For the best experience, open
https://m.justkannada.in
on your mobile browser.

ಇತರ ನಿಗಮ-ಮಂಡಳಿಗಳ ಬ್ಯಾಂಕ್ ಖಾತೆಗಳ ವಿವರ ಬಹಿರಂಗಪಡಿಸಲಿ -ಆರ್.ರಘು ಕೌಟಿಲ್ಯ ಆಗ್ರಹ.

11:24 AM Jun 01, 2024 IST | prashanth
ಇತರ ನಿಗಮ ಮಂಡಳಿಗಳ ಬ್ಯಾಂಕ್ ಖಾತೆಗಳ ವಿವರ ಬಹಿರಂಗಪಡಿಸಲಿ  ಆರ್ ರಘು ಕೌಟಿಲ್ಯ ಆಗ್ರಹ

ಮೈಸೂರು,ಜೂನ್,1,2024 (www.justkannada.in): ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹೆಸರಿನಲ್ಲಿದ್ದ ಖಾತೆಯಿಂದ 187 ಕೋಟಿ ಹಣ ದುರುಪಯೋಗವಾಗಿರುವ ಬಹುದೊಡ್ಡ ಹಗರಣದ ಹಿನ್ನೆಲೆಯಲ್ಲಿ ಸರ್ಕಾರದ ಇತರ ಅಭಿವೃದ್ಧಿ ನಿಗಮಗಳು ಹಾಗೂ ಮಂಡಳಿಗಳ ಆರ್ಥಿಕ ಸ್ಥಿತಿಗತಿಯ ಬಗ್ಗೆ ಹಾಗೂ ನಿಗಮ ಮಂಡಳಿಗಳು ಹೊಂದಿರುವ ಖಾತೆಗಳು ಹಾಗೂ ಅವುಗಳ ವಿವರವನ್ನು ಸಾರ್ವಜನಿಕರು ಪಾರದರ್ಶಕವಾಗಿ ತಿಳಿಯುವಂತಾಗಲು  ಈ ಕೂಡಲೇ  ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಬಿಜೆಪಿ ಮುಖಂಡ ಆರ್.ರಘು ಕೌಟಿಲ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಪ್ರತಿಕ್ರಿಯಿಸಿರುವ ಆರ್. ರಘು ಕೌಟಿಲ್ಯ,  ಸರ್ಕಾರ ಮತಬ್ಯಾಂಕ್ ಆಧಾರಿತ ಯೋಜನೆಗಳನ್ನು ಜಾರಿಗೊಳಿಸಲು ತನ್ನ ಬೊಕ್ಕಸ ಬರಿದು ಮಾಡಿಕೊಂಡಿದ್ದು ಅಭಿವೃದ್ಧಿಕಾರ್ಯಗಳನ್ನು ಮೂಲೆಗೆ ಸರಿಸಿದೆ ,ಜತೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣೆ ಎದರಿಸಲು ಅಕ್ರಮ ಮಾರ್ಗದಲ್ಲಿ ಸರ್ಕಾರಿ ನಿಗಮಗಳ ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣವೂ ವಾಲ್ಮೀಕಿ ನಿಗಮದ ಮೂಲಕ ಬೆಳಕಿಗೆ ಬಂದಿದೆ.

