ಬರ ನಿರ್ವಹಣೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರ ಏನು? ರಾಜ್ಯ ಬಿಜೆಪಿ ವಕ್ತಾರ ಎಂ ಜಿ ಮಹೇಶ್ ಕಿಡಿ.
ಮೈಸೂರು,ನವೆಂಬರ್,1,2023(www.justkannada.in): ರಾಜ್ಯದಲ್ಲಿ ಬರಪರಿಸ್ಥಿತಿ ಆವರಿಸಿದ್ದು, ಅಸಮರ್ಪಕ ರಾಜ್ಯ ಸರ್ಕಾರ ತನಗರಿವಿಲ್ಲದೇ ಕೆಲಸ ಮಾಡುತ್ತಿಲ್ಲ. ಬರ ನಿರ್ವಹಣೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರ ಏನು ಎಂಬುದನ್ನು ತಿಳಿಸಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಎಂ ಜಿ ಮಹೇಶ್ ಕಿಡಿ ಕಾರಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಎಂ.ಜಿ ಮಹೇಶ್, ಕರ್ನಾಟಕದಲ್ಲಿ ಆವರಿಸಿರುವ ಬರ ಪರಿಸ್ಥಿತಿ ಕುರಿತು ಬಸವರಾಜ ಪಾಟೀಲ್ ಯತ್ನಾಳ್, ಸಂಸದ ಪ್ರತಾಪ್ ಸಿಂಹ, ಹರ್ಷವರ್ಧನ್, ಶ್ರೀವತ್ಸ ಅವರನ್ನೊಳಗೊಂಡ ತಂಡ ಅಧ್ಯಯನ ಮಾಡಲಿದೆ. ಅಸಮರ್ಪಕ ರಾಜ್ಯ ಸರ್ಕಾರ ತನಗರಿವಿಲ್ಲದೇ ಕೆಲಸ ಮಾಡುತ್ತಿಲ್ಲ. ಇದುವರೆಗೂ ಬರದ ಬಗ್ಗೆ ಒಂದು ಸಭೆ ಮಾಡಿಲ್ಲ. ಕೇಂದ್ರದಿಂದ ರಾಜ್ಯ ಸರ್ಕಾರ 17900 ಕೋಟಿ ರೂಪಾಯಿ ಪರಿಹಾರ ಕೇಳಿದೆ. ಬಿಜೆಪಿ ಸರ್ಕಾರ ಬಂದ ಹೊಸದರಲ್ಲಿ ಭಾರೀ ಪ್ರವಾಹ ಉಂಟಾಗಿತ್ತು. ಆಗ ಯಡಿಯೂರಪ್ಪ ಒಬ್ಬರೇ ಇಡೀ ರಾಜ್ಯ ಸುತ್ತಾಡಿದರು. ಪರಿಹಾರವಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಕೊಡುವ ಕೆಲಸ ಮಾಡಿದರು. ಬರ ನಿರ್ವಹಣೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರ ಏನು? ಎಂದು ಪ್ರಶ್ನಿಸಿದರು.
ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಬಳಿ ಕನಿಷ್ಠ 350 ಕೋಟಿಯಿಂದ 400 ಕೋಟಿ ಲಭ್ಯವಿರುವ ಹಣ ಬಳಸಿಕೊಂಡು ಏನು ಮಾಡುತ್ತಿದ್ದೀರಿ?. ಕೇಂದ್ರ ಕೊಟ್ಟ 5 ಕೆಜಿ ಅಕ್ಕಿಯಲ್ಲಿ ಎರಡು ಕೆಜಿ ಕಡಿಮೆ ಮಾಡಿದ್ದೀರಿ. ಗ್ಯಾರಂಟಿ ಅನುಷ್ಠಾನ ಮಾಡಿದ್ದರೆ ಬಹಿರಂಗ ಅಂಕಿ- ಅಂಶ ಕೊಡಲು ಏಕೆ ಸಾಧ್ಯವಿಲ್ಲ. ಬೇರೆ ರಾಜ್ಯದ ಚುನಾವಣೆಗೆ ಇಲ್ಲಿಂದ ಹಣ ಕಳುಹಿಸುತ್ತಿದ್ದಾರೆ. ಕಾಂಗ್ರೆಸ್ ಗೆ ಕರ್ನಾಟಕ ಎಟಿಎಂ ಆಗಿದೆ ಎಂದು ಮಹೇಶ್ ವಾಗ್ದಾಳಿ ನಡೆಸಿದರು.
