ಲಂಚಕ್ಕಾಗಿ ಬೇಡಿಕೆ : ಬಿಬಿಎಂಪಿ ಗುತ್ತಿಗೆದಾರನ ಹೆಂಡತಿಯನ್ನು ಮಂಚಕ್ಕೆ ಕರೆದ ಬಿಜೆಪಿ ಶಾಸಕ ಮುನಿರತ್ನ..!
ಬೆಂಗಳೂರು, ಸೆ.14,2024: (www.justkannada.in news) ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿಯ ಶಾಸಕ ಮುನಿರತ್ನ ಮತ್ತು ಆಪ್ತ ವಸಂತ್ ಕುಮಾರ್ ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಸಂಬಂಧ ಗುತ್ತಿಗೆದಾರರೊಬ್ಬರಿಂದ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು ಇದಕ್ಕಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಬಿಜೆಪಿ ಶಾಸಕ ಮುನಿರತ್ನ ಮತ್ತು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬುವವರ ನಡುವೆ ನಡೆದ ಸಂಭಾಷಣೆ ಆಡಿಯೋ ಬಹಿರಂಗಗೊಂಡಿದ್ದು ಅದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಮುನಿರತ್ನ ವಿರುದ್ಧ ಕೊಲೆ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಗುತ್ತಿಗೆದಾರ ಚಲುವರಾಜು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದಾರೆ. ಜತೆಗೆ ಶಾಸಕ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ತಮಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಗುತ್ತಿಗೆದಾರ ಚಲುವರಾಜು, ಶಾಸಕ ಮುನಿರತ್ನ ನನ್ನನ್ನು ಕರೆದು ಬೆದರಿಕೆ ಹಾಕಿ 20 ಲಕ್ಷ ಹಣ ಕೇಳಿದ್ದರು. ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ, ಕುಟುಂಬದವರಿಗಾಗಿ ಉಳಿದುಕೊಂಡಿದ್ದೇನೆ. ರೇಣುಕಾಸ್ವಾಮಿಗೆ ಆದ ಗತಿಯೇ ನಿನಗೂ ಆಗುತ್ತೆ ನೋಡು. ರೇಣುಕಾಸ್ವಾಮಿಗೆ ಗತಿ ಕಾಣಿಸಿದ್ದು ನಮ್ಮ ಕಡೆಯವರೇ ಎಂದು ಆವಾಜ್ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಅಶ್ಲೀಲ ಭಾಷೆ :
ಹಣ ವಸೂಲಿ ಮಾಡಲು ಜಾತಿ ನಿಂದನೆ ಮಾಡಿದ್ದಾರೆ, ಹೆಂಡತಿ ಮತ್ತು ತಾಯಿ ಬಗ್ಗೆ ಅತ್ಯಂತ ಅಶ್ಲೀಲ ಭಾಷೆಯಲ್ಲಿ ನಿಂದಿಸಿ ತಮಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಚೆಲುವಾರಜು ಮಾಧ್ಯಮಗಳ ಬಳಿ ಅರೋಪಿಸಿದರು.
ಜತೆಗೆ ಮುನಿರತ್ನ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಸಹ ಮಾಧ್ಯಮಗಳಿಗೆ ಬಿಡುಗಡೆ ಮಾಡಿ, “ಮುಂದೆ ನಾನು ಜೀವಂತವಾಗಿ ಇರ್ತಿನೋ ಇಲ್ವೋ ಗೊತ್ತಿಲ್ಲ. ನನ್ನ ಜಾತಿ ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ಹೆಂಡತಿ ಫೋಟೋ ತೋರಿಸು ಹೇಗಿದ್ದಾಳೆ ಎನ್ನುತ್ತಾರೆ. ಮನಿರತ್ನ ನನ್ನ ಹೆಂಡತಿಯನ್ನು ಮಂಚಕ್ಕೆ ಕಳುಹಿಸು ಎಂದಿದ್ದಾರೆ. ನನ್ನ ತಾಯಿಯ ಬಗ್ಗೆ ಅಸಹ್ಯವಾಗಿ ಮಾತಾಡಿದ್ದಾರೆ” ಎಂದು ಆರೋಪಿಸಿದರು.
key words: BJP MLA Munirathna, BBMP contractor's, wife to bed, demanding bribe