For the best experience, open
https://m.justkannada.in
on your mobile browser.

SC, ST ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: SCSP, TSP ಅನುದಾನ ಖರ್ಚು ಮಾಡದಿದ್ರೆ ಕ್ರಮ- ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್

03:10 PM Jul 05, 2024 IST | prashanth
sc  st ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್  scsp  tsp ಅನುದಾನ ಖರ್ಚು ಮಾಡದಿದ್ರೆ ಕ್ರಮ  ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್

ಬೆಂಗಳೂರು ಜುಲೈ,5, 2024 (www.justkannada.in): ಎಸ್ ಸಿ ಎಸ್ ಪಿ ಮತ್ತು ಟಿಎಸ್ ಪಿ ಅನುದಾನವನ್ನ ಶೇ 100 ರಷ್ಟು ಖರ್ಚು ಮಾಡದಿದ್ದರೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಶೇ 100 ಸಾಧನೆ ಆಗಬೇಕು. ಇದರಲ್ಲಿ ನಿರ್ಲಕ್ಷ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ  ಇಂದು  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆ ನಡೆಯಿತು. ಸಭೆಯಲ್ಲಿ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನ ನೀಡಿದರು.

ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

IAS, IRS ಸೇರಿ ಮತ್ತಿತರೆ ಸ್ಪರ್ಧಾತ್ಮಕ ಪರೀಕ್ಷೆ ಸಿದ್ದತೆಗಳಿಗಾಗಿ ದೆಹಲಿಯಲ್ಲಿ ಎಸ್ ಸಿ ಮತ್ತು ಎಸ್ ಟಿ ಮಕ್ಕಳಿಗೆ  ಉತ್ತಮ ಹಾಸ್ಟೆಲ್ ಕಟ್ಟಿಸುವ ಜೊತೆಗೆ ತಿಂಗಳಿಗೆ 15 ಸಾವಿರ ರೂಪಾಯಿ ಕೊಡಲಾಗುವುದು (ಸದ್ಯ 10 ಸಾವಿರ ಕೊಡಲಾಗುತ್ತಿದ್ದು 5 ಸಾವಿರ ಹೆಚ್ಚಿಸಲಾಗುವುದು. ಈ ಸಂಬಂಧ ತಕ್ಷಣ ಆದೇಶ ಹೊರಡಿಸಲಾಗುವುದು) ದೆಹಲಿ ಹಾಸ್ಟೆಲ್ ನಲ್ಲಿ ಹೈಟೆಕ್ ಲೈಬ್ರೆರಿ ಮಾಡಲಾಗುವುದು. ಅಲ್ಲಿ ಎಲ್ಲಾ ರೀತಿಯ ಪುಸ್ತಕಗಳು ಸಿಗುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಿ.ಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಸೂಚನೆಗಳು ಈ ಕೆಳಕಂಡಂತಿದೆ.

*ಇಡೀ ದೇಶದಲ್ಲಿ scsp/tsp ಕಾಯ್ದೆ ಮಾಡಿರುವುದು ನಾವು ಮಾತ್ರ.  ಜನಸಂಖ್ಯೆಗೆ ಅನುಗುಣವಾಗಿ sc-st ಸಮುದಾಯಕ್ಕೆ ಹಣ ಖರ್ಚು ಕೊಡುತ್ತಿರುವುದು ನಾವು ಮಾತ್ರ. ನಮ್ಮ ಸರ್ಕಾರ ಮಾತ್ರ.  2024-25 ನೇ ಸಾಲಿನಲ್ಲಿ 39121.46 ಕೋಟಿ ಇದ್ದರೆ, ಹಿಂದಿನ ವರ್ಷ 35221.84 ಕೋಟಿ ಇತ್ತು. ಇದರಲ್ಲಿ ಬಿಡುಗಡೆ ವೆಚ್ಚದ ಶೇ 99.64 ಕೋಟಿಯಷ್ಟು ಖರ್ಚಾಗಿದೆ. ಉಳಿದದ್ದು ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು.

