For the best experience, open
https://m.justkannada.in
on your mobile browser.

ಏಕಾಏಕಿ ರೈತರ ಬಂಧನಕ್ಕೆ ಖಂಡನೆ: ಮೈಸೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ, ಆಕ್ರೋಶ.

03:30 PM Nov 17, 2023 IST | prashanth
ಏಕಾಏಕಿ ರೈತರ ಬಂಧನಕ್ಕೆ ಖಂಡನೆ  ಮೈಸೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ  ಆಕ್ರೋಶ

ಮೈಸೂರು,ನವೆಂಬರ್,17,2023(www.justkannada.in): ಮೈಸೂರಿಗೆ ಸಿಎಂ ಸಿದ್ಧರಾಮಯ್ಯ ಆಗಮನ ಹಿನ್ನೆಲೆ ಘೇರಾವ್ ಹಾಕುವ ಸಾಧ್ಯತೆ ಇದ್ದಿದ್ದರಿಂದ ರಾತ್ರೋರಾತ್ರಿ ಪೊಲೀಸರು  ಏಕಾಏಕಿ ರೈತರನ್ನ ಬಂಧಿಸಿದ್ದನ್ನ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಿಎಂ ಆಗಮನ ಹಿನ್ನೆಲೆ ರೈತರ ಬಂಧಿಸಿದ್ದಕ್ಕೆ ಮೈಸೂರಿನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು  ರೈತರ ಬಂಧನ ಖಂಡಿಸಿ ತಿ.ನರಸೀಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು. ಕುರುಬೂರು ಗ್ರಾಮದಲ್ಲಿ ಮೈಸೂರು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ತಡೆದು ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪ್ರತಿಭಟನೆಯಿಂದ ಕೆಲಕಾಲ ಮೈಸೂರು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ವೇಳೆ  ರೈತರ ಪ್ರತಿಭಟನೆಯಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ ಸಿಲುಕಿದ್ದು ಈ ವೇಳೆ ಶಾಸಕ ಎ ಆರ್ ಕೃಷ್ಣಮೂರ್ತಿ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ಪೋಲಿಸರ ನಡೆ ಖಂಡಿಸಿ ಪ್ರತಿಭಟನೆಗೆ ಕರೆ ಕೊಟ್ಟಿದ್ದ ಕುರುಬೂರು ಶಾಂತಕುಮಾರ್ ಅವರನ್ನ ಪೊಲೀಸರು ಬಂಧಿಸಿದರು.  ಮನೆಯಿಂದ ಹೊರ ಬರುತ್ತಿದ್ದಂತೆ ಕುರುಬೂರು ಶಾಂತಕುಮಾರ್ ಅವರನ್ನ ನಜರ್ ಬಾದ್ ಪೋಲಿಸರು ಬಂಧಿಸಿ  ಪೋಲಿಸ್ ಕಮಿಷನರ್ ಕಚೇರಿಗೆ ಕರೆದೋಯ್ದರು. ಬಳಿಕ ಡಿಆರ್ ಮೈದಾನಕ್ಕೆ ಬಂಧಿತರ ಸ್ಥಳಾಂತರ ಮಾಡಿದರು.

ಈ ಕುರಿತು ಮಾತನಾಡಿದ ಕುರುಬೂರು ಶಾಂತಕುಮಾರ್, ಪೋಲಿಸರು ಸಮಾಜ ಘಾತುಕ ಶಕ್ತಿಗಳನ್ನು ಮುಂಜಾಗ್ರತಾ ಕ್ರಮ ಅಂತ ಹೇಳಿ ಬಂಧಿಸುವುದನ್ನ ನೋಡಿದ್ದೇವೆ. ಆದರೆ ನಮ್ಮ ಮೈಸೂರು, ಚಾಮರಾಜನಗರದ ಕೆಲವು ರೈತರನ್ನು ಮಧ್ಯರಾತ್ರಿಯಲ್ಲೇ ಬಂಧಿಸಿರೋದು ಖಂಡನೀಯ. ಪೋಲಿಸರು ಮಂತ್ರಿಗಳ ಸರ್ಕಾರದ ಗುಲಾಮರಂತೆ ವರ್ತಿಸುವುದು ಸರಿಯಲ್ಲ. ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಬಂಧಿಸುವ ಅವಶ್ಯಕತೆ ಏನಿತ್ತು.? ರೈತರು ತಮ್ಮ ಬೇಡಿಕೆಗಳನ್ನ, ಹಕ್ಕೊತ್ತಾಯಗಳನ್ನ ಕಾನೂನು ಬದ್ಧವಾಗಿ ಕೇಳುತ್ತಿದ್ದಾರೆ. ಅದನ್ನು ನೀವು ಹತ್ತಿಕ್ಕುವಂತ ಕೆಲಸವನ್ನು ಮಾಡುವುದು ಸರಿಯಲ್ಲ. ಈ ಕೂಡಲೇ ಬಂಧನ ಮಾಡಿರುವ ರೈತರನ್ನು ಬಿಡುಗಡೆ ಮಾಡಬೇಕು. ಇಲ್ಲ ಅಂದರೆ ರಸ್ತೆ ತಡೆ ಚಳುವಳಿಗೆ ರೈತರಿಗೆ ಕರೆ ಕೊಡಬೇಕಾಗುತ್ತದೆ. ಎಂದು ಎಚ್ಚರಿಕೆ ನೀಡಿದರು.

ರೈತರ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತ ಮುಖಂಡ ಕಿರಗಸೂರು , ಇದು ಹಿಟ್ಲರ್ ಸರ್ಕಾರವೋ ಇಲ್ಲ ಜನ ಸಾಮಾನ್ಯರ ಸರ್ಕಾರವೋ. ವಿವಿಧ ಬೇಡಿಕೆ ಈಡೇರಿಸುವಂತೆ ನಾವು ಹಲವು ತಿಂಗಳಿಂದ ರೈತರು ಸರ್ಕಾರವನ್ನ ಒತ್ತಾಯ ಮಾಡುತ್ತಿದ್ದಾರೆ. ಕಳೆದ ವಾರ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಲಿಕ್ಕೆ ಮುಂದಾಗಿದ್ದಾಗಲೂ ಏಕಾಏಕಿ ಬಂಧಿಸಿದ್ರು. ಈಗ ಮತ್ತೆ ನಮ್ಮನ್ನ ಸಿಎಂ ಬರ್ತಾರೆ ಅಂತ ಬಂಧಿಸಿದ್ದಾರೆ. ಸಿದ್ದರಾಮಯ್ಯನವರು ರೈತರನ್ನ ಕರೆಸಿ ಮಾತನಾಡಬಹುದಿತ್ತು. ಅದನ್ನ ಬಿಟ್ಟು ರೈತರನ್ನ ಬಂಧಿಸಿರುವುದು ನಾಚಿಕೆಗೇಡು. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.

Key words: Condemnation - arrest –farmers- protest – Mysore

Tags :

.