For the best experience, open
https://m.justkannada.in
on your mobile browser.

ಮುಡಾ ಹಗರಣ ಬೆಳಕಿಗೆ ಬಂದ ನಂತರ ಸಿಎಂ ಸಿದ್ದರಾಮಯ್ಯ ಮೆತ್ತಗೆ ಆಗಿದ್ದಾರೆ- ಶಾಸಕ ಟಿ ಎಸ್ ಶ್ರೀವತ್ಸ ಟೀಕೆ

01:15 PM Jul 17, 2024 IST | prashanth
ಮುಡಾ ಹಗರಣ ಬೆಳಕಿಗೆ ಬಂದ ನಂತರ ಸಿಎಂ ಸಿದ್ದರಾಮಯ್ಯ ಮೆತ್ತಗೆ ಆಗಿದ್ದಾರೆ  ಶಾಸಕ ಟಿ ಎಸ್ ಶ್ರೀವತ್ಸ ಟೀಕೆ

ಮೈಸೂರು,ಜುಲೈ,17,2024 (www.justkannada.in):  ಮುಡಾ ಹಗರಣ ಬೆಳಕಿಗೆ ಬಂದ ನಂತರ ಸಿಎಂ ಸಿದ್ದರಾಮಯ್ಯ ಮೆತ್ತಗೆ ಆಗಿದ್ದಾರೆ. ಈಗಿರುವ ಸಿದ್ದರಾಮಯ್ಯ ಮೊದಲಿನಂತೆ ಇಲ್ಲ ಎಂದು ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಮೈಸೂರು ಮಹಾನಗರ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ  ಕೆ ಆರ್ ಕ್ಷೇತ್ರದ ಆಶ್ರಯ ಬಡಾವಣೆ ನಿವಾಸಿಗಳಿಗೆ ಹಕ್ಕು ಪತ್ರ, ಹಕ್ಕು ಖುಲಾಸೆ ಹಾಗೂ ಎನ್ಓಸಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದ ಶಾಸಕ ಟಿ ಎಸ್ ಶ್ರೀವತ್ಸ, ನಮ್ಮ ಕ್ಷೇತ್ರದಲ್ಲಿ ಹಲವಾರು ಜನಕ್ಕೆ ನಿವೇಶನ ಕೊರತೆ ಇದೆ. ನಿವೇಶನ ರಹಿತರಿಗೆ ಮನೆ ಕಟ್ಟಿಕೊಡಲು ಸರ್ಕಾರ ನಿರ್ಧಾರ ಮಾಡಿದೆ. 13 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವದು ಮನೆಗೆ ಫಲಾನುಭವಿಗಳು 1.50 ಲಕ್ಷ ಕಟ್ಟುವುದು ಸಾಕು ಎಂದು ಸರ್ಕಾರ ನಿರ್ಧರಿಸಿದೆ. ಪ್ರತಿಯೊಬ್ಬರೂ ಕೂಡ ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಿ. ನಿಮಗೆ ನೀಡಲಾಗಿರುವ ಮನೆಯಲ್ಲಿ ಎಲ್ಲರು ವಾಸ ಮಾಡಬೇಕು. ಹಕ್ಕು ಪತ್ರ ವಿತರಣೆ ಬಳಿಕ ನೋಂದಣಿ ಕಚೇರಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದರು.

ಮುಡಾ ಹಗರಣಕ್ಕೆ ತಾರ್ಕಿಕ ಅಂತ್ಯ ಸಿಗಲಿದೆ.

ಮುಡಾ ಬಹುಕೋಟಿ ಹಗರಣ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಶಾಸಕ ಶ್ರೀವತ್ಸ,  ವಿಧಾನಮಂಡಲ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಆಗುತ್ತೆ. ಸದ್ಯಕ್ಕೆ ವಾಲ್ಮೀಕಿ ನಿಗಮದ ಹಗರಣ ಬಗ್ಗೆ ಚರ್ಚೆ ಆಗುತ್ತಿದೆ. ಶುಕ್ರವಾರ ಅಥವಾ ಸೋಮವಾರ ಮುಡಾ ಹಗರಣ ಬಗ್ಗೆ ಮಾತನಾಡುತ್ತೇವೆ. ಮುಡಾ ಹಗರಣಕ್ಕೆ ತಾರ್ಕಿಕ ಅಂತ್ಯ ಸಿಗಲಿದೆ ಎಂದರು.