*ಆಯಾಯ ವರ್ಷವೇ ಶೇ 100 ರಷ್ಟು ಖರ್ಚು ಮಾಡಬೇಕು ಎನ್ನುವ ಕಾನೂನು ಮಾಡಿದ್ದು ನಾವೇ. ಖರ್ಚು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ನಿಯಮವನ್ನೂ ಮಾಡಿದ್ದೇವೆ. ಯಾರು ನಿರ್ಲಕ್ಷ್ಯ ಮಾಡಿದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯಕ್ಕೆ ಕ್ಷಮೆ ಇಲ್ಲ.  ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಎಸ್‌.ಸಿ.ಎಸ್‌.ಪಿ., ಟಿ.ಎಸ್.ಪಿ. ಕಾಯ್ದೆ 2013 ನ್ನು ಜಾರಿಗೆ ತಂದು, ಸರ್ಕಾರದ ಒಟ್ಟಾರೆ ಅಭಿವೃದ್ಧಿ ಆಯವ್ಯಯದ ಶೇ. 24.1 ರಷ್ಟನ್ನು ಈ ಸಮುದಾಯಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತಿದೆ. ಇಂದು ನಡೆದ ರಾಜ್ಯ ಪರಿಷತ್‌ ಸಭೆಯಲ್ಲಿ 2024-25 ನೇ ಸಾಲಿಗೆ ಎಸ್.ಸಿ.ಎಸ್‌.ಪಿ. / ಟಿಎಸ್‌.ಪಿ. ಅಡಿ ಒಟ್ಟಾರೆ. ರೂ.39,121.46 ಕೋಟಿ ಅನುದಾನ ಒದಗಿಸಲಾಗಿದೆ.

*ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇದು 11% ಅಂದರೆ ರೂ.3897 ಕೋಟಿ ಹೆಚ್ಚಳವಾಗಿದೆ. ಎಸ್‌.ಸಿ.ಎಸ್‌.ಪಿ. ಅಡಿ 27,673.96 ಕೋಟಿ ರೂ. ಹಾಗೂ ಟಿ.ಎಸ್.ಪಿ. ಅಡಿ 11447.50 ಕೋಟಿ ರೂ. ಒದಗಿಸಲಾಗಿದೆ. ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 8,480 ಕೋಟಿ ರೂ., ಇಂಧನ ಇಲಾಖೆಗೆ 5026 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 4174 ಕೋಟಿ ರೂ., ಕಂದಾಯ ಇಲಾಖೆಗೆ 3403 ಕೋಟಿ ರೂ. , ಗ್ರಾಮೀಣಾಭಿವೃದ್ಧಿ ಇಲಾಖೆಗೆ 3163  ಕೋಟಿ ರೂ. ಒದಗಿಸಲಾಗಿದೆ.

*ಕಳೆದ ವರ್ಷ 35221.84 ಕೋಟಿ ರೂ. ಆಯವ್ಯಯ ಹಂಚಿಕೆಗೆ ಎದುರಾಗಿ ಶೇ. 97.23 ರಷ್ಟು ಹಾಗೂ ಬಿಡುಗಡೆಗೆ ಎದುರಾಗಿ ಶೇ. 99.64 ರಷ್ಟು ಸಾಧನೆಯಾಗಿದೆ.

*ಈ ಅನುದಾನ ಯಾವ ಕಾರಣಕ್ಕೂ ಬಳಕೆಯಾಗದೆ ಉಳಿಕೆ (lapse) ಆಗಬಾರದು. ಅದೇ ವರ್ಷ ವೆಚ್ಚವಾಗಬೇಕು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಿಗಮಗಳಲ್ಲಿ ಹಣ ವೆಚ್ಚವಾಗಿಲ್ಲ. ಇದಕ್ಕೆ ಶಾಸಕರು ಪಟ್ಟಿ ಕೊಡಲಿಲ್ಲ ಎಂಬ ಕಾರಣ ನೀಡುತ್ತಾರೆ.

*ನಿಗಮಗಳ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸಚಿವರು, ಶಾಸಕರು ಫಲಾನುಭವಿಗಳ ಪಟ್ಟಿ ಒದಗಿಸುವಂತೆ ಮನವೊಲಿಸಬೇಕು.

*ಈ ಯೋಜನೆಗಳ ಮೌಲ್ಯಮಾಪನದಿಂದ ಶೇ. 65 ರಷ್ಟು ಉಪಯೋಗವಾಗಿರುವುದು ಕಂಡು ಬರುತ್ತದೆ.

*ಸೆಕ್ಷನ್‌ 7 (ಡಿ) ಕೈಬಿಡಲಾಗಿದೆ. ಇದರಿಂದಾಗಿ ಈ ಯೋಜನೆಯ ಸಂಪೂರ್ಣ ವೆಚ್ಚ ಈ ಸಮುದಾಯದವರಿಗೇ ಬಳಕೆಯಾಗಲಿದೆ.

