For the best experience, open
https://m.justkannada.in
on your mobile browser.

ಬಿಜೆಪಿ ಸಂಸದರು ರಾಜ್ಯದ ಹಿತ ಕಾಯುವಲ್ಲಿ ಸಂಪೂರ್ಣ ವಿಫಲ- ಸಿಎಂ ಸಿದ್ದರಾಮಯ್ಯ ವಾಗ್ದಾಳಿ

10:29 AM Feb 09, 2024 IST | prashanth
ಬಿಜೆಪಿ ಸಂಸದರು ರಾಜ್ಯದ ಹಿತ ಕಾಯುವಲ್ಲಿ ಸಂಪೂರ್ಣ ವಿಫಲ  ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು,ಫೆಬ್ರವರಿ,9,2024(www.justkannada.in): ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರದ ಬಜೆಟ್ ಗಾತ್ರ ಹೆಚ್ಚಾಗಿದ್ದು, ರಾಜ್ಯಕ್ಕೆ ನೀಡುವ ಅನುದಾನದ ಗಾತ್ರವೂ ಹೆಚ್ಚಾಗಬೇಕಾಗಿತ್ತು. ಇದು ರಾಜ್ಯಕ್ಕೆ ಆಗಿರುವ ಅನ್ಯಾಯ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸಂಸದರು ರಾಜ್ಯದ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ. 2017-18 ರಿಂದ ಇಲ್ಲಿಯವರೆಗೆ ರಾಜ್ಯದ ಪಾಲಿಗೆ 1.87 ಲಕ್ಷ ಕೋಟಿ ತೆರಿಗೆ ಹಂಚಿಕೆ ಬರದೇ ಅನ್ಯಾಯವಾಗಿದೆ. ರಾಜ್ಯಕ್ಕೆ ಈ ಮಟ್ಟದ ನಷ್ಟವಾಗಿರುವುದನ್ನು ಸರಿಯೆಂದು ಬಿಜೆಪಿಯವರು ಹೇಳುತ್ತಾರೆಯೇ?

ನಿನ್ನೆಯ ದಿನ ಪ್ರಧಾನಿ ಮೋದಿ ಅವರು ಅಧಿವೇಶನದಲ್ಲಿ ಮಾತನಾಡುತ್ತಾ, ರಾಜ್ಯ ತನ್ನ ಹಕ್ಕಿನ ಬಗ್ಗೆ ಪ್ರಶ್ನಿಸಿರುವುದನ್ನು ದೇಶ ವಿಭಜನೆ ಮಾಡುವ ವಿಷಯ ಎಂದು ವ್ಯಾಖ್ಯಾನಿಸಿದ್ದಾರೆ. ಪ್ರತಿಭಟನೆ ಮಾಡಿದ ರಾಜ್ಯದ ನಡೆಯನ್ನು ಟೀಕಿಸಿದ ಮೋದಿಯವರು, ತಾವು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಗುಜರಾತ್ ರಾಜ್ಯಕ್ಕೆ ಸಾಕಷ್ಟು ಅನುದಾನ ಹಂಚಿಕೆಯಾಗುತ್ತಿಲ್ಲವೆಂದೂ ಅಂದಿನ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಾ, ‘60 ಸಾವಿರ ಕೋಟಿ ತೆರಿಗೆ ನೀಡುವ ಗುಜರಾತ್ ರಾಜ್ಯಕ್ಕೆ ಅನುದಾನ ಮರಳಿ ಬರುತ್ತಿಲ್ಲ, ಗುಜರಾತ್ ಭಿಕ್ಷೆ ಬೇಡುವ ರಾಜ್ಯವೇ? ಅಥವಾ ನಾವು ಭಿಕ್ಷುಕರೇ, ನಾವು ದೆಹಲಿಯಲ್ಲಿರುವವರ ಕರುಣೆಯ ಮೇಲೆ ಬದುಕಬೇಕೇ?’ಎಂದು ಟ್ವೀಟ್ ಮಾಡಿದ್ದರು.

