For the best experience, open
https://m.justkannada.in
on your mobile browser.

ದಿ.ಡಿ. ದೇವರಾಜ ಅರಸು ಮತ್ತು ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಿ-ಹೆಚ್.ವಿಶ್ವನಾಥ್ ಆಗ್ರಹ.

01:41 PM Feb 23, 2024 IST | prashanth
ದಿ ಡಿ  ದೇವರಾಜ ಅರಸು ಮತ್ತು ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಿ ಹೆಚ್ ವಿಶ್ವನಾಥ್ ಆಗ್ರಹ

ಮೈಸೂರು,ಫೆಬ್ರವರಿ,23,2024(www.justkannada.in): ಮಾಜಿ ಮುಖ್ಯಮಂತ್ರಿ, ದಿವಂಗತ ಡಿ. ದೇವರಾಜ ಅರಸು ಹಾಗು ಸಿದ್ದಗಂಗಾ ಮಠದ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರುಳಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್. ವಿಶ್ವನಾಥ್, ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಬೇಕು‌. ಈ ಕುರಿತು ರಾಜ್ಯದ ಮುಖ್ಯಮಂತ್ರಿ, ಎಂಎಲ್ಎ ಗಳು, ಎಂಪಿಗಳು ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಯಾಗಬೇಕು

ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಯಾಗಬೇಕು. ನಾನು ಸಹಕಾರ ಸಚಿವನಾಗಿದ್ದಾಗ ಈ ಬಗ್ಗೆ ಪ್ರಯತ್ನ ಮಾಡಿದ್ದೆ. ಈಗ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ಸರ್ಕಾರ ಮುಂದಾಗಿದೆ. ಇದಕ್ಕೆ ಶಾಸಕ ಜಿ ಟಿ ದೇವೇಗೌಡ ವಿರೋಧಿಸುತ್ತಿರುವುದು ಸರಿಯಲ್ಲ. ಅವರ ಪತ್ನಿ ಲಲಿತಾ ರಾಜ್ಯ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ, ಮಗ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ. ಮೀಸಲಾತಿ ಜಾರಿಗೆ ವಿರೋಧಿಸುತ್ತಿರುವ ಜಿ.ಟಿ ದೇವೇಗೌಡರೇ ನೀವು ಕೇವಲ ಒಂದು ಸಮುದಾಯದ ಬೆಂಬಲದಿಂದ ಗೆದ್ದಿದ್ದೀರಾ? ಬೇರೆ ಸಮುದಾಯಗಳ ಋಣದಲ್ಲಿ ನೀವು ಇಲ್ಲವೇ? 67 ಸಾವಿರ ಸಹಕಾರ ಬ್ಯಾಂಕ್ ಗಳ ಪೈಕಿ 42 ಸಾವಿರ ಬ್ಯಾಂಕ್ ಗಳು ಲಾಭದಲ್ಲಿ ನಡೆಯುತ್ತಿವೆ. ಲಾಭಾಂಶವನ್ನು ಇವರೇ ಹಂಚಿಕೊಳ್ಳುತ್ತಿದ್ದಾರೆ‌. ಹಾಗಾಗಿ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ಜಿ. ಟಿ ದೇವೇಗೌಡ ವಿರೋಧಿಸುತ್ತಿದ್ದಾರೆ ಎಂದು ಹೆಚ್.ವಿಶ್ವನಾಥ್ ಆರೋಪಿಸಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಲೋಕಸಭಾ ಚುನಾಣೆಗೆ ದಿಕ್ಸೂಚಿ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭಾ ಚುನಾಣೆಗೆ ದಿಕ್ಸೂಚಿ ಎಂದು ಭವಿಷ್ಯ ನುಡಿದ ಎಚ್ ವಿಶ್ವನಾಥ್, ರಾಜ್ಯದ ಜನರು ಮೈತ್ರಿಯ ವಿರುದ್ದ ಇದ್ದಾರೆ ಎಂಬುದು ಚುನಾವಣಾ ಫಲಿತಾಂಶದ ಮೂಲಕ ಗೊತ್ತಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಜನರು ತಿರಸ್ಕರಿಸಿದರು. ಪರಿಣಾಮ ಬಿಜೆಪಿ ದೊಡ್ಡ ಮಟ್ಟದ ಗೆಲುವು ಸಾಧಿಸಿತು. ಕಾಂಗ್ರೆಸ್ ಗೆ ಹೀನಾಯ ಸೋಲಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟಕ್ಕೆ ಲಾಭವಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ನಾನೂ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.

ನಾನು ಕೂಡ ನಮ್ಮ ಹಳೆ ಪಕ್ಷ ಕಾಂಗ್ರೆಸ್ ನಿಂದ  ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈ ಮೊದಲು ಕೂಡ ನಾನು ಎಂಪಿಯಾಗಿ, ಮಂತ್ರಿಯಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆಕಾಂಕ್ಷಿ ಯಾಕಾಗಬಾರದು ? ಎಂದು ಮಾಧ್ಯಮ ಪ್ರತಿನಿಧಿಗಳ‌ ಪ್ರಶ್ನೆge ಹೆಚ್.ವಿಶ್ವನಾಥ್ ಮರು ಪ್ರಶ್ನೆ ಹಾಕಿದರು.

ನಿಮ್ಮಪ್ಪನನ್ನು ಜೈಲಿಗೆ ಹಾಕಿಸಿದ್ದೇ ನೀನು. ನೀವೇನು ಸತ್ಯವಂತರಾ..?

ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದರಿಂದ ದೇಗುಲಗಳ ಹುಂಡಿ ಹಣಕ್ಕೂ ಸರ್ಕಾರ ಕೈ ಹಾಕಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ‌. ವೈ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಎಚ್ ವಿಶ್ವನಾಥ್, ಬಿಜೆಪಿ ಸರ್ಕಾರದ ಅವಧಿಯಲ್ಲೇನು ರಾಜ್ಯದ ಖಜಾನೆ ಭರ್ತಿಯಾಗಿತ್ತಾ? ನಿಮ್ಮಪ್ಪನನ್ನು ಜೈಲಿಗೆ ಹಾಕಿಸಿದ್ದೇ ನೀನು. ನೀವೇನು ಸತ್ಯವಂತರಾ...?  ಎಂದು ಬಿವೈ ವಿಜಯೇಂದ್ರ ವಿರುದ್ಧ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.

Key words: Bharat Ratna –D. Devaraja Arasu - Shivakumar Swamiji - H. Vishwanath

Tags :

.