*2024-25 ನೇ ಸಾಲಿಗೆ scsp/tsp ನಲ್ಲಿ ಲಭ್ಯ ಇರುವ ಹಣವನ್ನು ಖರ್ಚು ಮಾಡಲು action plan ಅನುಮೋದನೆ ಮಾಡಲಾಗಿದೆ.

*ರಾಜ್ಯದ ಅಭಿವೃದ್ಧಿ ಆಯವ್ಯಯ ಈ ಸಾಲಿನಲ್ಲಿ ಒಟ್ಟು 160000 ಕೋಟಿ. ಇದರಲ್ಲಿ scsp/tsp ಗೆ ಸುಮಾರು 39121.46 ಕೋಟಿ scsp/tsp ಅಡಿ 34 ಇಲಾಖೆಗಳಿಗೆ ಹಂಚಿಕೆ ಮಾಡಿರುವ ಹಣ action plan ನಲ್ಲಿದೆ.

*ಹಿಂದಿನ ವರ್ಷ 97.81 ಕೋಟಿ ಉಳಿತಾಯವಾಗಿದೆ. ಈ ಹಣವೂ ಸೇರಿದೆ.

*ಕಳೆದ ವರ್ಷಕ್ಕಿಂತ ಈ ವರ್ಷ  3900 ಕೋಟಿ ಹೆಚ್ಚಾಗಿದೆ. 3900 ಕೋಟಿ ಹೆಚ್ಚುವರಿ ಹಣ ಈ ವರ್ಷ ನೀಡಿದ್ದೇವೆ. ಈ ಹಣ ಇಲಾಖೆಗಳಿಗೆ ಹಂಚಿಕೆಯಾಗಿದ್ದು ಇದರ ಸದುಪಯೋಗ ಆಗಬೇಕು. ಸಮಾಜ ಕಲ್ಯಾಣ ಇಲಾಖೆ, ನಿಗಮಗಳು ಕಾಯ್ದೆಯ ಉದ್ಸೇಶಕ್ಕೆ  ಪೂರಕವಾಗಿ  ಕೆಲಸ ಮಾಡಬೇಕು.

*ಶೇ100 ಸಾಧನೆ ಆಗಬೇಕು. ಇದರಲ್ಲಿ ನಿರ್ಲಕ್ಷ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ.

*ಕಾಯ್ದೆಯಲ್ಲಿದ್ದ 7D ರದ್ದು ಮಾಡಿದ ರೀತಿಯಲ್ಲೇ 7C ಕೂಡ ರದ್ದು ಮಾಡಬೇಕು ಎನ್ನುವ ಶಾಸಕ ನರೇಂದ್ರಸ್ವಾಮಿ ಅವರು ಸಲಹೆ ನೀಡಿದ್ದಾರೆ. ಈ ಸಲಹೆಯ ಸಾಧಕ ಬಾದಕಗಳನ್ನು ಪರಿಶೀಲಿಸಲಾಗುವುದು ಎಂದರು.

*ಖಾಲಿ ಇರುವ ಹೋಬಳಿಗಳಲ್ಲೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಆರಂಭಿಸಲೇಬೇಕು.

*ಆಯಾ ಹೋಬಳಿಯ ವಿದ್ಯಾರ್ಥಿಗಳಿಗೆ ಶೇ75 ರಷ್ಟು ಸೀಟು, ಉಳಿದ ಶೇ25 ರಷ್ಟು ಸೀಟುಗಳನ್ನು ಇತರೆ ಪ್ರದೇಶದ ವಿಧ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ನೀಡಬೇಕು.

*ಸರ್ಕಾರಿ ಶಾಲೆಗಿಂತ ಕ್ರೈಸ್ ನಲ್ಲಿ ಓದಿರುವ ಬಡ ವಿಧ್ಯಾರ್ಥಿನಿ ಕ್ರೈಸ್ ಶಾಲೆಯಲ್ಲಿ ಓದಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಇದನ್ನು ಪ್ರೋತ್ಸಾಹಿಸುತ್ತಲೇ ಇತರೆ ನ್ಯೂನ್ಯತೆಗಳನ್ನು ಸರಿಪಡಿಸಲು ಅಧಿಕಾರಿಗಳು ಶ್ರಮಿಸಬೇಕು.

*ಬಜೆಟ್ ನಲ್ಲಿ ನಾವು ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳನ್ನೂ ನೀವು ಜಾರಿ ಮಾಡಲೇಬೇಕು.

