ವಿಜಯೇಂದ್ರ ನೀ ಸತ್ಯ ಹರಿಶ್ಚಂದ್ರನಾ..?: ಡಾ.ಪುಷ್ಪ ಅಮರನಾಥ್
ಮೈಸೂರು,ಆಗಸ್ಟ್,7,2024 (www.justkannada.in): ಮುಡಾ ಹಗರಣ ವಿರೋಧಿಸಿ ಬಿಜೆಪಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿವೈ ವಿಜಯೇಂದ್ರ ವಿರುದ್ದ ಹರಿಹಾಯ್ದ ಡಾ.ಪುಷ್ಪ ಅಮರನಾಥ್, ಬಿಟ್ ಕಾಯಿನ್ಸ್ ಸ್ಕ್ಯಾಮ್, ಬಿಎಸ್ ವೈ ಆಪ್ತ ಸಂತೋಷ ಮನೆಯಲ್ಲಿ ಸಿಕ್ಕ ಕೋಟ್ಯಾಂತರ ರೂಪಾಯಿ, ಚೆಕ್ ಮೂಲಕ ಹಣ ಪಡೆದ ವಿಜಯೇಂದ್ರ ಈಗ ಸತ್ಯ ಹರಿಶ್ಚಂದ್ರರ ರೀತಿ ಮಾತನಾಡುತ್ತಿದ್ದಾರೆ. ವಿಜಯೇಂದ್ರ ಲಂಚ ಪಡೆದು ಬಿಎಸ್ ವೈರನ್ನು ಜೈಲಿಗೆ ಕಳಿಸಿದ್ರು. ಯಡಿಯೂರಪ್ಪ ಫೋಕ್ಸೋ ಪ್ರಕರಣ ಎದುರಿಸುತ್ತಿದ್ದಾರೆ. ಸತ್ಯ ಹರಿಶ್ಚಂದ್ರರ ರೀತಿ ಆಡ್ತಾ ಇದ್ದೀರಾ.? ನಿಮಗೆ ಯಾವ ನೈತಿಕತೆ ಇದೆ. ವಿಜಯೇಂದ್ರ ನೀವೇನು ಸತ್ಯ ಹರಿಶ್ಚಂದ್ರನಾ..? ಎಂದು ಚಾಟಿ ಬೀಸಿದರು.
ಕಾಂಗ್ರೆಸ್ ಸರ್ಕಾರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಬಿಜೆಪಿ ಜೆಡಿಎಸ್ ನಡೆ ಖಂಡಿಸಿ ಮೈಸೂರನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಪುಷ್ಪಾ ಅಮರನಾಥ್, ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲಿಕ್ಕೆ ಷಡ್ಯಂತ್ರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಒಂದು ದೊಡ್ಡ ಶಕ್ತಿಯಾಗಿರುವ ಸಿದ್ದರಾಮಯ್ಯ ಅವರ ಏಳಿಗೆ ಸಹಿಸಲಾರದೆ ಈ ರೀತಿ ಮೈಸೂರು ಚೆಲೋ ಮಾಡುತ್ತಿದ್ದಾರೆ. ನೀವು ಯಾವ ನೈತಿಕತೆ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದೀರಿ. ರಾಜ್ಯದಲ್ಲಿ ನೆರೆ, ಅತಿವೃಷ್ಠಿಯಿಂದ ಜನ ಬಳಲುತ್ತಿದ್ದಾರೆ ಅದರ ಬಗ್ಗೆ ಹೋರಾಟ ಮಾಡುವುದನ್ನ ಬಿಟ್ಟು ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡುವುದು ಖಂಡನೀಯ ಎಂದರು.
