ನಾನು ಸಿಎಂ ಹುದ್ದೆ ಆಕಾಂಕ್ಷಿ: ಮುಖ್ಯಮಂತ್ರಿ ಆಗುವ ಆಸೆ ಬಿಚ್ಚಿಟ್ಟ ಸಚಿವ ಪ್ರಿಯಾಂಕ್ ಖರ್ಗೆ.
ಮೈಸೂರು,ನವೆಂಬರ್,3,2023(www.justkannada.in): ನಿನ್ನೆ ಅಧಿಕಾರ ಹಂಚಿಕೆ ಕುರಿತು ಪ್ರತಿಕ್ರಿಯಿಸಿ ಐದು ವರ್ಷ ಸರ್ಕಾರ ಸುಭದ್ರ, ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೆ ಸಾಕಷ್ಟು ಚರ್ಚೆ ಮುನ್ನೆಲೆಗೆ ಬಂದಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ತಾವೂ ಸಹ ಸಿಎಂ ಹುದ್ದೆಗೆ ಆಕಾಂಕ್ಷಿ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಇದು ಅವರವರ ವೈಯಕ್ತಿಕ ಹೇಳಿಕೆ. ಜಿಲ್ಲಾ ಪಂಚಯಾತ್ ಸದಸ್ಯರಿಂದ ಹಿಡಿದು ಶಾಸಕರವರೆಗೆ ಎಲ್ಲಾರಿಗೂ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರವಿದೆ. ಇದರಲ್ಲಿ ತಪ್ಪು ಏನು ಇಲ್ಲ. ಆದರೆ, ಅವರ ಹೇಳಿಕೆ ಕಲ್ಲಿನ ಮೇಲೆ ಕೆತ್ತಿದ ಶಾಸನವಲ್ಲ. ಎಲ್ಲವೂ ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.
ನಾನು ಸಿಎಂ ಆಕಾಂಕ್ಷಿ. ಹೈಕಮಾಂಡ್ ಸೂಚಿಸಿದರೆ ನಾನು ಸಿಎಂ ಆಗುತ್ತೇನೆ. ಸಿಎಂ ಯಾರಾಗಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಒಂದು ವೇಳೆ ಹೈಕಮಾಂಡ್ ನನ್ನನ್ನ ಸಿಎಂ ಆಗುವಂತೆ ಹೇಳಿದ್ರೆ ಖಂಡಿತಾ ನಾನು ಆಗುತ್ತೇನೆ. ಹೈ ಕಮಾಂಡ್ ಯಾರು ಸಿಎಂ ಆಗಬೇಕು, ಮುಂದುವರೆಯಬೇಕು ಎಂಬುದನ್ನ ನಿರ್ಧರಿಸುತ್ತದೆ. ದೆಹಲಿಯಲ್ಲಿ ನಾಲ್ಕು ಜನ ಕುಳಿತು ಮಾತನಾಡಿದ್ದಾರೆ. ಅವರಿಗೆ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆ ಇದೆ. ಸಿಎಂ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ದ ಗುಡುಗಿದ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ವಿಪಕ್ಷ ಎಲ್ಲಿದೆ. ಬಿಜೆಪಿ ಲೀಡರ್ ಲೆಸ್ ಪಾರ್ಟಿಯಾಗಿದೆ. ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ಧ್ವನಿ ಇಲ್ಲದಂತಾಗಿದೆ. ಇಲ್ಲಿ ಕಾಂಗ್ರೆಸ್ ವಿರುದ್ದ ಘರ್ಜಿಸುವ ಬದಲು ಕೇಂದ್ರ ನಾಯಕರ ಬಳಿ ಘರ್ಜಿಸಿದರೆ ವಿಪಕ್ಷ ಸ್ಥಾನವಾದರೂ ಸಿಗುತ್ತಿತ್ತು ಎಂದು ವ್ಯಂಗ್ಯವಾಡಿದರು.
Key words: CM- post - aspirant- Minister - Priyank Kharge –mysore