ತುಂಗಭದ್ರಾ ಡ್ಯಾಂ ವಿಚಾರದಲ್ಲಿ ಬಿಜೆಪಿ ರಾಜಕಾರಣ ಸರಿಯಲ್ಲ- ಸಚಿವ ಶಿವರಾಜ್ ತಂಗಡಗಿ
ಕೊಪ್ಪಳ, ಆಗಸ್ಟ್,12,2024 (www.justkannada.in): ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುವುದು ಸರಿಯಲ್ಲ. ಅದು ಶೋಭೆಯೂ ಅಲ್ಲ ಎಂದು ಸಚಿವ ಶಿವರಾಜ ತಂಗಡಗಿ ಅಸಮಾಧಾನ ವ್ಯಕ್ತಪಡಿಸಿದರು.
ತುಂಗಭದ್ರಾ ಡ್ಯಾಂ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವ ವಿಚಾರದಲ್ಲಿ ಸರ್ಕಾರದ ವಿರುದ್ದ ಕಿಡಿಕಾರಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಸಂಸದ ಜಗದೀಶ್ ಶೆಟ್ಟರ್ ಗೆ ಸಚಿವ ಶಿವರಾಜ ತಂಗಡಗಿ ತಿರುಗೇಟು ನೀಡಿದರು.
ಈ ಕುರಿತು ಮಾತನಾಡಿದ ಅವರು ಜಲಾಶಯ ವಿಷಯದಲ್ಲಿ, ಸಂಸದ ಜಗದೀಶ್ ಶೆಟ್ಟರ್ ರಾಜಕಾರಣ ಮಾತನಾಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈಗ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಯಾರಾದರೂ ಬರಲಿ, ಸಲಹೆ ನೀಡಲಿ. ಆದರೆ ರಾಜಕಾರಣ ಮಾತನಾಡಬಾರದು ಎಂದರು.
ಕೇಂದ್ರದ ಅಧೀನದಲ್ಲಿ ಟಿಬಿ ಡ್ಯಾಂ ಕಂಟ್ರೊಲ್ ನಲ್ಲಿದೆ. ಜಲಾಶಯದ ಕ್ರಸ್ಟ್ ಗೇಟ್ ಎರಡು ರೀತಿಯಲ್ಲಿ ದುರಸ್ತಿ ಕಾರ್ಯದ ಬಗ್ಗೆ ಚಿಂತನೆ ನಡೆಸಿದ್ದೇವೆ. ಒಂದು ಡ್ಯಾಂ ನೀರು ಖಾಲಿ ಮಾಡಿ ಹೊಸ ಗೇಟ್ ಅಳವಡಿಕೆ. ಇನ್ನೊಂದು ನೀರಿನಲ್ಲೇ ಹೊಸ ಗೇಟ್ ಅಳವಡಿಕೆಗೆ ಚಿಂತನೆ ಮಾಡಲಾಗಿದೆ. ಹೊಸಪೇಟೆಯಲ್ಲಿ ಗೇಟ್ ರೆಡಿ ಮಾಡುವ ಕೆಲಸ ಆಗುತ್ತಿದೆ. ಅನೇಕ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಬಿಜೆಪಿ ನಾಯಕರೂ ಬಂದು ಪರಿಶೀಲನೆ ಮಾಡಲಿ ಎಂದರು.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು. ಟಿ.ಬಿ.ಬೋರ್ಡ್ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರಲಿದ್ದು, ಮೂರು ಅವಧಿಯಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಹೇಳಲಿ ಎಂದು ಟಾಂಗ್ ಕೊಟ್ಟರು.
Key words: BJP, politics, Tungabhadra dam, Minister, Shivraj Thangadagi