HomeBreaking NewsLatest NewsPoliticsSportsCrimeCinema

ಭ್ರಷ್ಟಾಚಾರದ ತನಿಖೆ ಸಿಬಿಐಗೆ ವಹಿಸಿ, ಮುಖ್ಯಮಂತ್ರಿ ರಾಜೀನಾಮೆ ನೀಡಿ: ವಿಪಕ್ಷ ನಾಯಕ ಆರ್‌.ಅಶೋಕ .

05:47 PM Feb 10, 2024 IST | mahesh

 

ಬೆಂಗಳೂರು, ಫೆಬ್ರವರಿ 10, ೨೦೨೪ : (justkannada in news ) ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ ಭ್ರಷ್ಟಾಚಾರ ಆರೋಪದ ಪ್ರಕರಣವನ್ನು ಕಾಂಗ್ರೆಸ್‌ ಸರ್ಕಾರ ಸಿಬಿಐ ತನಿಖೆಗೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದಿಷ್ಟು..

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ,  ಸರ್ಕಾರದ ಮೇಲೆ 40% ಕಮಿಶನ್‌ನ ಗುರುತರ ಆರೋಪ ಮಾಡಿದ್ದಾರೆ. ಕಮಿಶನ್‌ ಕೊಡುವವರಿಗೆ ಬಿಲ್‌ ಪಾವತಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರ ಬಂದ ಆರಂಭದಿಂದಲೇ ಕಮಿಶನ್‌ ದಂಧೆ ಹಾಗೂ ಲೂಟಿ ನಡೆಯುತ್ತಿದೆ ಎಂದು ನಾವು ಕೂಡ ತಿಳಿಸಿದ್ದೆವು. ಲಂಚ ಕೊಡುತ್ತಿರುವವರ ಸಂಘದವರೇ ಹೇಳಿರುವುದರಿಂದ ಇದು ಲೂಟಿಕೋರ ಸರ್ಕಾರ, 75 ಪರ್ಸೆಂಟ್‌ ಸರ್ಕಾರ ಎಂಬುದು ಕಂಡುಬಂದಿದೆ.

ತೆರಿಗೆ ಅಧಿಕಾರಿಗಳು ದಾಳಿ ಮಾಡಿದಾಗಲೂ ಕಾಂಗ್ರೆಸ್ ಬೆಂಬಲಿಗರ ಮನೆಗಳಲ್ಲಿ ಎರಡು ಕಡೆ ಐವತ್ತು- ಐವತ್ತು ಕೋಟಿ ಹಣ ಸಿಕ್ಕಿದೆ. ಇದು ಲೂಟಿ ಹೊಡೆದ ಹಣ ಎಂಬುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷ್ಯ ಬೇಕು ಎಂದು ಪ್ರಶ್ನಿಸಿದರು.

ಈ ಹಿಂದೆ ಐದು ರಾಜ್ಯಗಳ ಚುನಾವಣೆಗಾಗಿ ಲೂಟಿ ನಡೆಯಿತು. ಈಗ ಮುಂದೆ ಬರುವ ಲೋಕಸಭಾ ಚುನಾವಣೆಗೆ ಎತ್ತುವಳಿ ನಡೆಯುತ್ತಿದೆ. ಎಲ್ಲವನ್ನೂ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಮುಂದೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

 ಯಾರ ಮುಖದ ಮೇಲೆ ಅಂಟಿಸಿಕೊಳ್ಳುತ್ತಾರೆ

ಇದೇ ಕೆಂಪಣ್ಣ ನಮ್ಮ ಸರಕಾರದ ಅವಧಿಯಲ್ಲಿ ಆರೋಪ ಮಾಡಿದಾಗ ಸಿಎಂ ಸಿದ್ದರಾಮಯ್ಯನವರು ಪೇಸಿಎಂ ಎಂಬ ಪೋಸ್ಟರ್‌ ಅಂಟಿಸಿದ್ದರು.  ಈಗ  ಯಾರ ಮುಖದ ಮೇಲೆ ಯಾವ ಪೋಸ್ಟರ್‌ ಅಂಟಿಸಿಕೊಳ್ಳುತ್ತಾರೆ? ಪೇ ಸಿದ್ದರಾಮಯ್ಯ, ಎಟಿಎಂ ಸಿದ್ದರಾಮಯ್ಯ ಎಂದು ಅಂಟಿಸಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು.

