ಬಣ್ಣ ಬಯಲಾದ ಕೂಡಲೇ ಲಜ್ಜೆಗೆಟ್ಟ ಬಿಜೆಪಿ ತನ್ನ ಸುಳ್ಳು ಆರೋಪದ ಹೇಳಿಕೆ ಅಳಿಸಿಹಾಕಿದೆ- ಸಿಎಂ ಸಿದ್ದರಾಮಯ್ಯ ವಾಗ್ದಾಳಿ.
ಬೆಂಗಳೂರು,ಮೇ,8,2024 (www.justkannada.in): ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ಸದಸ್ಯರೊಬ್ಬರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಬಣ್ಣ ಬಯಲಾದ ಕೂಡಲೇ ಲಜ್ಜೆಗೆಟ್ಟ ಬಿಜೆಪಿ ತನ್ನ ಸುಳ್ಳು ಆರೋಪದ ಹೇಳಿಕೆಯನ್ನ ಅಳಿಸಿಹಾಕಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ತಾನು ಹೇಳಿದ ಸುಳ್ಳನ್ನು ಅಳಿಸಿಹಾಕುವುದೆಂದರೆ ವಾಂತಿ ಮಾಡಿ, ಅದನ್ನು ಮಾಡಿದವರೇ ತಿಂದ ಹಾಗೆ. ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ರಾಜ್ಯ ಬಿಜೆಪಿ ನಾವು ಸತ್ಯವನ್ನು ಬಿಚ್ಚಿಟ್ಟ ಕೂಡಲೇ ಸಾಮಾಜಿಕ ಮಾಧ್ಯಮಗಳಲ್ಲಿದ್ದ ತನ್ನ ಸುಳ್ಳು ಆರೋಪದ ಹೇಳಿಕೆಯನ್ನು ಅಳಿಸಿಹಾಕಿದೆ.
ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಗೆ ಕಾಂಗ್ರೆಸ್ ಸರ್ಕಾರ ಮುಸ್ಲಿಮ್ ಸಮುದಾಯದ ವ್ಯಕ್ತಿಯನ್ನು ಸದಸ್ಯರನ್ನಾಗಿ ಮಾಡಿ ಹಿಂದೂಗಳ ಅಧಿಕಾರವನ್ನು ಕಿತ್ತುಕೊಳ್ಳಲು ಹೊರಟಿದೆ ಎಂಬ ಸುಳ್ಳು ಆರೋಪವನ್ನು ರಾಜ್ಯ ಬಿಜೆಪಿ ಮಾಡಿತ್ತು. ಈ ಬ್ರಹ್ಮರಥೋತ್ಸವ ಸಮಿತಿಗೆ ಬಿಜೆಪಿ ಸರ್ಕಾರದ ಕಾಲದಲ್ಲಿಯೂ ಮುಸ್ಲಿಮ್ ಸಮುದಾಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಲಾಗಿತ್ತು ಎಂಬ ಸತ್ಯ ಸಂಗತಿಯನ್ನು ನಾನು ದಾಖಲೆ ಸಮೇತ ಮುಂದಿಟ್ಟದ್ದು ಮಾತ್ರವಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿನ ತನ್ನ ಹೇಳಿಕೆಯನ್ನು ಬಿಜೆಪಿ ಅಳಿಸಿಹಾಕಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದೆ.
ಬಣ್ಣ ಬಯಲಾದ ಕೂಡಲೇ ಎಚ್ಚೆತ್ತುಗೊಂಡ ಲಜ್ಜೆಗೆಟ್ಟ ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿದ್ದ ತನ್ನ ಹೇಳಿಕೆಯನ್ನು ಅಳಿಸಿಹಾಕಿದೆ. ಈ ಬಗ್ಗೆ ಇನ್ನೂ ರಾಜ್ಯದ ಜನರ ಕ್ಷಮೆ ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
Key words: BJP, deleted,lie, statement, CM Siddaramaiah