For the best experience, open
https://m.justkannada.in
on your mobile browser.

ಇದು ಅಮೃತಕಾಲದ ಸರ್ವಸ್ಪರ್ಶಿ ಬಜೆಟ್- ಕೇಂದ್ರ ಸಚಿವ ಹೆಚ್.ಡಿಕೆ ಗುಣಗಾನ

04:13 PM Jul 23, 2024 IST | prashanth
ಇದು ಅಮೃತಕಾಲದ ಸರ್ವಸ್ಪರ್ಶಿ ಬಜೆಟ್  ಕೇಂದ್ರ ಸಚಿವ ಹೆಚ್ ಡಿಕೆ ಗುಣಗಾನ

ಬೆಂಗಳೂರು,ಜುಲೈ,23,2024 (www.justkannada.in): ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಇದು ಅಮೃತಕಾಲದ ಸರ್ವಸ್ಪರ್ಶಿ ಬಜೆಟ್  ಎಂದು ಗುಣಗಾನ ಮಾಡಿದ್ದಾರೆ.

ಕೇಂದ್ರ ಬಜೆಟ್ ಕುರಿತು ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಸತತ 7ನೇ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

ಗೌರವಾನ್ವಿತ ಪ್ರಧಾನಿಗಳಾದ  ನರೇಂದ್ರ ಮೋದಿ ಅವರ ಕನಸಿನ 'ವಿಕಸಿತ ಭಾರತ' ನಿರ್ಮಾಣಕ್ಕೆ ಶಕ್ತಿ ತುಂಬುವ, ಮಹಿಳೆಯರಿಗೆ ಅತಿಹೆಚ್ಚು ಅನುಕೂಲ ಮಾಡಿಕೊಡುವ ನಾರಿಶಕ್ತಿ ಬಜೆಟ್ ಇದಾಗಿದೆ. 9 ಆದ್ಯತಾ ವಲಯಗಳನ್ನು ಗುರುತಿಸಲಾಗಿದೆ. ಆ ಪೈಕಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ ಅನುದಾನ ನೀಡಿ 4 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಮಾನವ ಸಂಪನ್ಮೂಲ ಸದ್ಬಳಕೆಗೆ ಆದ್ಯತೆ ಕೊಡಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಣ್ಣ, ಮಧ್ಯಮ ಗಾತ್ರದ ಕೈಗಾರಿಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉಪಕ್ರಮ ಈ ಬಜೆಟ್ ನಲ್ಲಿದೆ ಎಂದು ತಿಳಿಸಿದ್ದಾರೆ.

ಇದು ದೂರದೃಷ್ಟಿಯುಳ್ಳ ದೂರಗಾಮಿ ಬಜೆಟ್. ಕೃಷಿ, ಕೈಗಾರಿಕೆ, ಮೂಲಸೌಕರ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಉತ್ಪಾದನೆಗೂ ಗಮನ ಕೊಡಲಾಗಿದೆ.  ಬೆಂಗಳೂರು - ಚೆನ್ನೈ, ಹೈದರಾಬಾದ್ -ಬೆಂಗಳೂರು, ಬೆಂಗಳೂರು ಸೇರಿ ಒಟ್ಟು 12 ಕೈಗಾರಿಕಾ ಕಾರಿಡಾರ್ ಗಳನ್ನು ಘೋಷಣೆ ಮಾಡುವುದು ಉದ್ಯೋಗ, ಆರ್ಥಿಕ ವೃದ್ಧಿಗೆ ಬೃಹತ್ ಕೊಡುಗೆ ನೀಡಲಿದೆ ಎಂದು ಹೆಚ್.ಡಿಕೆ ತಿಳಿಸಿದ್ದಾರೆ

ಹೆಚ್ಚುತ್ತಿರುವ ಆಹಾರ ಬೇಡಿಕೆಯ ಪೂರೈಕೆ ಹಾಗೂ ಕೃಷಿಗೆ ಮತ್ತಷ್ಟು ಚೈತನ್ಯ ತುಂಬಲು ಕೃಷಿ ಸಂಶೋಧನೆ & ಅಭಿವೃದ್ಧಿಗೆ ಬಿಜೆಟ್ ಆದ್ಯತೆ ಕೊಟ್ಟಿದೆ. ಕೃಷಿ ಬೆಳೆಯ ಡಿಜಿಟಲ್ ಸಮೀಕ್ಷೆ ಮಾಡುವ ಯೋಜನೆಯನ್ನು ದೇಶದ 400 ಜಿಲ್ಲೆಗಳಿಗೆ ವಿಸ್ತರಿಸುವುದು ಸ್ವಾಗತಾರ್ಹ. ಮೇಲಾಗಿ ಸಹಜ ಕೃಷಿಗೆ ವಿತ್ತ ಸಚಿವರು ಪ್ರಾಮುಖ್ಯತೆ ನೀಡಿದ್ದಾರೆ.

ಸಂಶೋಧನೆ, ಆವಿಷ್ಕಾರಕ್ಕೆ ಬಜೆಟ್ ಅತಿಹೆಚ್ಚು ಒತ್ತು ಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಸ್ಪರ ಸಹಯೋಗದಿಂದ ಕೈಗಾರಿಕಾಭಿವೃದ್ಧಿಗೆ ಆದ್ಯತೆ ನೀಡುವುದು ಅಭಿವೃದ್ಧಿಗೆ ದೂರಗಾಮಿ ಕೊಡುಗೆ ನೀಡುವ ಉಪಕ್ರಮವಾಗಿದೆ. ರಾಜ್ಯಗಳಿಗೆ 50 ವರ್ಷಗಳ ಬಡ್ಡಿರಹಿತ ಸಾಲ ನೀಡುವ ಘೋಷಣೆ ಸ್ವಾಗತಾರ್ಹ. ಇದು ಅಮೃತಕಾಲದ ಸರ್ವಸ್ಪರ್ಶಿ ಬಜೆಟ್ ಆಗಿದೆ ಎನ್ನುವುದು ನನ್ನ ಭಾವನೆ ಎಂದು ಹೆಚ್.ಡಿಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Key words: central budget, Union Minister, HDK

Tags :

.