For the best experience, open
https://m.justkannada.in
on your mobile browser.

ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟು ಪಂಗನಾಮ ಹಾಕಿದ್ದಾರೆ- ಸಿಎಂ ಸಿದ್ದರಾಮಯ್ಯ ಕಿಡಿ

05:50 PM Jul 23, 2024 IST | prashanth
ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟು ಪಂಗನಾಮ ಹಾಕಿದ್ದಾರೆ  ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು,ಜುಲೈ,23,2024 (www.justkannada.in): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಏನನ್ನೂ ನೀಡದೆ ಚೊಂಬು ಕೊಟ್ಟು ಪಂಗನಾಮ ಹಾಕಿದ್ದಾರೆ. ರಾಜ್ಯದ ಯಾವುದೇ ಬೇಡಿಕೆಗಳಿಗೂ ಮನ್ನಣೆ ನೀಡದೆ ಅತ್ಯಂತ ನಿರಾಶಾದಾಯಕ ಬಜೆಟ್‌ ಮಂಡಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿಯಾಗಿ ಉಳಿಯಬೇಕೇಂದರೇ ಬಿಹಾರ ಆಂಧ್ರ ಬೆಂಬಲ ಬೇಕು. ಹೀಗಾಗಿ ಆ ಎರಡು ರಾಜ್ಯಗಳಿಗೆ ಮಾತ್ರ ವಿಶೇಷ ಅನುದಾನ ನೀಡಿದ್ದಾರೆ. ಬಿಹಾರ ಆಂಧ್ರ ಬಿಟ್ಟರೇ ಬೇರೆ ರಾಜ್ಯಗಳಿಗೆ ಬಜೆಟ್ ನಲ್ಲಿ ಅನುದಾನ ನೀಡಿಲ್ಲ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಯಾವುದೇ ಅನುದಾನ ನೀಡದೇ  ನಿರ್ಲಕ್ಷಿಸಿದ್ದಾರೆ. ನಿರ್ಮಲಾ ಮೇಲಿದ್ದ ನಿರೀಕ್ಷೆ ಹುಸಿಯಾಗಿದೆ ಎಂದು ಕಿಡಿಕಾರಿದರು.

ಕೇಂದ್ರದಲ್ಲಿ ರಾಜ್ಯದ ಐವರು ಸಚಿವರಿದ್ದರೂ ಏನನ್ನೂ ಕೊಟ್ಟಿಲ್ಲ. ರಾಜ್ಯದ ಹೆಚ್.ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಸೋಮಣ್ಣ, ಶೋಭಾ ಕರಂದ್ಲಾಜೆ ಇವರಿದ್ದರೂ ರಾಜ್ಯಕ್ಕೆ ಯಾವುದೇ ಅನುದಾನ ನೀಡಿಲ್ಲ. ಬಜೆಟ್‌ ಪೂರ್ವ ಸಭೆಯಲ್ಲಿ ರಾಜ್ಯ ಸರ್ಕಾರ ಹಲವಾರು ಮನವಿಗಳನ್ನು ಮುಂದಿರಿಸಿತ್ತು. ಆದರೆ ಯಾವುದೇ ಬೇಡಿಕೆಗಳಿಗೂ ಕೇಂದ್ರ ಹಣಕಾಸು ಸಚಿವರು ಸ್ಪಂದಿಸಿಲ್ಲ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಒದಗಿಸುವುದಾಗಿ ಹಿಂದಿನ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮ್‌ ಅವರು ಘೋಷಿಸಿದ್ದರು. ಆದರೆ ಈ ಯೋಜನೆಗೆ ನಯಾ ಪೈಸೆ ಒದಗಿಸಿಲ್ಲ. ಈ ಆಯವ್ಯಯದಲ್ಲಿ ಒದಗಿಸುವಂತೆ ಕೋರಲಾಗಿತ್ತು. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈ ವರ್ಷ 5ಸಾವಿರ ಕೋಟಿ ರೂ. ಅನುದಾನ ಒದಗಿಸುತ್ತಿದೆ. ಆದರೆ ಇದಕ್ಕೆ ಪೂರಕವಾಗಿ ಹಿಂದುಳಿದ ತಾಲ್ಲೂಕುಗಳಿಗೆ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿತ್ತು. ಇದೇ ರೀತಿ ಮಹಾದಾಯಿ ಯೋಜನೆ, ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಕುರಿತು ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದೆ ರೈತರಿಗೆ ಮೋಸ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.