ಡಾ. ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ‌                        ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಸೇರಿದಂತೆ ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳು ಹಾಗೂ ಸರ್ಕಾರದ ಅನುದಾನ ಪಡೆಯುವ ಇತರ ಮಂಡಳಿಗಳು ಹಾಗೂ ಪ್ರಾಧಿಕಾರಗಳ ಖಾತೆಗಳಲ್ಲಿ ಇರುವ ಹಣದ ವಿವರ ಬಯಲಾಗಬೇಕಿದೆ. ಸದ್ಯ ವಾಲ್ಮೀಕಿ ನಿಗಮದ ಹಗರಣವೊಂದು ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಬೆಳಕಿಗೆ ಬಂದಿದ್ದು, ಇದೇ ರೀತಿಯ ಹಣ ದುರುಪಯೋಗದ ಪ್ರಕರಣಗಳು ಹಾಗೂ ಅಕ್ರಮ ಹಣ ವರ್ಗಾವಣೆಗಳು ಇತರ ನಿಗಮಗಳಲ್ಲೂ ನಡೆದಿರುವ ಸಾಧ್ಯತೆಗಳನ್ನು  ತಳ್ಳಿ ಹಾಕುವಂತಿಲ್ಲ. ಈ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಈ ಕೂಡಲೇ ಎಲ್ಲಾ ನಿಗಮಗಳ ಹಾಗೂ ಅನುದಾನ ಪಡೆಯುವ ಮಂಡಳಿಗಳ ಅರ್ಥಿಕ ವಿವರಗಳ ಸ್ಥಿತಿ ಗತಿಗಳ ಬಗ್ಗೆ ಶ್ವೇತಪತ್ರ ಹೊರಡಿಸುವ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಯ ನಿರ್ವಹಣೆಯ ಶಿಸ್ತಿನ ಕುರಿತು ಪಾರದರ್ಶಕ ಮಾಹಿತಿ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ರಘು ಕೌಟಿಲ್ಯ ತಿಳಿಸಿದ್ದಾರೆ.

ನಾನು ಈ ಹಿಂದೆ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ನನಗೆ ತಿಳಿದಂತೆ ಸರ್ಕಾರದ ಅನುದಾನ ನಿಗಮಗಳಿಗೆ ಬಿಡುಗಡೆಯಾದ ನಂತರ ಅನುದಾನವು ಸಂಪೂರ್ಣವಾಗಿ ಬಳಕೆಯಾಗದೇ ಉಳಿಯುವ ಹಣ ಹಾಗೂ ನಿಗಮದಿಂದ ಸಾಲದ ನೆರವು ಪಡೆದ ಫಲಾನುಭವಿಗಳಿಂದ ಮರುಪಾವತಿಯಾಗುವ ಹಣವನ್ನು ನಿಗಮದ ಖಾತೆಗಳಲ್ಲಿ ಠೇವಣಿ ಇರಿಸಲಾಗುತ್ತಿತ್ತು. ನನಗೆ ಅರಿವಿರುವಂತೆ  ಸಾವಿರಾರು ಕೋಟಿ ರುಪಾಯಿಗಳ ಠೇವಣಿ ಅನೇಕ ನಿಗಮಗಳ ಖಾತೆಗಳಲ್ಲಿದೆ.  ಈ ಠೇವಣಿಗಳ ಕುರಿತ ಮಾಹಿತಿಗಳು ಹಾಗೂ ಇವುಗಳ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಜಾಣಕುರುಡು ಪ್ರದರ್ಶಿಸುತ್ತಿದ್ದುದು ನಾನು ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿಯೇ ಆರ್ಥಿಕ ಇಲಾಖೆಯ ಕಣ್ಣು ತಪ್ಪಿಸಿ, ವಾಲ್ಮೀಕಿ ನಿಗಮದ ಹಣ ದುರುಪಯೋಗವಾಗಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಅತೀ ತುರ್ತಾಗಿ ಸರ್ಕಾರ ನಿಗಮ ಮಂಡಳಿಗಳ ಬ್ಯಾಂಕ್‌ ಖಾತೆಗಳ ವಿವರ ಪ್ರಕಟಿಸಿದರೆ, ವಾಲ್ಮೀಕಿ ನಿಗಮದ ಹಗರಣದಂತೆ ಇನ್ನಷ್ಟು ಹಗರಣಗಳು ಹೊರಬರುವ ಸಾಧ್ಯತೆಯಿದೆ ಎಂದು ರಘು ಕೌಟಿಲ್ಯ ಹೇಳಿದ್ದಾರೆ.

Key words: Bank account, details, corporate bodies, R. Raghu Kautilya

Tags :

.