For the best experience, open
https://m.justkannada.in
on your mobile browser.

ಬಿಜೆಪಿ-ಜೆಡಿಎಸ್ ಮೈತ್ರಿಗೆ ಮತದಾರರ ಒಪ್ಪಿಗೆ ಇಲ್ಲ ಎಂಬುದು ಉಪಚುನಾವಣೆ ಫಲಿತಾಂಶದಿಂದ ಸ್ಪಷ್ಟ- ಸಿಎಂ ಸಿದ್ದರಾಮಯ್ಯ.

06:37 PM Feb 20, 2024 IST | prashanth
ಬಿಜೆಪಿ ಜೆಡಿಎಸ್ ಮೈತ್ರಿಗೆ ಮತದಾರರ ಒಪ್ಪಿಗೆ ಇಲ್ಲ ಎಂಬುದು ಉಪಚುನಾವಣೆ ಫಲಿತಾಂಶದಿಂದ ಸ್ಪಷ್ಟ  ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಫೆಬ್ರವರಿ,20,2024(www.justkannada.in): ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ಮೈತ್ರಿಯಾಗಿದೆಯೇ ವಿನಃ ಇದಕ್ಕೆ ಮತದಾರರ ಒಪ್ಪಿಗೆ ಇಲ್ಲ ಎಂಬುದನ್ನು ವಿಧಾನ ಪರಿಷತ್ ಉಪಚುನಾವಣೆ ಫಲಿತಾಂಶ ಸ್ಪಷ್ಟಪಡಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ವಿಧಾನ ಪರಿಷತ್‌ ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣನವರಿಗೆ ಅಭಿನಂದನೆಗಳು.  ಇದು ನಮ್ಮ ಸರ್ಕಾರದ 9 ತಿಂಗಳ ಜನಪರವಾದ ಆಡಳಿತ ಮತ್ತು ಸರ್ಕಾರದ ಬಗ್ಗೆ ಪ್ರಜ್ಞಾವಂತ ಮತದಾರರು ಇಟ್ಟಿರುವ ವಿಶ್ವಾಸದ ಗೆಲುವಾಗಿದೆ. ಈ ಮೂಲಕ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ನ ಜಾತ್ಯತೀತ ಮುಖವಾಡ ಕಳಚಿದೆ.  ಜೆಡಿಎಸ್‌ ನ ಕೋಮುವಾದಿ ಅವತಾರಕ್ಕೆ ಮತದಾರ ಕಪಾಳಮೋಕ್ಷ ಮಾಡಿದ್ದಾನೆ ಎಂದು ಲೇವಡಿ ಮಾಡಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ತಮ್ಮ‌ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹೊರತಾಗಿಯೂ ಸೋಲು ಕಂಡಿವೆ. ಇದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ನಡುವಿನ ಮೈತ್ರಿಯೇ ಹೊರತು ಎರಡೂ ಪಕ್ಷಗಳ ಮತದಾರರ ನಡುವಿನ ಮೈತ್ರಿಯಲ್ಲ ಎಂಬುದು ಸಾಬೀತಾಗಿದೆ.

ಕುಟುಂಬದ ಹಿತಕ್ಕಾಗಿ‌ ಕೋಮುವಾದಿಗಳ ಜೊತೆ ಕೈಜೋಡಿಸಿರುವ ಜೆಡಿಎಸ್ ಪಕ್ಷವನ್ನು ಹಾಗೂ ಸದಾಕಾಲ ಕುಟುಂಬ ರಾಜಕಾರಣದ ವಿರುದ್ಧ ಟೀಕೆ ಮಾಡಿ, ಒಂದು ಕುಟುಂಬವೇ ರಾಜಕೀಯ ಪಕ್ಷದಂತಿರುವ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿಯನ್ನು ಮತದಾರ ಬಂಧುಗಳ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಸ್ವಾರ್ಥ ಸಾಧನೆಯೊಂದೇ ಗುರಿಯಾಗಿರುವ ಈ ಅಪವಿತ್ರ ಮೈತ್ರಿಗೆ ಗ್ಯಾರಂಟಿ, ವಾರೆಂಟಿ ಯಾವುದೂ ಇಲ್ಲ. ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಮತ್ತವರ ಕುಟುಂಬ ಕೇಸರಿಶಾಲು ಕಿತ್ತೆಸೆಯುವುದು ನಿಶ್ಚಿತ ಎಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

Key words: by-election - BJP-JDS- alliance- does not - voters - CM Siddaramaiah.

Tags :

.