ವಿಧಾನಮಂಡಲ ಅಧಿವೇಶನದಲ್ಲಿ ಆ ಎಲ್ಲಾ ದಾಖಲೆಗಳು ಬಹಿರಂಗ

ಮುಡಾ ಹಗರಣ ಕುರಿತು ನಿವೃತ್ತ ನ್ಯಾಯಾದೀಶರ ಆಯೋಗ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಹಿರಿಯ ಐಎಎಸ್ ಅಧಿಕಾರಿಗಳ ತಂಡ ರಚನೆ ಮಾಡಿತ್ತು. ಒಂದು ತಿಂಗಳ ಒಳಗೆ ವರದಿ ನೀಡಲು ಸೂಚಿಸಲಾಗಿತ್ತು. ಇದೀಗ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗ ರಚನೆ ಮಾಡಿ. ಆರು ತಿಂಗಳ ಕಾಲಾವಕಾಶ ನೀಡಿದೆ. ಇದನ್ನೆಲ್ಲಾ ಗಮನಿಸಿದರೆ ಈ ಪ್ರಕರಣವನ್ನ ಮುಂದೂಡುವ ತಂತ್ರ ಅಡಗಿದೆ. ಭೈರತಿ ಸುರೇಶ್ ರವರು ಮೊದಲು ಹಗರಣ ನಡೆದಿಲ್ಲ ಎಂದರು. ಅದಾದ ಬಳಿಕ ಮುಡಾಗೆ ಭೇಟಿ ಸಭೆ ನಡೆಸಿದರು. ಮುಡಾದಿಂದ ಮಹತ್ವದ ದಾಖಲೆಗಳನ್ನ ಕೊಂಡೋಯ್ದಿದ್ದಾರೆ. ಅವರು ಏನೆಲ್ಲಾ ಕೊಂಡೋಯ್ದಿದ್ದರು ನಮ್ಮ ಬಳಿಯು ಸೂಕ್ತ ದಾಖಲೆಗಳಿವೆ. ವಿಧಾನಮಂಡಲ ಅಧಿವೇಶನದಲ್ಲಿ ಆ ಎಲ್ಲಾ ದಾಖಲೆಗಳನ್ನ ಬಹಿರಂಗ ಪಡಿಸುತ್ತೇವೆ ಎಂದು ತಿಳಿಸಿದರು.

ಅಕ್ರಮವಾಗಿ ಮುಡಾ ಆಸ್ತಿ ಪಡೆದಿದ್ದರೆ ವಾಪಾಸ್ ಪಡೀತೇವೆ ಎಂದು ಹೇಳಿದರು.  ಈ ಎಲ್ಲಾ ಹೇಳಿಕೆಗಳು ಮೌಖಿಕವಾಗಿ ಮಾತ್ರ ಇದೆ. ಯಾವುದೇ ಹೇಳಿಕೆಗಳು ಆದೇಶವಾಗಿ ಹೊರ ಬಂದಿಲ್ಲ. ಸರ್ಕಾರವೇ ಇಲ್ಲಿ ಹಗರಣ ನಡೆದಿದೆ ಎಂಬುದನ್ನ ಒಪ್ಪಿಕೊಂಡಿದೆ. ಈ ಕಾರಣಕ್ಕಾಗಿಯೇ ತನಿಖಾ ತಂಡವನ್ನ ರಚನೆ ಮಾಡಿದೆ. ಮುಡಾ ಹಗರಣ ಬೆಳಕಿಗೆ ಬಂದ ನಂತರ ಸಿದ್ದರಾಮಯ್ಯ ಮೆತ್ತಗೆ ಆಗಿದ್ದಾರೆ. ಈಗಿರುವ ಸಿದ್ದರಾಮಯ್ಯ ಮೊದಲಿನಂತೆ ಇಲ್ಲ. ಲೋಪ ಆಗಿರುವುದರಿಂದಲೇ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ. ಈ ಮೊದಲಿನಂತೆ ಮಾತನಾಡುತ್ತಿಲ್ಲ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಸಿಲುಕಿರುವುದರಿಂದಲೇ ಸುಮ್ಮನಾಗಿದ್ದಾರೆ ಎಂದು  ಶ್ರೀವತ್ಸ ಕುಟುಕಿದರು.

ಮುಡಾಗೆ ಯಾವುದೇ ಜನಪ್ರತಿನಿಧಿಗಳನ್ನ ಸದಸ್ಯರನ್ನಾಗಿ ನೇಮಕ ಮಾಡಬಾರದು

ಮುಡಾಗೆ ಯಾವುದೇ ಜನಪ್ರತಿನಿಧಿಗಳನ್ನ ಸದಸ್ಯರನ್ನಾಗಿ ನೇಮಕ ಮಾಡಬಾರದು. ಮಹದೇವಪ್ಪನವರ ನಿರ್ಧಾರಕ್ಕೆ ನನ್ನ ಸಹಮತವಿದೆ. ಮುಡಾ ಕೂಡ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ. ಬೇರೆ ನಿಗಮಗಳಂತೆ ಮುಡಾ ಕೂಡ ಆಗಿದೆ. ಮುಡಾಗೆ ಸದಸ್ಯರನ್ನ ನೇಮಕ ಮಾಡುವ ಅವಶ್ಯಕತೆ ಇಲ್ಲ. ಸರ್ಕಾರದ ನಿಯಮನುಸಾರ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರೆ ಸಾಕು. ಇದರಿಂದ ಜನಪ್ರತಿನಿಧಿಗಳು ಮುಡಾ ಕಾರ್ಯ ವೈಖರಿಯಲ್ಲಿ ಮಧ್ಯ ಪ್ರವೇಶಿಸುವುದು ತಪ್ಪಲಿದೆ. ಮುಡಾಗೆ ಸಮರ್ಥ ಅಧಿಕಾರಿಗಳನ್ನ ನೇಮಕ ಮಾಡಬೇಕು. ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನುಡಿದರು.

Key words: CM, Siddaramaiah, Muda scam, MLA, TS Srivatsa

Tags :

.