For the best experience, open
https://m.justkannada.in
on your mobile browser.

ಬಂಡೆಯೊಂದು ಈಗಾಗಲೇ ಸದ್ದು ಮಾಡುತ್ತಿದೆ, ಸಿಎಂ ಸಿದ್ದರಾಮಯ್ಯನವರೇ ಕೆಲವೇ ದಿನ ಕಾದುನೋಡಿ- ಬಿವೈ ವಿಜಯೇಂದ್ರ.

02:39 PM May 15, 2024 IST | prashanth
ಬಂಡೆಯೊಂದು ಈಗಾಗಲೇ ಸದ್ದು ಮಾಡುತ್ತಿದೆ  ಸಿಎಂ ಸಿದ್ದರಾಮಯ್ಯನವರೇ ಕೆಲವೇ ದಿನ ಕಾದುನೋಡಿ  ಬಿವೈ ವಿಜಯೇಂದ್ರ

ಬೆಂಗಳೂರು,ಮೇ,15,2024 (www.justkannada.in): ಬಿಜೆಪಿ ಪಕ್ಷದ ಮುಕ್ಕಾಲು ಪಾಲು ನಾಯಕರು  ಈಗಿನ ಅಧ್ಯಕ್ಷ ಬಿವೈ ವಿಜಯೇಂದ್ರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ ಎಂದು ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯಗೆ ಟ್ವೀಟ್ ಮೂಲಕವೇ  ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಬಿವೈ ವಿಜಯೇಂದ್ರ,  ಮಾನ್ಯ ಸಿದ್ದರಾಮಯ್ಯ ಅವರೇ, ಭಾರತೀಯ ಜನತಾ ಪಾರ್ಟಿ ತತ್ವ, ಸಿದ್ದಾಂತ ಆಧರಿಸಿದ ಶಿಸ್ತಿನ ಪಕ್ಷ. ಕಳೆಯಿಲ್ಲದೆ ಬೆಳೆದು ನಿಂತಿರುವ ಸಮೃದ್ಧ ತೋಟ, ನಿಮ್ಮ ಕಾಂಗ್ರೆಸ್ ನಲ್ಲಿರುವ ಪಾರ್ಥೇನಿಯಂ ಗಿಡಗಳು ನಮ್ಮಲ್ಲಿಲ್ಲ, ಅಧಿಕಾರಕ್ಕಾಗಿ ಹಪಾಹಪಿಸುವ ಕಳ್ಳಿ ಗಿಡಗಳಾವುವೂ ನಮ್ಮ ಪಕ್ಷದಲ್ಲಿ ತಲೆಯೆತ್ತಲು ಸಾಧ್ಯವಿಲ್ಲ. ತಲೆ ಎತ್ತಲು ಹೋದರೆ ಅದಕ್ಕೆ ಮದ್ದು ನೀಡುವಷ್ಟು ನಮ್ಮ ವರಿಷ್ಠ ಮಂಡಳಿಯು ಸಶಕ್ತವಾಗಿದೆ.

ಭಾರತದ ರಾಜಕೀಯ ಭೂಪಟದಲ್ಲಿ ಮಾಸಿ ಹೋಗುತ್ತಿರುವ ನಿಮ್ಮ ಕಾಂಗ್ರೆಸ್ ಪಕ್ಷ ಅಧಿಕಾರ ಕಬಳಿಸುವುದನ್ನಷ್ಟೇ ಕೇಂದ್ರೀಕರಿಸಿ ಸುಳ್ಳು ಭರವಸೆಗಳು ಹಾಗೂ ಆಮಿಷಗಳ ಬಲೆ ಹೆಣೆದು ಕರ್ನಾಟಕದಲ್ಲಿ ಅಧಿಕಾರ ದಕ್ಕಿಸಿಕೊಂಡಿದೆ. ಲೋಕಸಭಾ ಚುನಾವಣೆಯ ನಂತರ ಈ ಟೊಳ್ಳು ಬಲೆಯನ್ನು ಜನರೇ ತುಂಡರಿಸಲಿದ್ದಾರೆ, ನಿಮ್ಮ ಬಣ ರಾಜಕೀಯದ ಕಿತ್ತಾಟದ ಬಣ್ಣ ಶೀಘ್ರದಲ್ಲೇ ಬಯಲಿಗೆ ಬರಲಿದೆ ಎಂದು ಟಾಂಗ್ ಕೊಟ್ಟಿದ್ದಾರೆ.

ದೀಪ ಆರುವ ಮುನ್ನ ಜೋರಾಗಿ ಹೊತ್ತಿ ಉರಿಯುತ್ತದೆ, ಕಾಲವೇ ನಿಮಗೆ ಉತ್ತರ ಹೇಳಲಿದೆ. ಯಾರು ಯಾರ ವಿರುದ್ಧ ಮುಗಿ ಬೀಳುತ್ತಾರೆ? ಯಾರು ಎಲ್ಲಿರುತ್ತಾರೆ? ಎಂಬುದನ್ನು ಕೆಲವೇ ದಿನಗಳು ಕಾದುನೋಡಿ ನಿಮ್ಮ ಕಾಂಗ್ರೆಸ್ ಪಡಸಾಲೆಯಲ್ಲೇ ನಿಮಗೆ ಉತ್ತರ ಸಿಗಲಿದೆ.

ನೀವು ಮುಖ್ಯಮಂತ್ರಿಯಾಗುವ ವೇಳೆ ಡಿಕೆ ಶಿವಕುಮಾರ್ ಅವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಬದಿಗೊತ್ತಿ ಹೈಕಮಾಂಡ್ ಸೂತ್ರ ಧಿಕ್ಕರಿಸುವ ನಿಮ್ಮ ತಂತ್ರದ ಜಾಡು ಹಿಡಿದಿರುವ ನಿಮ್ಮ ವಿರೋಧಿ ಬಣ ಸುಮ್ಮನೆ ಕುಳಿತಿಲ್ಲ, ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ಕಾಲ ಸನ್ನಿಹಿತವಾಗುವುದರೊಳಗೇ ಪರಿಸ್ಥಿತಿ ಯಾವ ರೀತಿ ಬಿಗಡಾಯಿಸುತ್ತದೆ ಎನ್ನುವುದನ್ನು ಕಾಂಗ್ರೆಸ್ ನಲ್ಲಿ ವ್ಯೂಹ ರಚಿಸುವ ಬಂಡೆಯೊಂದು ಈಗಾಗಲೇ ಸದ್ದು ಮಾಡುತ್ತಿದೆ ಎಂದು ಬಿವೈ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

Key words: CM, Siddaramaiah, BJP, President, BY Vijayendra

Tags :

.