ಮಹಿಳೆಯರಿಗೆ ಅನ್ಯಾಯ: ಕೇಂದ್ರ ಆದಷ್ಟು ಬೇಗ ಶೇ. 33 ರಷ್ಟು ಮಹಿಳಾ ಮೀಸಲಾತಿ ತರಲಿ-ಡಾ. ಪುಷ್ಪಾ ಅಮರನಾಥ್ ಒತ್ತಾಯ.
ಮೈಸೂರು,ಫೆಬ್ರವರಿ,14,2024(www.justkannada.in): ರಾಜಕೀಯ ಪ್ರಾತಿನಿಧ್ಯದಲ್ಲಿ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಶೇ. 33 ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರಬೇಕು ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಒತ್ತಾಯಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಡಾ.ಪುಷ್ಪಾ ಅಮರನಾಥ್, ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ಜಾರಿ ಮಾಡುತ್ತೇವೆ ಅಂತ ಹೇಳಿ ಇನ್ನೂ ಮೀನಾಮೇಷ ಎಣಿಸುತ್ತಿದೆ. ಈಗ ಜಾರಿ ಮಾಡಿದ್ರೆ ನನ್ನಂತಹ ಎಷ್ಟೋ ಹೆಣ್ಣು ಮಕ್ಕಳಿಗೆ ಅನುಕೂಲವಾಗುತಿತ್ತು. ಈಗ ನಾನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ನಾವು ಸ್ಪರ್ಧೆ ಮಾಡುವುದಕ್ಕೆ ಆಗುತ್ತಿಲ್ಲ. ಈಗ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಜಿಲ್ಲಾ ಪಂಚಾಯಿತಿ ಎಲ್ಲಾ ಕಡೆ ಮಹಿಳೆಯರಿಗೆ ಒಂದಷ್ಟು ಮೀಸಲಾತಿ ಇರುವುದರಿಂದ ನಮ್ಮಂತ ಮಹಿಳೆಯರಿಗೆ ಅಧಿಕಾರ ದಕ್ಕಿದೆ. ಇಲ್ಲೂ ಕೂಡ ಆ ಕೆಲಸ ಆಗಬೇಕು. ನಿಜವಾಗಿಯೂ ಕೆಲವೊಮ್ಮೆ ಮಹಿಳೆಯರನ್ನ ಕಡೆಗಣಿಸುತ್ತಿರುವುದು ಬೇಸರ ತರಿಸುತ್ತೆ. ಹೀಗಾಗಿ ಕೇಂದ್ರ ಸರ್ಕಾರ ಆದಷ್ಟು ಬೇಗ ಶೇ. 33 ರಷ್ಟು ಮಹಿಳಾ ಮೀಸಲಾತಿ ತರಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಪುಷ್ಪಾ ಅಮರನಾಥ್ ತಿಳಿಸಿದರು.
ಅಕ್ಕಿ ಮಾರಾಟ ಮಾಡುವ ಮೂಲಕ ಜನರ ಅಕ್ಕಿಲೂ ಬಿಜೆಪಿ ವ್ಯಾಪಾರ.
ಕೇಂದ್ರ ಸರ್ಕಾರದಿಂದ ಭಾರತ್ ಬ್ರಾಂಡ್ ಅಕ್ಕಿ ವಿತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಪುಷ್ಪಾ ಅಮರನಾಥ್, ಅಕ್ಕಿ ಕೊಡೋದು ಸರಿ ಅದನ್ನ ಉಚಿತವಾಗಿ ಕೊಡಬೇಕಿತ್ತು. ಅಕ್ಕಿ ಮಾರಾಟ ಮಾಡುವ ಮೂಲಕ ಜನರ ಅಕ್ಕಿಲೂ ಬಿಜೆಪಿ ವ್ಯಾಪಾರ ಶುರು ಮಾಡಿದೆ. ನಮ್ಮ ರಾಜ್ಯ ಸರ್ಕಾರ ಹಣ ಕೊಟ್ಟು ಅಕ್ಕಿ ಕೇಳಿದ್ರೆ ಕೊಡಲಿಲ್ಲ. ಈಗ ಬಿಜೆಪಿಯವರು ಅಕ್ಕಿ ಮಾರಾಟ ಶುರು ಮಾಡಿದ್ದಾರೆ. ಇದು ಆಘಾತಕಾರಿ ವಿಚಾರ. ಇವರಿಗೆ ನಾಚಿಕೆ ಆಗಬೇಕು. ನಾವು ಕೇಳಿದಾಗ ಅಕ್ಕಿ ಕೊಡದೇ ಈಗ 29 ರೂ. ಗೆ ಮಾರಾಟ ಮಾಡಲು ಹೋಗಿದ್ದಾರೆ. ಮುಂದೊಂದು ದಿನ ಎಲ್ಲವನ್ನೂ ಮಾರಿ ಬಿಡ್ತಾರೆ. ಜನ ಇದರ ಬಗ್ಗೆ ಯೋಚನೆ ಮಾಡಬೇಕು ಎಂದು ತಿಳಿಸಿದರು.
ನಮ್ಮ ರಾಜ್ಯದ ಸಂಸದರು ನಾಲಾಯಕ್ ಸಂಸದರು. ನಮ್ಮ ರಾಜ್ಯಕ್ಕೆ ಆಗುವ ಅನ್ಯಾಯವನ್ನ ಕೇಳುವ ಧೈರ್ಯ ಮಾಡಲಿಲ್ಲ.ಇಂತವರನ್ನ ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸಿ ಕನ್ನಡ ನಾಡು, ನುಡಿ ಜಲಕ್ಕಾಗಿ ಹೋರಾಡುವ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಿ ಕಳುಹಿಸಿಕೊಡಬೇಕು ಎಂದು ಪುಷ್ಪಾ ಅಮರನಾಥ್ ಮನವಿ ಮಾಡಿದರು.
Key words: Center – possible- Bring- 33 percent -women's- reservation-congress-Dr. Pushpa Amarnath