For the best experience, open
https://m.justkannada.in
on your mobile browser.

ಪ್ರತಿನಿತ್ಯ ಬೈದರೆ ಪ್ರಧಾನಿ ಮೋದಿ ಏಕೆ ಸಿದ್ದು ಭೇಟಿ ಆಗ್ತಾರೆ ಎಂಬ ಬಿಎಸ್ ವೈ ಹೇಳಿಕೆ ಕನ್ನಡಿಗರಿಗೆ  ಮಾಡಿರುವ ಅವಮಾನ- ಸಿಎಂ ಸಿದ್ಧರಾಮಯ್ಯ

03:50 PM Nov 03, 2023 IST | prashanth
ಪ್ರತಿನಿತ್ಯ ಬೈದರೆ ಪ್ರಧಾನಿ ಮೋದಿ ಏಕೆ ಸಿದ್ದು ಭೇಟಿ ಆಗ್ತಾರೆ ಎಂಬ ಬಿಎಸ್ ವೈ ಹೇಳಿಕೆ ಕನ್ನಡಿಗರಿಗೆ  ಮಾಡಿರುವ ಅವಮಾನ  ಸಿಎಂ ಸಿದ್ಧರಾಮಯ್ಯ

ಬೆಂಗಳೂರು,ನವೆಂಬರ್,3,2023(www.justkannada.in): ಪ್ರತಿನಿತ್ಯ ಬೈದರೆ ಪ್ರಧಾನಿ ನರೇಂದ್ರ ಮೋದಿ ಏಕೆ ಸಿದ್ದು ಭೇಟಿ ಆಗ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿರುವುದು ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾಡಿರುವ ಅವಮಾನ. ಒಂದು ಕಾಲದಲ್ಲಿ ನರೇಂದ್ರ ಮೋದಿ ಅವರನ್ನು ಬಾಯಿಗೆ ಬಂದಂತೆ ಬೈದಾಡಿದ್ದ ಯಡಿಯೂಪರಪ್ಪನವರು ತನ್ನ ರಾಜಕೀಯ ಅಸ್ವಿತ್ವ ಉಳಿಸಿಕೊಳ್ಳಲು ಇಂತಹ ಗುಲಾಮಿ ಮನೋಭಾವ ಬೆಳೆಸಿಕೊಂಡಿರುವುದು ವಿಷಾದನೀಯ ಎಂದು ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಮಾಜಿ ಸಿಎಂ ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಸಿದ್ಧರಾಮಯ್ಯ,  ನರೇಂದ್ರ ಮೋದಿಯವರ ವಿರುದ್ಧ ವೈಯಕ್ತಿಕವಾಗಿ ನನಗೇನು ಪ್ರೀತಿ ಇಲ್ಲವೇ ದ್ವೇಷ ಇಲ್ಲ. ವೈಯಕ್ತಿಕವಾಗಿ ಅವರೇನು ನನಗೆ ಹಾನಿ ಮಾಡಿಲ್ಲ. ಆದರೆ ಆರೂವರೆ ಕೋಟಿ ಜನರನ್ನು ಪ್ರತಿನಿಧಿಸುತ್ತಿರುವ ಮುಖ್ಯಮಂತ್ರಿಯಾಗಿ ನಮ್ಮ ಜನರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಕಂಡು ಕಣ್ಣುಮುಚ್ಚಿಕೊಂಡು ಇರಲಾಗುವುದಿಲ್ಲ. ಈ ಪ್ರಶ್ನಿಸುವ ಕೆಲಸವನ್ನು ಮಾಡದೆ ಇದ್ದರೆ ಅದು ಜನದ್ರೋಹವಾಗುತ್ತದೆ.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವುದನ್ನು ಯಡಿಯೂರಪ್ಪನವರು ಮರೆತುಬಿಟ್ಟಂತಿದೆ. ಕೇಂದ್ರ ಸರ್ಕಾರ ಎಂದರೆ ಅರಸೊತ್ತಿಗೆಯೂ ಅಲ್ಲ, ಮೋದಿಯವರು ಅರಸರೂ ಅಲ್ಲ. ಅವರೂ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿ ಅಷ್ಟೆ. ಒಕ್ಕೂಟ ವ್ಯವಸ್ಥೆಯಲ್ಲಿರುವ ಮುಖ್ಯಮಂತ್ರಿಗಳು ಪ್ರಧಾನಿಯ ಗುಲಾಮರಲ್ಲ. ಇಷ್ಟೊಂದು ದೀರ್ಘಕಾಲ ರಾಜಕೀಯದಲ್ಲಿರುವ ಯಡಿಯೂರಪ್ಪನವರಿಗೆ ಪ್ರಜಾಪ್ರಭುತ್ವದ ಈ ಮೂಲ ಪಾಠ ತಿಳಿಯದೆ ಇರುವುದು ದುರಂತವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಹಳ ಮುಖ್ಯವಾಗಿ ಬಿ.ಎಸ್. ಯಡಿಯೂರಪ್ಪನವರಿಗೆ ಈ ರೀತಿ ಹೇಳಿಕೆ ನೀಡುವ ಯಾವ ನೈತಿಕತೆ ಇಲ್ಲವೇ ಇಲ್ಲ. ಬಿಜೆಪಿ ತೊರೆದು ಸ್ವಂತ ಪಕ್ಷ ಕಟ್ಟಿಕೊಂಡ ದಿನಗಳಲ್ಲಿ ಯಡಿಯೂರಪ್ಪ ಮತ್ತು ಬೆಂಬಲಿಗರು ಕೇವಲ ಮೋದಿಯವರ ವಿರುದ್ಧ ಮಾತ್ರ ಅಲ್ಲ ಎಲ್.ಕೆ.ಅಡ್ವಾನಿಯವರಂತಹ ಪಕ್ಷದ ಹಿರಿಯ ನಾಯಕರ ವಿರುದ್ಧ ಹೇಗೆಲ್ಲಾ ಬೈದಿದ್ದಾರೆ ಎನ್ನುವುದನ್ನು ರಾಜ್ಯದ ಜನ ಕಂಡಿದ್ದಾರೆ.

