ಸಿವಿಲ್ ನ್ಯಾಯಾಧೀಶರ ಹುದ್ದೆ ಪರೀಕ್ಷೆ: ಉಚಿತ ತರಬೇತಿ ಶಿಬಿರಕ್ಕೆ ಚಾಲನೆ.
ಮೈಸೂರು,ನವೆಂಬರ್,6,2023(www.justkannada.in): ಸಿವಿಲ್ ನ್ಯಾಯಾಧೀಶರ ಹುದ್ದೆಯ ಪರೀಕ್ಷೆಗಾಗಿ ಅಭ್ಯರ್ಥಿಗಳಿಗೆ ಮೈಸೂರು ಜಿಲ್ಲಾ ವಕೀಲರ ಸಂಘ ಹಾಗೂ ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ಆಯೋಜಿಸಿರುವ ಉಚಿತ ತರಬೇತಿ ಶಿಬಿರಕ್ಕೆ ಮೈಸೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಜಿ.ಎಸ್ ಸಂಗ್ರೇಶಿ ಅವರು ಚಾಲನೆ ನೀಡಿದರು.
ಮೈಸೂರು ನ್ಯಾಯಾಲಯದ ಸಭಾಂಗಣದಲ್ಲಿ ಆರು ದಿನಗಳ ತರಬೇತಿ ಶಿಬಿರ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೈಸೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಜಿ.ಎಸ್ ಸಂಗ್ರೇಶಿ ಅವರು, ಸಿವಿಲ್ ನ್ಯಾಯಾಧೀಶರಾಗುವುದು. ಜಿಲ್ಲಾ ನ್ಯಾಯಾಧೀಶರಾಗುವುದು, ಹೈಕೋರ್ಟ್ ನ್ಯಾಯಾಧೀಶರಾಗುವುದು ಒಂದು ತಪಸ್ಸು. ಆ ತಪಸ್ಸು ಸಾಕಾರವಾಗಬೇಕಾದರೆ ಕಠಿಣ ಪರಿಶ್ರಮ ಅಗತ್ಯ. ಲಾಗೈಡ್ ವೆಂಕಟೇಶ್ ಹಾಗೂ ಜಿಲ್ಲಾ ವಕೀಲರ ಸಂಘ ಸಾಕಷ್ಟು ಶ್ರಮವಹಿಸಿ ಉತ್ಸಾಹದಿಂದ ಶಿಬಿರ ಆಯೋಜಿಸಿದ್ದಾರೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ತಾವು ಯಾವ ರೀತಿ ಅಭ್ಯಾಸ ನಡೆಸುತ್ತಿದ್ದರು ಎಂಬುದನ್ನು ಅಭ್ಯರ್ಥಿಗಳಿಗೆ ಜಿ ಎಸ್ ಸಂಗ್ರೇಶಿ ಅವರು ತಿಳಿಸಿದರು. ಇದೇ ವೇಳೆ ಅಭ್ಯರ್ಥಿಗಳಿಗೆ ಲಾಗೈಡ್ ಬಳಗದ ವತಿಯಿಂದ ಉಚಿತ ಸ್ಟಡಿ ಮೆಟಿರಿಯಲ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಪುಟ್ಟಸ್ವಾಮಿ, ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಹೆಚ್ ಎನ್ ವೆಂಕಟೇಶ್, ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ ಮಹದೇವಸ್ವಾಮಿ, ಉಪಾಧ್ಯಕ್ಷ ಪುಟ್ಟಸಿದ್ದೇಗೌಡ ಸೇರಿ ಹಲವರು ಉಪಸ್ಥಿತರಿದ್ದರು.
Key words: Civil Judge- Post- Exam-Free –Training- Camp- Conducted-mysore