For the best experience, open
https://m.justkannada.in
on your mobile browser.

ಬಿಜೆಪಿ ಅನಗತ್ಯ ವಿಷಯಗಳನ್ನ ಮುಂದಿಟ್ಟು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವಂತೆ ವರ್ತಿಸುತ್ತಿರುವುದು ಆಕ್ಷೇಪಾರ್ಹ- ಹೆಚ್.ಎ ವೆಂಕಟೇಶ್.

05:33 PM May 18, 2024 IST | prashanth
ಬಿಜೆಪಿ ಅನಗತ್ಯ ವಿಷಯಗಳನ್ನ ಮುಂದಿಟ್ಟು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವಂತೆ ವರ್ತಿಸುತ್ತಿರುವುದು ಆಕ್ಷೇಪಾರ್ಹ  ಹೆಚ್ ಎ ವೆಂಕಟೇಶ್

ಮೈಸೂರು,ಮೇ,18,2024 (www.justkannada.in): ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದಿರುವ ಈ ಶುಭ ಸಂದರ್ಭದಲ್ಲಿ ಬಿಜೆಪಿ ಅನಗತ್ಯ ವಿಷಯಗಳನ್ನು ಮುಂದೆಮಾಡಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವಂತೆ ವರ್ತಿಸುತ್ತಿರುವುದು ಆಕ್ಷೇಪಾರ್ಹ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ವಾಗ್ದಾಳಿ ನಡೆಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಬಿಜೆಪಿ, ಜೆಡಿಎಸ್ ವಿರುದ್ದ ಕಿಡಿಕಾರಿರುವ ಹೆಚ್.ಎ ವೆಂಕಟೇಶ್, ಹುಬ್ಬಳ್ಳಿಯಲ್ಲಿ ನಡೆದ ಕೊಲೆ ಘಟನೆಗಳು ಆತಂಕಕಾರಿ ನಿಜ. ಆದರೆ ಇವುಗಳಿಗೂ ಸರ್ಕಾರಕ್ಕೂ ಸಂಬಂಧ ಕಲ್ಪಿಸುವುದು ಅನಾರೋಗ್ಯಕಾರಿ ಬೆಳವಣಿಗೆ. ವೈಯಕ್ತಿಕ ಕಾರಣ, ಸೇಡಿನ ಮನೋಭಾವ, ಹತಾಶ ಸ್ಥಿತಿ   ಅಪರಾಧಿಕ ಹಿನ್ನೆಲೆಯೂ ಸೇರಿದಂತೆ ಇನ್ನಿತರ ಮಾನಸಿಕ ಹಾಗೂ ಸಮಾಜೋ ಆರ್ಥಿಕ ಕಾರಣಗಳಿಂದಾಗಿ ನಡೆಯುಬಹುದಾದ ಇಂತಹ ಘಟನೆಗಳನ್ನು ಸಾರ್ವತ್ರೀಕರಿಸಿ ನೋಡುವುದು ಮತ್ತು ಈ ಘಟನೆಗಳಿಗೆ ಗೃಹ ಇಲಾಖೆಯತ್ತ ಬೊಟ್ಟು ಮಾಡುವುದು ಕುಬ್ಜ ಮನಸ್ಥಿತಿಯ ಸಂಕೇತ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಈಚೆಗೆ ನಡೆದ ಚುನಾವಣೆಯ ಎರಡು ಹಂತಗಳ ಮತದಾನದಲ್ಲಿ ಯಾವುದೇ ಲೋಪವಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಕೂಗಿಕೊಳ್ಳುವವರು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಮತದಾನದ ಸಮಯ ನಡೆದ ಅರಾಜಕ ಘಟನೆಗಳನ್ನು ಗಮನಿಸಬೇಕು. ದಲಿತರು, ಶೋಷಿತರು ಹಾಗೂ ಅಲ್ಪಸಂಖ್ಯಾತರ ಮನೆಗಳನ್ನು ಬುಲ್ಡೋಜರ್‌ನಿಂದ ಉರುಳಿಸುವ ಅಸಂವಿಧಾನಿಕ ವಿಧಾನವನ್ನೇ ಉತ್ತಮ ಆಡಳಿತ ಎಂದು ಬಿಂಬಿಸುವ ಬಿಜೆಪಿಯ ಕ್ರೂರ ಮನಸ್ಥಿತಿಯವರು, ರಾಜ್ಯ ಸರ್ಕಾರದ ಜನಪರ ಆಡಳಿತವನ್ನು ಪ್ರಶಂಸಿಸುವುದು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿಯ ಇಂತಹ ಆರೋಪಗಳಿಗೆ ಬೆಲೆಯಿಲ್ಲ. ಇಷ್ಟಕ್ಕೂ ಬಿಜೆಪಿ ಆಡಳಿತದ ಸಮಯದಲ್ಲಿ ಇಂತಹ ನೂರಾರು ಅಪರಾಧಿಕ ಘಟನೆಗಳು ನಡೆದಿರುವುದನ್ನು ಉದಾಹರಿಸಬಹುದು. ಆದರೆ ಕಾಂಗ್ರೆಸ್ ಸರ್ಕಾರವಾಗಲೀ, ನಾಯಕರಾಗಲಿ ಇದಕ್ಕೆ ಮುಂದಾಗುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಚುನಾವಣೆಗೂ ಮೊದಲು ನೀಡಿದ ವಾಗ್ದಾನದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ.  ಬಿಜೆಪಿಯ ಕೇಂದ್ರ ಸರ್ಕಾರದ ದಮನಕಾರಿ ಆಡಳಿತದಲ್ಲಿ ಬೆಲೆಏರಿಕೆ ಬಿಸಿಯಿಂದ ಬಳಲುತ್ತಿದ್ದ ಬಡಜನತೆಗೆ ನೆಮ್ಮದಿ ಸಿಕ್ಕಿದೆ. ಉಚಿತ ಪ್ರಯಾಣದ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳು ಜನರ ಕೈಹಿಡಿದಿವೆ. ಗೃಹಲಕ್ಷ್ಮಿ ಯೋಜನೆಯಂತೂ ವಿಶ್ವದ ಅತಿದೊಡ್ಡ ಡಿಬಿಟಿ ಯೋಜನೆಯಾಗಿ ಗುರುತಿಸಿಕೊಂಡಿದೆ. ಹಲವು ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದು ಸಂಚರಿಸುತ್ತಿದ್ದಾರೆ. ಇದರಿಂದಾಗಿ ವಿವಿಧ ಧಾರ್ಮಿಕ ಕೇಂದ್ರಗಳು, ಪ್ರವಾಸಿ ಕೇಂದ್ರಗಳಲ್ಲಿ ಆರ್ಥಿಕ ಚಟುವಟಿಕೆಗಳು ಚುರುಕು ಪಡೆದಿವೆ. ಆದರೂ ಇದಾವುದರ ಬಗ್ಗೆಯೂ ಕನಿಷ್ಠಜ್ಞಾನವಿಲ್ಲದೇ ಖಾಲಿ ಡಬ್ಬದಂತೆ ಕರ್ಕಷ ಸದ್ದು ಮಾಡುವ ಬಿಜೆಪಿ ಜೆಡಿಎಸ್ ನಾಯಕರು, ಜನತೆಗೆ ಒಳಿತು ಮಾಡುತ್ತಿರುವ ಸರ್ಕಾರದ ಕೆಲಸವನ್ನು ಹಳದಿ ಕನ್ನಡಕ ತೆಗೆದಿಟ್ಟು ಪ್ರಾಮಾಣಿಕವಾಗಿ ಪರಾಮರ್ಶಿಸಲಿ ಎಂದು ಕೋರುತ್ತೇನೆ ಎಂದು ಹೆಚ್.ಎ ವೆಂಕಟೇಶ್ ಟಾಂಗ್ ಕೊಟ್ಟಿದ್ದಾರೆ.

Key words: BJP, Congress, H.A Venkatesh

Tags :

.