ರಾಜಾಹುಲಿ ಎಂದು ಕರೆಸಿಕೊಳ್ಳುವ ಬಿಎಸ್ ವೈ ಅವರು  ಮೋದಿ ಮುಂದೆ ಇಲಿಯಂತೆ ವರ್ತಿಸುವುದು ಅವರ ವ್ಯಕ್ತಿತ್ವಕ್ಕೆ ಭೂಷಣ ಅಲ್ಲ.

ಬಿ.ಎಸ್.ಯಡಿಯೂರಪ್ಪನವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರೂ ಹೊತ್ತು ಹಾಡಿ ಹೊಗಳುತ್ತಿದ್ದಾರೆ. ಹೀಗಿದ್ದರೂ ಈಗಲೂ ಅವರಿಗೆ ಕೂತು ನಿರಾಳವಾಗಿ ಮಾತನಾಡಲು ಮೋದಿಯವರು ಒಂದು ಅಪಾಯ್ಟ್‌ಮೆಂಟ್ ಕೊಡುತ್ತಿಲ್ಲ. ದೆಹಲಿಗೆ ಹೋಗಿ ದಿನಗಟ್ಟಲೆ ಅವರು ಕಾಯಬೇಕಾಗುತ್ತದೆ. ಕರ್ನಾಟಕದಲ್ಲಿ ರಾಜಾ ಹುಲಿ ಎಂದು ಕರೆಸಿಕೊಳ್ಳುವ ಯಡಿಯೂರಪ್ಪನವರು ನರೇಂದ್ರ ಮೋದಿಯವರ ಮುಂದೆ ಇಲಿಯಂತೆ ವರ್ತಿಸುವುದು ಅವರ ವ್ಯಕ್ತಿತ್ವಕ್ಕೆ ಭೂಷಣ ಅಲ್ಲ ಎಂದು ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದ್ದಾರೆ.

ಮೊನ್ನೆಮೊನ್ನೆಯವರೆಗೆ ಆರ್.ಎಸ್.ಎಸ್, ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರು ಆದ ಹೆಚ್. ಡಿ ಕುಮಾರಸ್ವಾಮಿ ಅವರು ಹಿಗ್ಗಾಮುಗ್ಗಾ ಬೈದಾಡುತ್ತಿದ್ದರು. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಕುಮಾರಸ್ವಾಮಿಯವರನ್ನು ಕರೆಸಿ ಮಾತನಾಡಿ ಬೆನ್ನು ತಟ್ಟಿ ಕಳುಹಿಸುತ್ತಾರೆ. ಕುಮಾರಸ್ವಾಮಿ ಬೈದಾಡಿದ್ದು ಮೋದಿಯವರಿಗೆ ತಿಳಿದಿರಲಿಲ್ಲವೇ? ಇದ್ಯಾವ ಸೀಮೆಯ ಸ್ವಾಭಿಮಾನಿ ನಡವಳಿಕೆ ಎಂದು ಸಿಎಂ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ನನಗೆ ತೀವ್ರ ಅಸಮಾಧಾನ ಇದೆ. ಇದಕ್ಕಿಂತಲೂ ಅಸಮಾಧಾನ ಎಲ್.ಕೆ.ಅಡ್ವಾಣಿ, ಬಿ.ಎಸ್. ಯಡಿಯೂರಪ್ಪನವರಂತಹ ತಮ್ಮದೇ ಪಕ್ಷದ ಹಿರಿಯ ನಾಯಕರನ್ನು ನಡೆಸಿಕೊಳ್ಳುವ ಬಗ್ಗೆಯೂ ಇದೆ.

ಯಡಿಯೂರಪ್ಪನವರೇ, ನೀವು ನಿಮ್ಮ ನಾಯಕರ ಮೇಲೆ ಬರಪೂರ ಹೊಗಳಿಕೆಯ ಮಳೆ ಸುರಿಸಿ, ಮನಸ್ಸಿಗೆ ತೃಪ್ತಿ ಆಗುವಷ್ಟು ಓಲೈಸಿ, ಬೇಕಿದ್ದರೆ ಕಾಲುಗಳನ್ನು ಬೇಕಾದರೂ ಹಿಡಿಯಿರಿ, ನಮಗೇನು ಅಭ್ಯಂತರ ಇಲ್ಲ. ಅದರಿಂದಾದರೂ ರಾಜ್ಯದ ಜನತೆಗೆ ನ್ಯಾಯ ಸಿಗಲಿ ಎಂದು ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

Key words: BSY- statement –pm- Modi - insult - Kannadigas- CM- Siddaramaiah

Tags :

.