ತಮ್ಮದೇ ಪಕ್ಷದ ಶಾಸಕ ಬಸವರಾಜರಾಯರೆಡ್ಡಿ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಒಳಗಿನ ಡಿಕೆಶಿ, ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ನಡುವಿನ ಆಂತರಿಕ ಕಲಹ ಮುಚ್ಚಿಕೊಳ್ಳಲು ಬಿಜೆಪಿ ಅಪರೇಷನ್ ಕಮಲ ಮಾಡುತ್ತಿದೆ ಎನ್ನುತ್ತೀರಿ. ಅನಾವಶ್ಯಕವಾಗಿ ರಾಮನಗರವನ್ನು ಬೆಂಗಳೂರಿಗೆ ಸೇರ್ಪಡೆ ವಿಚಾರ ತರುತ್ತೀದ್ದಿರಿ. ನೀವು ಅಸಮರ್ಪಕ ಎಂದು ತೋರಿಸಿಕೊಂಡಿದ್ದೀರಿ ಎಂದು ಹರಿಹಾಯ್ದರು.
ನಾವು 17 ತಂಡಗಳ ಮೂಲಕ ರಾಜ್ಯದಾದ್ಯಂತ ಬರ ಪರಿಸ್ಥಿತಿ ಅಧ್ಯಯನ ಮಾಡುತ್ತೇವೆ. 5 ತಿಂಗಳಲ್ಲಿ ರಾಜ್ಯದ 286 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಅವಧಿಯಲ್ಲಿ ಸರ್ ಪ್ಲಸ್ ಕರೆಂಟ್ ಇರುತ್ತಿತ್ತು. ಉತ್ತರ ಪ್ರದೇಶಕ್ಕೆ ನಾವೇ ಕರೆಂಟ್ ಕೊಡುತ್ತಿದ್ದೆವು. ಈಗ ರಾಜ್ಯವನ್ನು ಕತ್ತಲೆ ಕೂಪಕ್ಕೆ ತಳುತ್ತಿದ್ದೀರಿ. ವಿದ್ಯುತ್ ಖರೀದಿ ನೆಪದಲ್ಲಿ ಹಣ ಲೂಟಿ ಮಾಡುವ ಹುನ್ನಾರ ಇದಾಗಿರಬಹುದು. ಕಾಂಗ್ರೆಸ್ ಗೆ ಮತ ಕೊಟ್ಟ ಜನರು ಈಗ ಮರುಕ ವ್ಯಕ್ತಪಡಿಸುತ್ತಿದ್ದಾರೆ. ತತ್ ಕ್ಷಣವೇ ಬರ ಪೀಡಿತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕಳುಹಿಸಬೇಕು. ಡಿಎಂಕೆಯ ಸ್ಟಾಲಿನ್ ಅವರೊಟ್ಟಿಗೆ ಮಾತನಾಡಿ ಮೇಕೆದಾಟು ಯೋಜನೆಗೆ ತಡೆಕೋರಿ ಹಾಕಿರುವ ಅರ್ಜಿಯನ್ನು ವಾಪಸ್ ಪಡೆಯಲು ಹೇಳಿ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದು ರಾಜ್ಯ ಬಿಜೆಪಿ ವಕ್ತಾರ ಎಂ ಜಿ ಮಹೇಶ್ ಗುಡುಗಿದರು.
Key words: CM Siddaramaiah- role - drought management-State –BJP- spokesperson -MG Mahesh