ಅಲ್ಲದೇ, 2008 ರಲ್ಲಿ ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಗುಜರಾತ್ ರಾಜ್ಯ 40 ಸಾವಿರ ಕೋಟಿ ತೆರಿಗೆ ನೀಡಿದರೂ, ಕೇಂದ್ರದಿಂದ ಕೇವಲ 2.5 ರಷ್ಟು ಅನುದಾನ ಬರುತ್ತಿದೆ. ಇಂತಹ ಕನಿಷ್ಟ ಪ್ರಮಾಣದ ಅನುದಾನ ನೀಡುವ ಬದಲು ಒಂದು ವರ್ಷಗಳ ವರೆಗೆ ಗುಜರಾತ್ ನಿಂದ ತೆರಿಗೆ ಪಡೆಯುವುದನ್ನು ಬಿಟ್ಟುಕೊಡಲಿ’ ಎಂದು ಹೇಳಿದ್ದರು. ಈ ರೀತಿ ಮಾತನಾಡಿದ ಮೋದಿಯವರು, ನಾವು ಪ್ರತಿಭಟನೆ ಮಾಡಿದರೆ ಭಾರತವನ್ನು ಒಡೆಯಲಾಗುತ್ತಿದೆ ಎಂದು ಟೀಕಿಸುತ್ತಿದ್ದಾರೆ. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ತೆರಿಗೆ ಹಂಚಿಕೆ ಬಗ್ಗೆ ಹೇಳಿರುವ ಮಾತಿಗೂ, ಪ್ರಧಾನಿಯಾಗಿ ಈಗ ಹೇಳುತ್ತಿರುವ ಮಾತನಾಡಿರುವ ಮೋದಿಯವರಿಗೆ ಎರಡು ನಾಲಿಗೆಗಳಿವೆಯೇ? ಎರಡು ರೀತಿಯ ಧೋರಣೆ ಹೊಂದಿರುವ ಪ್ರಧಾನಿ ಮೋದಿಯವರ ಮಾತಿಗೆ ಕಿಮ್ಮತ್ತಿರಲು ಸಾಧ್ಯವೇ?  ಎಂದು ಪ್ರಶ್ನಿಸಿದರು.

ನಾವು ರಾಜ್ಯದ ಹಾಗೂ ಕನ್ನಡಿಗರ ಹಿತರಕ್ಷಣೆ ಮಾಡಲು ನಮ್ಮ ಉದ್ದೇಶವಾಗಿದೆ. ಕರ್ನಾಟಕದಿಂದ 4,30,000 ಕೋಟಿ ತೆರಿಗೆ ಕೇಂದ್ರಕ್ಕೆ ಹೋಗಿದೆ. ಆದರೆ ನಮಗೆ 52,257 ಕೋಟಿ ಮಾತ್ರ ರಾಜ್ಯಕ್ಕೆ ಮರಳಿ ಬರುತ್ತದೆ. ಅಂದರೆ 100 ರೂ. ರಲ್ಲಿ ಕೇವಲ 13 ರೂ. ರಾಜ್ಯಕ್ಕೆ ಬರುತ್ತಿದೆ. ಈ ಅನ್ಯಾಯವನ್ನು ನಾವು ಪ್ರಶ್ನಿಸುತ್ತಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುವುದಾಗಿ ಹಾಗೂ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದಾಗಿ ಹೇಳಿದ್ದರು. ಆದರೆ ಹೇಳಿದ್ದ ಅನುದಾನ ಇನ್ನೂ ನೀಡಿಲ್ಲ. ರಾಜ್ಯಕ್ಕೆ 11,495 ಕೋಟಿ ವಿಶೇಷ ಅನುದಾನ ರಾಜ್ಯಕ್ಕೆ ನೀಡಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲವೆಂದ ಕೇಂದ್ರ ವಿತ್ತಸಚಿವೆ, ಆಯೋಗದ ಶಿಫಾರಸ್ಸನ್ನು ಅಲ್ಲಗೆಳೆದು ರಾಜ್ಯಕ್ಕೆ ನೀಡುವ ಈ ಮೊತ್ತವನ್ನು ನೀಡಲು ನಿರಾಕರಿಸಿದ್ದೇಕೆ? ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರದ ಬಜೆಟ್ ಗಾತ್ರ ಹೆಚ್ಚಾಗಿದ್ದು, ರಾಜ್ಯಕ್ಕೆ ನೀಡುವ ಅನುದಾನದ ಗಾತ್ರವೂ ಹೆಚ್ಚಾಗಬೇಕಾಗಿತ್ತು. ಇದು ರಾಜ್ಯಕ್ಕೆ ಆಗಿರುವ ಅನ್ಯಾಯ. ಈ ವಿಷಯದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಕರ್ನಾಟಕದ ಬಿಜೆಪಿ ಸಂಸದರು ರಾಜ್ಯದ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Key words: BJP MPs- completely -failed - interest - state- CM Siddaramaiah

Tags :

.