For the best experience, open
https://m.justkannada.in
on your mobile browser.

ಹೆಚ್ಚಾದ ಸಂಚಾರ ನಿಯಮ ಉಲ್ಲಂಘನೆ: ವಾಹನಗಳ ತಪಾಸಣೆ ನಡೆಸಿ, ಪ್ರಕರಣ ದಾಖಲಿಸಲು ಆದೇಶ

02:55 PM Jul 24, 2024 IST | prashanth
ಹೆಚ್ಚಾದ ಸಂಚಾರ ನಿಯಮ ಉಲ್ಲಂಘನೆ  ವಾಹನಗಳ ತಪಾಸಣೆ ನಡೆಸಿ  ಪ್ರಕರಣ ದಾಖಲಿಸಲು ಆದೇಶ

ಬೆಂಗಳೂರು,ಜುಲೈ,24,2024 (www.justkannada.in): ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಉಂಟಾಗುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಹಾಗೂ ಹೆಚ್ಚಾಗಿ ಕಂಡುಬರುತ್ತಿರುವ ಸಂಚಾರ ನಿಯಮ ಉಲ್ಲಂಘನೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ವಾಹನಗಳ ತಪಾಸಣೆ ನಡೆಸಿ ಪ್ರಕರಣ ದಾಖಲಿಸಲು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್ ಅನುಚೇತ್ ಆದೇಶಿಸಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಅವರು,  ಬೆಂಗಳೂರು ನಗರದಲ್ಲಿ ಉಂಟಾಗುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಹಾಗೂ ಹೆಚ್ಚಾಗಿ ಕಂಡುಬರುತ್ತಿರುವ ಸಂಚಾರ ನಿಯಮ ಉಲ್ಲಂಘನೆಗಳಿಗೆ ಕಡಿವಾಣ ದೃಷ್ಟಿಯಿಂದ ದಿನಾಂಕ  24.07.2024 ರಿಂದ 05.08.2024 ರವರೆಗೆ ಬೆಳಗ್ಗೆ 11:30 ರಿಂದ ಸಂಜೆ 04:00 ಗಂಟೆಯವರೆಗೆ ನಾನ್ ಪೀಕ್ ಹವರ್ಸ್ ವೇಳೆಯಲ್ಲಿ ಈ  ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ದ ಪ್ರವರ್ತನಾ ಚಟುವಟಿಕೆಯನ್ನು ಕೈಗೊಳ್ಳುವುದು.

ಬಾಡಿಗೆಗೆ ಹೋಗಲು ನಿರಾಕರಿಸುವುದು, ಟ್ರಿಪಲ್ ರೈಡಿಂಗ್, ಹೆಚ್ಚುವರಿ ದರಕ್ಕೆ ಬೇಡಿಕೆ, ಚಾಲನೆ ವೇಳೆ ಮೊಬೈಲ್ ಫೋನ್ ಬಳಸುವುದು, ದೋಷಪೂರಿತ ಸೈಲೆನ್ಸರ್, ಸುರಕ್ಷತಾ ಬೆಲ್ಟ್ ಇಲ್ಲದೆ ಪ್ರಯಾಣ, ವಾಹನಗಳಲ್ಲಿ ಹೆಚ್ಚುವರಿ ಶಾಲಾ ಮಕ್ಕಳನ್ನು ಒಯ್ಯುವುದು, ಜಂಪಿಂಗ್ ಟ್ರಾಫಿಕ್ ಸಿಗ್ನಲ್, ಹೆಲ್ಮೆಟ್ ಇಲ್ಲದೆ ಪ್ರಯಾಣ, ಫುಟ್‌ಪಾತ್ ಪಾರ್ಕಿಂಗ್ ಮುಂತಾದ ಸಂಚಾರ ನಿಯಮಗಳ ಉಲ್ಲಂಘನೆ ತಡೆಗೆ ತಪಾಸಣೆ ನಡೆಸುವುದು.

ಪೀಕ್ ಹವರ್ಸ್ ವೇಳೆಯಲ್ಲಿ ಕೇವಲ ಪಾದಚಾರಿ ರಸ್ತೆಯ ಚಾಲನೆ ಹಾಗೂ ಏಕಮುಖ ರಸ್ತೆಯ ವಿರುದ್ದ ದಿಕ್ಕಿನ ಚಾಲನೆಯ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡುವುದು. ಪಾದಚಾರಿ ರಸ್ತೆಯ ಚಾಲನೆ ಹಾಗೂ ಏಕಮುಖ ರಸ್ತೆಯ ವಿರುದ್ದ ದಿಕ್ಕಿನ ಚಾಲನೆಯ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಲು ಠಾಣಾ ವ್ಯಾಪ್ತಿಯಲ್ಲಿ ಪ್ರತಿ ದಿನ 2 ನಿರ್ದಿಷ್ಟ ಸ್ಥಳ/ಜಂಕ್ಷನ್ ಗುರ್ತಿಸಿ, ಸದರಿ ಸ್ಥಳದಲ್ಲಿಯೇ ಪ್ರಕರಣಗಳನ್ನು ದಾಖಲು ಮಾಡಲು ಕ್ರಮ ವಹಿಸುವುದು

ಪ್ರಕರಣಗಳನ್ನು ದಾಖಲಿಸುವ ಸಮಯದಲ್ಲಿ ಕೇವಲ ಕಣ್ಣಿಗೆ ಕಾಣುವ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮಾತ್ರ ಪ್ರಕರಣಗಳನ್ನು ದಾಖಲು ಮಾಡುವುದು. ದಾಖಲಾತಿಗಳನ್ನು ತಪಾಸಣೆ ಮಾಡುವ ನೆಪದಲ್ಲಿ ವಾಹನಗಳನ್ನು ನಿಲ್ಲಿಸಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಂಚಾರ ವಿಭಾಗ ಎಲ್ಲಾ ಪಿ.ಐಗಳಿಗೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್ ಅನುಚೇತ್ ಸೂಚನೆ ನೀಡಿದ್ದಾರೆ.

Key words: Bangalore, Traffic Violation, vehicles, case

Tags :

.