For the best experience, open
https://m.justkannada.in
on your mobile browser.

20 ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ: ಸಚಿವ ಎನ್‌. ಎಸ್‌ ಭೋಸರಾಜು ಸೂಚನೆ

06:04 PM Jul 05, 2024 IST | prashanth
20 ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ  ಸಚಿವ ಎನ್‌  ಎಸ್‌ ಭೋಸರಾಜು ಸೂಚನೆ

ಮೈಸೂರು, ಜುಲೈ , 5,2024 (www.justkannada.in):  ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿಯಲ್ಲಿ ಕೊರೆಸಲಾದ ಕೊಳವೆ ಬಾವಿಗಳ ವಿದ್ಯುದೀಕರಣ ಪೂರ್ಣಗೊಳಿಸದೇ ಇರುವಂತಹ 20 ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಙಾನ ಸಚಿವ ಎನ್‌. ಎಸ್‌ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಮೈಸೂರಿನ ಜಲದರ್ಶಿನಿ ಸಭಾಂಗಣದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೈಸೂರು ವೃತ್ತದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಸಚಿವ ಬೋಸರಾಜು ಮಾಹಿತಿಯನ್ನು ಪಡೆದುಕೊಂಡರು.

ನಬಾರ್ಡ್‌, ಎಸ್‌ಡಿಆರ್‌ಎಫ್‌ ಮತ್ತು ಆಯವ್ಯಯದಲ್ಲಿ ಘೋಷಣೆ ಮಾಡಲಾದ ಯೋಜನೆಗಳ ಅನುಷ್ಠಾನ ಹಾಗೂ ಅವುಗಳ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಚುನಾವಣೆಯ ಕಾರಣ ನೀಡಿ ಹಲವಾರು ಯೋಜನೆಗಳ ಟೆಂಡರ್‌ ಪ್ರಕ್ರಿಯೆ ನಿಧಾನಗೊಳಿಸಿರುವ ಬಗ್ಗೆ ಸಚಿವರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ವಿಶೇಷ ಘಟಕ ಯೋಜನೆಯ ಅಡಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ,  ಹಲವಾರು ಕಡೆಗಳಲ್ಲಿನ ಬೋರ್‌ ವೆಲ್‌ಗಳನ್ನು ಗುತ್ತಿಗೆದಾರರು ವಿದ್ಯುದೀಕರಣಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಿಲ್ಲ. ಕೆಲವು ಪ್ರಕರಣಗಳಲ್ಲಿ ಮೂರು ವರ್ಷಗಳಿಂದ ಈ ಕಾರ್ಯವನ್ನ ಬಾಕಿ ಉಳಿಸಿಕೊಳ್ಳಲಾಗಿದೆ. ಇದನ್ನು ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಕಪ್ಪುಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸಚಿವ ಬೋಸರಾಜು ಸೂಚನೆ ನೀಡಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕೈಗೊಳ್ಳಬೇಕಾಗಿದ್ದ 7 ಕೆರೆ ತುಂಬಿಸುವ ಯೋಜನೆಗೆ ಮಾರ್ಚ್ 2022 ರಲ್ಲಿ ಟೆಂಡರ್‌ ಪ್ರಕ್ರಿಯೆ ಪೂರೈಸಿ ಕರಾರು ಪತ್ರವನ್ನು ಮಾಡಿಕೊಡಲಾಗಿತ್ತು. ಇದುವರೆಗೂ ಕಾಮಗಾರಿಯನ್ನು ಪ್ರಾರಂಭಿಸಲ್ಲ. ಕಾಮಗಾರಿ ಪ್ರಾರಂಭಿಸುವಂತೆ ಹಲವಾರು ಬಾರಿ ಗುತ್ತಿಗೆದಾರರಿಗೆ ನೋಟೀಸ್‌ ನೀಡಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಹೈದರಬಾದ್‌ ನ ಅಯ್ಯಪ್ಪ ಕನ್ ಷ್ಟ್ರಕ್ಷನ್‌ ಅವರಿಗೆ ನೀಡಿದ್ದ ಗುತ್ತಿಗೆಯನ್ನು ರದ್ದುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಯಾವುದೇ ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ಇದನ್ನು ಪೂರ್ಣಗೊಳಿಸದೇ ಬೇರೆ ಪ್ರಕ್ರಿಯೆ ಪ್ರಾರಂಭಿಸಿದರೆ ಬಹಳಷ್ಟು ತೊಂದರೆಗಳೂ ಎದುರಾಗುತ್ತವೆ. ಈ ಹಿನ್ನಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಆದ್ಯತೆ ನೀಡುವಂತೆ ಸಚಿವ ಬೋಸರಾಜು ಸೂಚನೆ ನೀಡಿದರು.

ಕೆರೆಗಳನ್ನ ಸುಸ್ಥಿತಿಯಲ್ಲಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಮಳೆ ನೀರು ಹೆಚ್ಚಾಗಿ ಸಂಗ್ರಹವಾಗುವಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೇ, ಮುಗಿದಿರುವ ಕಾಮಗಾರಿಗಳ ವರದಿಯನ್ನು ಸಕಾಲಕ್ಕೆ ಸಲ್ಲಿಸಬೇಕು. ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸಗಳನ್ನ ಚುರುಕುಗೊಳಿಸಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ದಕ್ಷಿಣ ವಲಯದ ಮುಖ್ಯ ಅಭಿಯಂತರರಾದ ರಾಘವನ್‌, ಸೂಪರೀಂಡೆಂಟ್‌ ವಿನಾಯಕ್‌ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Key words: Blacklist, 20 contractors, Minister, N. S Bhosaraju, mysore

Tags :

.