ಬಿಜೆಪಿ ಅವರ ಕಾಲದಲ್ಲಿ ನಡೆದ ಭ್ರಷ್ಟಾಚಾರ ಕುರಿತು ಪಟ್ಟಿ ಇಟ್ಟ ಪುಷ್ಪ ಅಮರನಾಥ್, ಬಿಜೆಪಿ ಅವರೇ ಕುಮಾರಸ್ವಾಮಿ ಅವರ ವಿರುದ್ಧ ಪತ್ರಿಕೆಗಳಲ್ಲಿ ಜಾಹಿರಾತು ಕೊಟ್ಟಿದ್ದರು. ಆ ಪಟ್ಟಿಯನ್ನ ನಾನು ನಿಮ್ಮ ಮುಂದಿಡುತ್ತೇನೆ. ಜೆಡಿಎಸ್ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು. ಇವರ ಕಾಲದಲ್ಲಿ 430 ಕೋಟಿಗೂ ಹೆಚ್ಚು ಹಗರಣ ನಡೆದಿದೆ. ಇವರು ಯಾವ ನೈತಿಕತೆ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಾರೆ. ಕೋವಿಡ್ ಸಂಧರ್ಭದಲ್ಲಿ ಹೆಣಗಳ ಮುಂದಿಟ್ಟುಕೊಂಡು ಕೋವಿಡ್ ಹಗರಣ ಮಾಡಿದ್ದಾರೆ. ಅಂದು 40% ಸರ್ಕಾರ ಅಂತ ಹೆಸರುವಾಸಿಯಗಿತ್ತು. ಬಿಟ್ ಕಾಯಿನ್ಸ್ ಸ್ಕ್ಯಾಮ್, ಬಿಎಸ್ವೈ ಆಪ್ತ ಸಂತೋಷ ಮನೆಯಲ್ಲಿ ಸಿಕ್ಕ ಕೋಟ್ಯಾಂತರ ರೂಪಾಯಿ, ಚೆಕ್ ಮೂಲಕ ಹಣ ಪಡೆದ ವಿಜಯೇಂದ್ರ ಈಗ ಸತ್ಯ ಹರಿಶ್ಚಂದ್ರರ ರೀತಿ ಮಾತನಾಡುತ್ತಿದ್ದಾರೆ. ಹೀಗೆ ಹಲವಾರು ಭ್ರಷ್ಟಾಚಾರದಲ್ಲಿ ತೊಡಗಿದ್ದ ಇವರು ನಮ್ಮ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುವ ನೈತಿಕತೆ ಇಲ್ಲ ಎಂದು ಗುಡುಗಿದರು.
ನಮ್ಮ ಸರ್ಕಾರ ಜೋಡೆತ್ತುಗಳ ಹಾಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದ ಸುಭದ್ರವಾಗಿ ನಡೆಯುತ್ತಿದೆ. ಬಿಜೆಪಿಯವರಿಗೆ ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನ ಬದಿಗಿಟ್ಟು ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸಿರುವವರು ಕಳ್ಳರು, ಸುಳ್ಳರು, ಭ್ರಷ್ಟಾಚಾರಿಗಳು. ನಿಮಗೆ ಪಾದಯಾತ್ರೆ ಮಾಡುವ ನೈತಿಕತೆ ಇಲ್ಲ. ನಿಮ್ಮಂತಹ ಕಳ್ಳರು, ಸುಳ್ಳರು, ಖದೀಮರಿಗೆ ನೈತಿಕತೆ ಇಲ್ಲ ಎಂದು ಬಿಜೆಪಿ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಪುಷ್ಪ ಅಮರನಾಥ್.
ಹಾಸನದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಯಾಕೆ ಬಿಜೆಪಿ ಮಹಿಳೆಯರು ಹೋರಾಟ ಮಾಡಲಿಲ್ಲ. ಬಿಜೆಪಿ, ಜೆಡಿಎಸ್ ಮಹಿಳೆಯರು ಇದರ ಬಗ್ಗೆ ಯಾಕೆ ಧ್ವನಿ ಎತ್ತಲಿಲ್ಲ ಎಂದು ಶೋಭಾ ಕರಂದ್ಲಾಜೆ, ಶಶಿಕಲಾ ಜೊಲ್ಲೆ, ಮಾಳವಿಕ, ಶೃತಿ ಸೇರಿದಂತೆ ಹಲವು ಮಹಿಳಾ ಬಿಜೆಪಿ ಮಹಿಳಾ ನಾಯಕಿಯರ ವಿರುದ್ಧ ಪುಷ್ಪ ಅಮರನಾಥ್ ಕಿಡಿಕಾರಿದರು.
Key words: BJP, JDS, padayatra, KPCC, Pushpa Amaranath