15 ನೇ ಹಣಕಾಸು ಆಯೋಗದ ಶಿಫಾರಸಿನಂತೆ ಪೆರಿಫೆರಲ್‌ ರಸ್ತೆ ನಿರ್ಮಾಣ, ಕೆರೆಗಳ ಅಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ ಯೋಜನೆಗಳಿಗೆ ಒಟ್ಟು 11,485 ಕೋಟಿ ರೂ. ಅನುದಾನವನ್ನು ನೀಡುವಂತೆ ಕೋರಲಾಗಿತ್ತು. ಜೊತೆಗೆ ಹಲವಾರು ವರ್ಷಗಳಿಂದ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸುವಂತೆ ಬೇಡಿಕೆಯಿದ್ದು, ಬಜೆಟ್‌ ಪೂರ್ವಭಾವಿ ಸಭೆಯಲ್ಲಿಯೂ ಈ ಕುರಿತು ಬೇಡಿಕೆ ಸಲ್ಲಿಸಲಾಗಿತ್ತು. ಈ ಯಾವ ಮನವಿಗಳಿಗೂ ಕೇಂದ್ರ ಸರ್ಕಾರ ಮನ್ನಣೆ ನೀಡಿಲ್ಲ. ಈ ಹಿಂದಿನ ಬಜೆಟ್‌ನಲ್ಲಿ ರಾಜ್ಯಕ್ಕೆ ಘೋಷಿಸಿದ್ದ ಯೋಜನೆಗಳಿಗೇ ಕೇಂದ್ರ ಸರ್ಕಾರ ಇನ್ನೂ ಯಾವುದೇ ಅನುದಾನ ಒದಗಿಸಿಲ್ಲ. ಹೀಗಾಗಿ ಈ ಬಾರಿ ಕೈಗಾರಿಕಾ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿರುವುದು ಕೇವಲ ಘೋಷಣೆಯಾಗಿ ಮಾತ್ರ ಉಳಿಯಲಿದೆ ಎಂದರು.

ಈ ಬಜೆಟ್‌ ಜನವಿರೋಧಿಯಾಗಿದ್ದು, ವಿಶೇಷವಾಗಿ ಬಡವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.  ಈ ಬಜೆಟ್ ನಲ್ಲಿ ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರೈತರು 5 ವರ್ಷಗಳಿಂದ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ರಚಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಬಜೆಟ್ ನಲ್ಲಿ ಚಕಾರವನ್ನೇ ಎತ್ತಿಲ್ಲ. ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸುಗಳ ಜಾರಿ ಬಗ್ಗೆಯೂ ಯಾವುದೇ ಮಾತು ಆಡದೆ ರೈತರಿಗೆ ಪಂಗನಾಮ ಹಾಕಿದೆ ಎಂದು ಹೇಳಿದರು.

ಕೇಂದ್ರ ಸಂಪುಟದಲ್ಲಿ ರಾಜ್ಯದ ಐದು ಜನ‌ ಸಚಿವರಾಗಿದ್ದರೂ, ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ, ಈ‌ ಐದೂ ಮಂದಿ ರಾಜ್ಯಕ್ಕೆ ಅನುಕೂಲ ಮಾಡಿಸುವಲ್ಲಿ ವಿಫಲರಾಗಿದ್ದಾರೆ.

ಆರೋಗ್ಯ, ರಕ್ಷಣೆ, ಆರೋಗ್ಯ, ಐಟಿ ಮತ್ತು ಸಂವಹನ ಕ್ಷೇತ್ರಗಳಿಗೆ ಕಳೆದ ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಮಧ್ಯಂತರ ಬಜೆಟ್‌ ನಲ್ಲಿ ಘೋಷಿಸಿದ್ದ ಅನುದಾನವನ್ನು ಈಗ ಕಡಿತಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿಗೆ ಅನುದಾನದಲ್ಲೂ ಗಣನೀಯವಾಗಿ ಕಡಿತಗೊಳಿಸಿರುವುದು ಈ ಸಮುದಾಯಗಳಿಗೆ ಎಸಗಿರುವ ದ್ರೋಹವಾಗಿದೆ ಎಂದರು.

ಆಗಸ್ಟ್‌ 28 ರಂದು ರಾಜ್ಯಕ್ಕೆ 16ನೇ ಹಣಕಾಸು ಆಯೋಗ ಭೇಟಿ

ಕೇಂದ್ರದ 16 ನೇ ಹಣಕಾಸು ಆಯೋಗವು ಆಗಸ್ಟ್‌ 28 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಹಿಂದಿನ ಬಾರಿ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಲಾಗುವುದು. ಈ ಕುರಿತು ಸಮರ್ಥವಾಗಿ ವಿಷಯ ಮಂಡಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Key words: central budget, Karnataka, CM Siddaramaiah

Tags :

.