For the best experience, open
https://m.justkannada.in
on your mobile browser.

ಅರಮನೆ ಮುಂಭಾಗ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನ ನಿಷೇಧಿಸದಿದ್ದರೇ ಚಳುವಳಿ- ರಘು ಕೌಟಿಲ್ಯ

01:07 PM Jun 26, 2024 IST | prashanth
ಅರಮನೆ ಮುಂಭಾಗ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನ ನಿಷೇಧಿಸದಿದ್ದರೇ ಚಳುವಳಿ  ರಘು ಕೌಟಿಲ್ಯ

ಮೈಸೂರು,ಜೂನ್,26,2024 (www.justkannada.in): ಮೈಸೂರು ಅರಮನೆಯ ಮುಂಭಾಗ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನ ನಿಷೇಧಿಸದಿದ್ದರೇ  ತಡೆಗಟ್ಟುವ ಚಳುವಳಿ ನಡೆಸಲಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ರಾಜ್ಯ ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ರಘು ಕೌಟಿಲ್ಯ,  ಬಹಳ ದಿನಗಳಿಂದ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಾರದ ಮುಂಭಾಗ ಕೆಲವರು ಪಾರಿವಾಳಗಳಿಗೆ ನಿತ್ಯ ಧಾನ್ಯಗಳನ್ನು ತಂದು ಚೆಲ್ಲುತ್ತಿರುವುದರಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ, ಅರಮನೆ ಮತ್ತು10ನೇ ಚಾಮರಾಜೇಂದ್ರ ಒಡೆಯರ್‍ ಅವರ ಪ್ರತಿಮೆ ಮತ್ತುಅರಮನೆಯ ಆವರಣ ಸೌಂದರ್ಯ ಮತ್ತು ಅದರ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದ್ದು, ತಡೆಯುವಂತೆ ಒತ್ತಾಯಿಸಲಾಗಿತ್ತು.

ಈ ಕಾರ್ಯ ಸಾರ್ವಜನಿಕ ಆಕ್ಷೇಪ ವ್ಯಕ್ತವಾಗುವ ಮೊದಲೇ ತಾವು ಕೈಗೊಳ್ಳಬೇಕಿತ್ತು. ಆದರೆ ಈವರೆಗೂ ಎಷ್ಟೇ ಒತ್ತಡ ಬರುತ್ತಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಂಡಿರುವುದು ಕಂಡುಬರುತ್ತಿಲ್ಲ. ಸಂಬಂಧಿಸಿದ ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆಯು ಸಹ ಯಾವುದೇ ಕಠಿಣ ಕಾಳಜಿಯುಕ್ತ ಕ್ರಮವನ್ನು ಪರಿಣಾಮಕಾರಿಯಾಗಿ ತೆಗೆದು ಕೊಂಡಿಲ್ಲ. ಸಾರ್ವಜನಿಕ ಸ್ಥಳಗಳನ್ನು ಸಂಬಂಧಿಸಿದ ಇಲಾಖೆಗಳ ಅನುಮತಿ ಕೇಳದೇ ಸಾರ್ವಜನಿಕ ರಸ್ತೆಗಳನ್ನು ಆಕ್ರಮಿಸಿಕೊಂಡರೆ ಅದಕ್ಕೆ ಆಕ್ಷೇಪ ಎತ್ತಿ ತಡೆಯಬೇಕಾಗಿದ್ದ ಪೊಲೀಸ್ ಇಲಾಖೆಯು ಈವರೆಗೂ ಸಾರ್ವಜನಿಕ ಉಪಟಳವನ್ನು ತಡೆಯಬೇಕಾಗಿತ್ತು.

ಸಾರ್ವಜನಿಕ ಆರೋಗ್ಯ ಮತ್ತು ಪ್ರವಾಸಿಗರಿಗೆ ತೀವ್ರ ಅನಾನುಕೂಲ ಉಂಟುಮಾಡುತ್ತಿರುವ ಧಾನ್ಯ ಚೆಲ್ಲುವ ಚಟುವಟಿಕೆ ಇದೀಗ ಚಾಮರಾಜೇಂದ್ರ ವೃತ್ತದ ಸಮೀಪದಲ್ಲಿರುವ  ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್, ವರನಟ ಡಾ. ರಾಜ್‍ ಕುಮಾರ್ ಪ್ರತಿಮೆಗಳ ಸೌಂದರ್ಯಕ್ಕೂ ಧಕ್ಕೆ ತರುವ ಸಂಭವವಿದೆ. ಈಗಲಾದರೂ ತಾವು ಜರೂರು ಕ್ರಮ ವಹಿಸಲು ವಿನಂತಿಸುತ್ತೇನೆ. ಇನ್ನೂ ವಿಳಂಬವಾದರೆ ಪ್ರಜ್ಞಾವಂತ ನಾಗರೀಕರು, ಕನ್ನಡಪರ ಸಂಘಟನೆ, ದಲಿತಪರ ಸಂಘಟನೆ, ಮೈಸೂರು ಕಾಳಜಿಯ ಸಂಘ ಸಂಸ್ಥೆಗಳೊಡಗೂಡಿ ಈ ಧಾನ್ಯ ಚೆಲ್ಲುವ ಚಟುವಟಿಕೆಗಳನ್ನು ತಡೆಯುವ ಚಳುವಳಿ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ.

ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮತ್ತು ಜಿಲ್ಲಾಡಳಿತದ ಆದ್ಯ ಕರ್ತವ್ಯದ ದೃಷ್ಟಿಯಿಂದ ವಿಳಂಬಕ್ಕೆ ಅವಕಾಶ ನೀಡದಂತೆ ಧಾನ್ಯ ಚೆಲ್ಲುವ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಅರಮನೆ ಸುತ್ತ 2 ಕೀ.ಮಿ ವ್ಯಾಪ್ತಿಯಲ್ಲಿ ನಿಷೇಧಿಸಬೇಕೆಂದು ರಘು ಕೌಟಿಲ್ಯ ಒತ್ತಾಯಿಸಿದ್ದಾರೆ.

Key words: ban, throwing, grain, pigeons, Raghu Kautilya

Tags :

.