For the best experience, open
https://m.justkannada.in
on your mobile browser.

ಅಧಿಕಾರಿಗಳ ವಿಳಂಬ ಧೋರಣೆಗೆ ಗರಂ: ಕಾರ್ಯದರ್ಶಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ

03:02 PM Jun 26, 2024 IST | prashanth
ಅಧಿಕಾರಿಗಳ ವಿಳಂಬ ಧೋರಣೆಗೆ ಗರಂ  ಕಾರ್ಯದರ್ಶಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜೂನ್,26,2024 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಯಿತು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯದರ್ಶಿಗಳಿಗೆ ತೀವ್ರ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಎಂಇಆರ್ ಸಿಗೆ CEPMIZ ಯೋಜನೆಯಡಿ ಒಟ್ಟು 24,996.30 ಕೋಟಿ ರೂ. ಒದಗಿಸಲಾಗಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಒದಗಿಸಲಾಗಿದೆ.  ಇದರಲ್ಲಿ ಯೋಜನೆಗಳ ಆಯ್ಕೆ ಹಾಗೂ ಕಾಮಗಾರಿಗಳ ಪ್ರಗತಿಯ ಮೇಲ್ವಿಚಾರಣಾ ಪ್ರಾಧಿಕಾರ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರು ಒಟ್ಟು 7928.78 ಕೋಟಿ ರೂ. ಮೊತ್ತದ 358 ಯೋಜನೆಗಳನ್ನು ಅನುಮೋದಿಸಿದ್ದಾರೆ.

ಈ ಪೈಕಿ ಒಟ್ಟು 3469.41 ಕೋಟಿ ರೂ. ವೆಚ್ಚದ 182 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 135 ಯೋಜನೆಗಳಿಗೆ ಟೆಂಡರ್‌ ಕರೆಯಲಾಗಿದ್ದು, 47 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. 23 ಕಾಮಗಾರಿಗಳನ್ನು ವಿವಿಧ ಸಂಸ್ಥೆಗಳಿಗೆ ವಹಿಸಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ಒಂದು ವಾರದೊಳಗೆ ಡಿ.ಪಿ.ಆರ್. ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದರು.

ಅಧಿಕಾರಿಗಳ ವಿಳಂಬ ಧೋರಣೆಗೆ ಗರಂ: ಕಾರ್ಯದರ್ಶಿಗಳಿಗೆ ತೀವ್ರ ತರಾಟೆ

ಯೋಜನೆಗಳ ಸಕಾಲಿಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂಬಂಧಿಸಿದ ಇಲಾಖೆಯಲ್ಲಿ ಯೋಜನಾ ಮೇಲ್ವಿಚಾರಣೆ ಘಟಕ ಸ್ಥಾಪಿಸುವಂತೆ ಸೂಚಿಸಿದರು. ವರ್ಷ ಕಳೆದರೂ DPR ಆಗದೇ ಇದ್ದುದಕ್ಕೆ ಕಾರ್ಯದರ್ಶಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಸಿಎಂ. ಅಧಿಕಾರಿಗಳ ವಿಳಂಬ ಧೋರಣೆಗೆ  ಗರಂ ಆಗಿ ಎಚ್ಚರಿಸಿದರು

ಇದು ವಿಶೇಷ ಕಾರ್ಯಕ್ರಮವಾಗಿದ್ದು, ಟೆಂಡರ್‌ ನ ವಾಡಿಕೆಯ ಷರತ್ತುಗಳು ಅನ್ವಯಿಸುವುದಿಲ್ಲ. ಟೆಂಡರ್‌ನಲ್ಲಿ ನಿಗಮವು ವಾರದೊಳಗೆ ಬಿಲ್‌ ಪಾವತಿಸಲಾಗುವುದರಿಂದ ಯಾವುದೇ mobilization advance ನೀಡಲಾಗದು ಎಂಬುದನ್ನು ಗುತ್ತಿಗೆದಾರರಿಗೆ ಸ್ಪಷ್ಟ ಪಡಿಸಲು ಸೂಚಿಸಿದರು.

ರೈಲ್ವೆ ಯೋಜನೆಗಳಿಗೆ 5271.96 ಕೋಟಿ ರೂ. , ಕುಡಿಯುವ ನೀರಿನ ಯೋಜನೆಗಳಿಗೆ 4929.84 ಕೋಟಿ ರೂ., ಆರೋಗ್ಯ ಕ್ಷೇತ್ರಕ್ಕೆ 1915.78 ಕೋಟಿ ರೂ., ಪರಿಸರ ಪುನಃಸ್ಥಾಪನೆಗೆ 2655.17 ಕೋಟಿ ರೂ., ರಸ್ತೆಗಳು ಮತ್ತು ಸಂವಹನ ಯೋಜನೆಗಳಿಗೆ 2559.17 ಕೋಟಿ ರೂ.,  ವಸತಿ ಯೋಜನೆಗಳಿಗೆ 1193.98 ಕೋಟಿ ರೂ. ನಿಗದಿ ಪಡಿಸಲಾಗಿದೆ. ವಸತಿ ಯೋಜನೆಗಳಡಿ ಫಲಾನುಭವಿಗಳನ್ನು ಶೀಘ್ರವೇ ಗುರುತಿಸಲು  ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಸಣ್ಣ ನೀರಾವರಿ ಇಲಾಖೆ 14 ಯೋಜನೆಗಳ ಪೈಕಿ 7 ಯೋಜನೆಗಳ ಕಾಮಗಾರಿ ಆರಂಭಿಸಲಾಗಿದೆ. ಉಳಿದ 7 ಯೋಜನೆಗಳ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಿ ಕಾಮಗಾರಿ ಅನುಷ್ಠಾನ‌ಮಾಡುವಂತೆ ಸಿಎಂ ಸೂಚಿಸಿದರು

ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಶಾಲೆಗಳ ಕಟ್ಟಡ ದುರಸ್ತಿ, ಕೊಠಡಿ, ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಅಂಗನವಾಡಿ ಕಟ್ಟಡ, ವಿದ್ಯಾರ್ಥಿ ನಿಲಯಗಳು ಮತ್ತಿತರ ಯೋಜನೆಗಳಿಗೆ ಒತ್ತು ನೀಡಬೇಕು. ಲಭ್ಯವಿರುವ ಅನುದಾನದಲ್ಲಿ ಈ ನಾಲ್ಕೂ ಜಿಲ್ಲೆಗಳು ಮಾದರಿ ಜಿಲ್ಲೆಗಳಾಗಿ ಅಭಿವೃದ್ಧಿ ಮಾಡುವಂತೆ ಅಭಿವೃದ್ಧಿ ಆಯುಕ್ತರಿಗೆ ಸೂಚಿಸಿದರು. ಮುಂದಿನ ಸಭೆಯಲ್ಲಿ ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಹ ಭಾಗವಹಿಸುವಂತೆ ಸೂಚಿಸಿದರು.

ಕಾಮಗಾರಿಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿಯ ಗುಣಮಟ್ಟವನ್ನು ಖಾತರಿಪಡಿಸಬೇಕು ಎಂದರು. ಗಣಿ ಬಾಧಿತ ಜಿಲ್ಲೆಗಳಲ್ಲಿ ಮಾಲಿನ್ಯದ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಇದ್ದು, ತೃಪ್ತಿಕರ ಹಂತಕ್ಕೆ ತಲುಪಿದೆ ಎಂದು ಅಧಿಕಾರಿಗಳು ವಿವರಿಸಿದರು.

ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: CM, Siddaramaiah, meeting, officials

Tags :

.