ಸಿಎಂ ಸಿದ್ದರಾಮಯ್ಯ ನಾಸ್ತಿಕರಾಗಿದ್ದರೆ ರಾಮಮಂದಿರ ಕಟ್ಟಿಸುತ್ತಿರಲಿಲ್ಲ- ಸಚಿವ ಈಶ್ವರ್ ಖಂಡ್ರೆ.
ಮೈಸೂರು,ಜನವರಿ,23,2024(www.justkannada.in): ಅಯೋಧ್ಯೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯರನ್ನ ಟಿಕೀಸುವ ನೈತಿಕತೆ ಬಿಜೆಪಿಗೆ ಇಲ್ಲ. ಸಿಎಂ ಸಿದ್ದರಾಮಯ್ಯ ನಾಸ್ತಿಕರಾಗಿದ್ದರೆ ಅವರ ಕ್ಷೇತ್ರದಲ್ಲಿ ರಾಮಮಂದಿರ ಕಟ್ಟಿಸುತ್ತಿರಲಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಟಾಂಗ್ ನೀಡಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಸಿದ್ದರಾಮಯ್ಯ ನಾನು ನಾಸ್ತಿಕ ಅಲ್ಲ, ಆಸ್ತಿಕ ಅಂತ ಅವರೇ ಹೇಳಿದ್ದಾರೆ. ಅವರು ನಾಸ್ತಿಕರಾಗಿದ್ದರೆ ದೇವಸ್ಥಾನಗಳಿಗೆ ಅನುದಾನ ನೀಡುತ್ತಿರಲಿಲ್ಲ. ರಾಜ್ಯದ ಅನೇಕ ದೇವಾಲಯಗಳಿಗೆ ಸಿದ್ದರಾಮಯ್ಯ ಅನುದಾನ ನೀಡಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ರಾಮ ನಮ್ಮ ಮನಸ್ಸಿನಲ್ಲಿದ್ದಾನೆ ಎಂದರು.
ರಾಜ್ಯದಲ್ಲಿ ಡಿಸಿಎಂ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ. ಎನ್ ರಾಜಣ್ಣಗೆ ತಿರುಗೇಟು ನೀಡಿದ ಈಶ್ವರ್ ಖಂಡ್ರೆ, ಈ ಚರ್ಚೆ ಸದ್ಯ ಅಪ್ರಸ್ತುತ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೇರೆ ಯಾರು ಈ ಬಗ್ಗೆ ಮಾತನಾಡಬಾರದು. ಹೈಕಮಾಂಡ್ ಹೇಳಿದ ಮೇಲೆ ಈಗ ಯಾರು ತುಟಿಕ್ ಪಿಟಿಕ್ ಅನ್ನುತಿಲ್ಲ. ಈಗಾಗಿ ಡಿಸಿಎಂ ಆಯ್ಕೆ ವಿಚಾರವೇ ಅಪ್ರಸ್ತುತ ಎಂದರು.
ಗೂಂಡಾಗಳಿಗೆ ಬಡಿಗೆ ನೀಡಿ ಯಾತ್ರೆ ನಿಲ್ಲಿಸಲು ಯತ್ನಿಸಿದ್ದಾರೆ.
ರಾಹುಲ್ ಗಾಂಧಿ ಭಾರತ್ ನ್ಯಾಯ್ ಯಾತ್ರೆ ತಡೆಗೆ ಯತ್ನಿಸಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ಗೂಂಡಾಗಳಿಗೆ ಬಡಿಗೆ ನೀಡಿ ಯಾತ್ರೆ ನಿಲ್ಲಿಸಲು ಯತ್ನಿಸಿದ್ದಾರೆ. ಯಾತ್ರೆಯಲ್ಲಿ ಮೋದಿ ಶ್ರೀರಾಮನಿಗೆ ಜೈಕಾರ ಕೂಗಿ ಪ್ರಚೋದಿಸಲು ಯತ್ನಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಯಾತ್ರೆ ನಿಲ್ಲಲ್ಲ. ಬಿಜೆಪಿಯ ಯಾವುದೇ ಆಟ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ
ಮೈಸೂರು ಭಾಗದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ, ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹುಡುಕುತ್ತೇವೆ ಎಂದು ಭರವಸೆ ನೀಡಿದರು.
ಸಚಿವರಾದ ಬಳಿಕ ಕಾರ್ಯಾಧ್ಯಕ್ಷರಾಗಿ ಮುಂದುವರೆಯುತ್ತಿರುವ ವಿಚಾರ, ಕಾರ್ಯಾಧ್ಯಕ್ಷ ಸ್ಥಾನ ಬದಲಾಗಬಹುದು. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸಚಿವರಾದ ಬಳಿಕ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಡಲಿಕ್ಕೆ ಆಗುತ್ತಿಲ್ಲ ಎಂದರು.
Key words: CM Siddaramaiah –not-atheist-Ram Mandir - Minister- Ishwar Khandre