೇಳೆಗೆ ಹಗಲು ವೇಳೆಯಲ್ಲಿಯೇ ರೈತರಿಗೆ ವಿದ್ಯುತ್ ನೀಡಲು ಇದರಿಂದ ಅನುಕೂಲವಾಗಲಿದೆ ಎಂದು ಸಿಎಂ ಸಿದ‍್ಧರಾಮಯ್ಯ ಹೇಳಿದರು.
Key words: Average –electricity- demand -43%- increase- CM -Siddaramaiah.