ಕೃಷಿ ಸಮಸ್ಯೆಗಳಿಗೆ ಪೂರಕವಲ್ಲದ, ರೈತರ ಮೂಗಿಗೆ ತುಪ್ಪ ಸವರುವ ಬಜೆಟ್- ಕುರುಬೂರು ಶಾಂತಕುಮಾರ್
ಮೈಸೂರು,ಜುಲೈ,23,2024 (www.justkannada.in): ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಕೃಷಿ ಸಮಸ್ಯೆಗಳಿಗೆ ಪೂರಕವಲ್ಲದ ರೈತರ ಮೂಗಿಗೆ ತುಪ್ಪ ಸವರುವ ಬಜೆಟ್ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ. ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಟೀಕಿಸಿದ್ದಾರೆ.
ಕೇಂದ್ರ ಬಜೆಟ್ ಕುರಿತು ಮಾತನಾಡಿರುವ ಕುರುಬೂರು ಶಾಂತಕುಮಾರ್, ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಅನುದಾನ ಹೆಚ್ಚಳ ಮಾಡಿದ್ದರೂ, ರೈತರ ನೈಜ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ದಿಕ್ಕಿನಲ್ಲಿ ಕಾರ್ಯಯೋಜನೆ ಇಲ್ಲ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿ ಮಾಡುವ ಬಗ್ಗೆ ಪ್ರಸ್ತಾಪವಿಲ್ಲ. ಕೃಷಿ ಕ್ಷೇತ್ರ ಶ್ರಮಿಕರ ಕ್ಷೇತ್ರವಾಗಿದೆ. ಡಿಜಿಟಲೀಕರಣ ಆಹಾರ ಉತ್ಪಾದನೆ ಮಾಡುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಮರೆತಿದೆ ಎಂದು ಕುಟಕಿದರು.
ರೈತರ ಜಮೀನು ಮೌಲ್ಯದ ಶೇ 75 ರಷ್ಟು ಸಾಲ ನೀಡುವ ನೀತಿ ಜಾರಿಯಾಗಿಲ್ಲ. ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಉಪಯೋಗವಿಲ್ಲ. ಎಂದು ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ದಕ್ಷಿಣ ಭಾರತಕ್ಕೆ ಅಕ್ಷರಶಃ ಶೂನ್ಯ ಕೊಡುಗೆ
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಸೇಫ್ ವೀಲ್ಸ್ ನ ಪ್ರಶಾಂತ್, ಕರ್ನಾಟಕದಿಂದ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಬಜೆಟ್ ನಲ್ಲಿ ಇಡೀ ದಕ್ಷಿಣ ಭಾರತಕ್ಕೆ ಅಕ್ಷರಶಃ ಶೂನ್ಯ ಕೊಡುಗೆ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಮೈಸೂರು ಸೇರಿದಂತೆ ಸಾಕಷ್ಟು ಸುಪ್ರಸಿದ್ಧ ಪ್ರವಾಸಿ ತಾಣಗಳಿವೆ. ಆದರೆ ಬಜೆಟ್ ನಲ್ಲಿ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಲಾಗಿದೆ. ನಮಗೆ ಇನ್ನೂ ಹೆಚ್ಚಿನ ಕೊಡುಗೆಗಳ ನಿರೀಕ್ಷೆ ಇತ್ತು. ರಾಜಕೀಯಕ್ಕೋಸ್ಕರ ಈ ರೀತಿ ಮಾಡುವುದು ಸರಿಯಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿರುವ ನಮ್ಮ ಭಾಗದ ಸಂಸದರು ಈ ಬಗ್ಗೆ ದನಿ ಎತ್ತಬೇಕು ಎಂಬುದು ನಮ್ಮ ಮನವಿ ಎಂದಿದ್ದಾರೆ.
Key words: central Budget, not support, farmers, Kuruburu Shanthakumar