*ಹಿಂದಿನ ಬಿಜೆಪಿ ಸರ್ಕಾರ ಮೂರು ವರ್ಷ ಕ್ರೈಸ್ ಮಕ್ಕಳಿಗೆ ಬಾತ್ ರೂಮ್ ಕಿಟ್ ಕೊಡ್ಲೇ ಇಲ್ಲ. ಈಗ ನಾವು ಸರಿಯಾಗಿ ವಿತರಿಸುತ್ತಿದ್ದೇವೆ.

*ಆಶ್ರಮ ಶಾಲೆಗಳಲ್ಲಿ ರಾತ್ರಿ ವೇಳೆ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ ಎನ್ನುವುದು ಕಂಡುಬಂದಿದೆ. ಇದಕ್ಕೆ ಅವಕಾಶ ಆಗಬಾರದು. ಮನೆಗೆ ಕರೆದೊಯ್ಯದಂತೆ ಪೋಷಕರಿಗೆ ಒಪ್ಪಿಸಬೇಕು.

*ಹಳ್ಳಿಗಾಡು, ಬಡ ಕುಟುಂಬಗಳಿಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ಸರಿಯಾಗಿ ತಲುಪಿಸಬೇಕು. ಇದರಲ್ಲಿ ವಿಫಲರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

*ನಾವು ಕೊಟ್ಟ ಅನುದಾನ ಆಯಾ ಉದ್ದೇಶಗಳಿಗೇ ಬಳಕೆಯಾಗಬೇಕು.

*ಇದರಲ್ಲಿ ಯಾವುದೇ ರಾಜಿ ಇಲ್ಲದಂತೆ ಆಯಾ ಸಮುದಾಯಗಳಿಗೆ ಸವಲತ್ತು ತಲುಪಿಸಬೇಕು.

*ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸದಿದ್ದರೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುವುದು.

*10 ವರ್ಷದಲ್ಲಿ ಈ ಯೋಜನೆಯಿಂದ ಸಮುದಾಯದ ಮೇಲೆ ಬೀರಿರುವ ಪರಿಣಾಮ, ಸಮುದಾಯಕ್ಕೆ ಯೋಜನೆ ತಲುಪಿರುವ ಪ್ರಮಾಣದ ಬಗ್ಗೆ, ಹಾಗೂ ಅವರ ಆರ್ಥಿಕ‌ ಸ್ಥಿತಿ ಪ್ರಗತಿ ಆಗಿರುವ ಬಗ್ಗೆ ಮೌಲ್ಯಮಾಪನ ಮಾಡಲಾಗುವುದು.

*3 ತಿಂಗಳ ಬಳಿಕ ಮತ್ತೊಮ್ಮೆ ಪರಿಷತ್ ಸಭೆ ಕರೆಯುತ್ತೇವೆ. ಯಾರಿಂದ ಲೋಪ ಆಗಿದೆ ಎಂದು ಗೊತ್ತಾದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು.

*ಈ ವರ್ಷದ action plan ಅನ್ನು ಈ ಸಭೆಯಲ್ಲಿ ಶಾಸಕರು/ಸಚಿವರು/ ಅಧಿಕಾರಿಗಳು ನೀಡಿದ ಸಲಹೆಗಳ ಸಮೇತ ಜಾರಿ ಆಗಬೇಕು ಎನ್ನುವ ಸೂಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಸಚಿವರಾದ ಹೆಚ್.ಕೆ.ಪಾಟೀಲ್, ಪ್ರಿಯಾಂಕ್‌ ಖರ್ಗೆ, ಡಾ. ಎಂ.ಸಿ. ಸುಧಾಕರ್‌, ಪರಿಷತ್ತಿನ ಸದಸ್ಯರಾಗಿರುವ ಶಾಸಕರುಗಳಾದ ಪ್ರಸಾದ್ ಅಬ್ಬಯ್ಯ, ಬಸಂತಪ್ಪ, ಶ್ರೀನಿವಾಸ್, ನರೇಂದ್ರಸ್ವಾಮಿ, ಕೃಷ್ಣಾನಾಯಕ್ , ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಸಂಸದ ಸುನಿಲ್ ಬೋಸ್.  ಪ್ರಕಾಶ್  ಲೋಕಸಭಾ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯೆಲ್‌, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್‌ ಗೋಯೆಲ್‌, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Key words: CM Siddaramaiah, warns, officials, SCSP, TSP, grants

Tags :

.