ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಸರಿಯಲ್ಲ- ಕೇಂದ್ರ ಸಚಿವ ಹೆಚ್.ಡಿಕೆ ತಿರುಗೇಟು
ಮೈಸೂರು,ಜುಲೈ,28,2024 (www.justkannada.in): ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ತಿರುಗೇಟು ನೀಡಿದ ಹೆಚ್.ಡಿ ಕುಮಾರಸ್ವಾಮಿ, ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಸರಿಯಲ್ಲ ಎಂದಿದ್ದಾರೆ.
ಇಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ಈ ಹಿಂದೆ ಸಿಎಂ ಆಗಿ, ಇದೀಗ ಕೇಂದ್ರ ಸಚಿವನಾಗಿ ಸ್ವಲ್ಪ ಅನುಭವ ಪಡೆದಿದ್ದೇನೆ. ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಭೀಕರ ಪ್ರವಾಹ ಬಂತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿತು. ಸ್ವತಃ ಪ್ರಧಾನಿಯವರೇ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದರು. ಅಂತಹ ವಾತಾವರಣವನ್ನು ನೀವೇಕೆ ಸೃಷ್ಟಿಸಿಕೊಂಡಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಏಕೆ ದೂರುತ್ತೀರಿ. ರಾಜ್ಯದ ಸಂಸದರ ಮೇಲೆ ಏಕೆ ಆರೋಪಗಳನ್ನು ಮಾಡುತ್ತೀರಿ. ಹಾಗಾದರೆ ರಾಜ್ಯ ಸರ್ಕಾರದ ಕೆಲಸವಾದರೂ ಏನು? ನೀವು ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಕೇಂದ್ರದ ಮುಂದೆ ಸಮರ್ಥವಾಗಿ ಇಡಬೇಕು. ಅದು ಬಿಟ್ಟು ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಕೇವಲ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ನಾನು ಎಲ್ಲಿಗಾದರೂ ಭೇಟಿ ನೀಡಿದ್ರೆ, ಸಭೆ ಮಾಡಿದ್ರೆ ಅಧಿಕಾರಿಗಳನ್ನ ಹೋಗಬೇಡಿ ಎಂದು ಹೇಳುತ್ತಾರೆ. ಕರ್ನಾಟಕ, ಮಂಡ್ಯಕ್ಕೆ ಬರಲೇಬೇಡಿ ಎನ್ನುತ್ತಾರೆ. ಇಂತಹವರಿಂದ ರಾಜ್ಯದ ಅಭಿವೃದ್ಧಿ ಆಗುತ್ತಾ. ಕೇವಲ ಕಾಟಾಚಾರಕ್ಕೆ ಪ್ರಧಾನಿ ಭೇಟಿ ಆಗಿ ಬರೋದಲ್ಲ. ರಾಜ್ಯಕ್ಕೆ ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ಪಟ್ಟಿ ಮಾಡಿ ಕೊಡಬೇಕು. ರಾಜ್ಯದ ಅಭಿವೃದ್ಧಿ ಬಗ್ಗೆ ಕೇಂದ್ರಕ್ಕೆ ಪ್ರೊಪೋಸಲ್ ಕೊಡಬೇಕು. ರಾಜ್ಯದ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾಳಜಿ ಇಟ್ಟಿದ್ದೇನೆ. ನಾನೀಗ ಕೇವಲ ಒಂದು ತಿಂಗಳಾಗಿದೆ ಸಚಿವರಾಗಿ. ಕಾವೇರಿ ಸಮಸ್ಯೆ ಒಂದು ತಿಂಗಳಿಗೆ ಬಗೆಹರಿಸಿ ಎನ್ನುತ್ತಾರೆ. ಎಲ್ಲದಕ್ಕೂ ಕಾಲಾವಕಾಶ ಬೇಕಿದೆ ಎಂದು ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಹೇಳಿದರು.
ನಾನು ಮೇಕೆದಾಟುಗೆ ಪ್ರಯತ್ನ ಮಾಡುತ್ತೇನೆ. ಒಂದೇ ರಾತ್ರಿಯಲ್ಲಿ ಮೇಕೆದಾಟು ಮಾಡೋಕೆ ಆಗುತ್ತಾ. ಕರ್ನಾಟಕದ 4 ಜಲಾಶಯ ಕಟ್ಟೋಕೆ ಕೇಂದ್ರದಿಂದ ಒಂದು ಪೈಸೆ ಕೊಟ್ಟಿಲ್ಲ. ಕರ್ನಾಟಕದ ಜಲಾಶಯವನ್ನು ಕರ್ನಾಟಕದವರೇ ಕಟ್ಟಿರೋರು. ಸರ್ವಪಕ್ಷಗಳ ಸಭೆ ಬಿಟ್ಟು ನೀವು ನಿಯೋಗದ ಮೂಲಕ ಸ್ಟಾಲಿನ್ ಹತ್ತಿರ ಹೋಗಿ ಚರ್ಚೆ ಮಾಡಲಿ. ಯಾವತ್ತಾದರೂ ಸ್ಟಾಲಿನ್ ಹತ್ತಿರ ಹೋಗಿ ಚರ್ಚೆ ಮಾಡಿದ್ದೀರಾ. ತಮಿಳುನಾಡು 1 ಟಿಎಂಸಿ ಕೇಳಿದ್ರು. ಮಳೆ ಬಂತು ಹೆಚ್ಚು ನೀರು ಹೋಗ್ತಾ ಇದೆ. ಈ ವಿಚಾರಕ್ಕೆ ಟೆಕ್ನಿಕಲ್ ಆಗಿ ಚರ್ಚೆ ಮಾಡಿದ್ರೆ ಒಳ್ಳೆಯದು ಎಂದು ಹೆಚ್.ಡಿಕೆ ಸಲಹೆ ನೀಡಿದರು.
Key words: blame, central government, Union Minister HDK