ಮಾಡುವುದು ಅನಾಚಾರ ಮನೆ ಮುಂದೆ ಬೃಂದಾವನ ಎನ್ನುವ ಸ್ಥಿತಿ ಸಿಎಂ ಸಿದ್ದರಾಮಯ್ಯನವರದ್ದು. ಅಂದು ರೋಷಾವೇಶದಿಂದ ಮಾತನಾಡುತ್ತಿದ್ದ ಅವರು ಈಗ ಎರಡು ನಾಲಿಗೆಯನ್ನು ತೋರಿಸಿದ್ದಾರೆ. ಲೋಕಸಭಾ ಚುನಾವಣೆಗಾಗಿ ಲೂಟಿ ಮಾಡುತ್ತಿದ್ದು, ಎಂಟೇ ತಿಂಗಳಲ್ಲಿ ಸರ್ಕಾರಕ್ಕೆ ಭ್ರಷ್ಟಾಚಾರದ ಆರೋಪ ಬಂದಿದೆ. ಇನ್ನು ಸಿದ್ದರಾಮಯ್ಯನವರು ಒಂದು ನಿಮಿಷವೂ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರದೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಿದರೆ ಕೂಡಲೇ ನಮ್ಮ ಬಳಿ ಇರುವ ದಾಖಲೆಗಳನ್ನು ನೀಡುತ್ತೇವೆ. ಇವರು ಪ್ರಾಮಾಣಿಕರೇ ಆಗಿದ್ದರೆ, ನಯಾ ಪೈಸೆಯೂ ಭ್ರಷ್ಟಾಚಾರ ಆಗಿಲ್ಲ ಎನ್ನುವವರಾದರೆ ಸಿಬಿಐ ತನಿಖೆಗೆ ನೀಡಲಿ. ಕೆಂಪಣ್ಣ ಅವರು ಆರೋಪ ಮಾಡಿದ ಎಲ್ಲವನ್ನೂ ತನಿಖೆಗೆ ನೀಡಲಿ ಎಂದು ಸವಾಲು ಹಾಕಿದರು.

ಸರ್ಕಾರ ಮಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು. ಸರ್ಕಾರವನ್ನು ತೊಲಗಿಸಲು ಹೋರಾಟ ಮಾಡಲಾಗುವುದು. ಡೆವಲಪರ್‌ಗಳು, ಗುತ್ತಿಗೆದಾರರ ಪ್ರಕಾರ, ಯಾರೇ ಕಟ್ಟಡ ನಿರ್ಮಿಸಿದರೂ ಚದರ ಅಡಿಗೆ 75 ರೂ. ಕಮಿಶನ್‌ ನಿಗದಿಪಡಿಸಲಾಗಿದೆ. ಇದನ್ನು ಯಾರೇ ಮಾಡಿದ್ದರೂ ತಪ್ಪು ಎಂದರು.

ಹಕ್ಕುಚ್ಯುತಿ ಮಂಡಿಸಲಿ

ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶ್ವೇತಪತ್ರವನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಅದರಲ್ಲಿ ತಪ್ಪಿದ್ದರೆ, ಏನಾದರೂ ಅನುಮಾನಗಳಿದ್ದಲ್ಲಿ ಹಕ್ಕುಚ್ಯುತಿ ಮಂಡಿಸಲು ಅವಕಾಶವಿದೆ. ಧಮ್‌ ಇದ್ದರೆ ಕಾಂಗ್ರೆಸ್‌ ನಾಯಕರು ಹಕ್ಕುಚ್ಯುತಿ ಮಂಡಿಸಲಿ ಎಂದು ಸವಾಲೆಸೆದರು.

ಎಸ್‌ಡಿಪಿಐ ಅಧ್ಯಕ್ಷರ ಹೇಳಿಕೆ ದೇಶದ್ರೋಹದ ಹೇಳಿಕೆ. ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳ ಅಂಗಸಂಸ್ಥೆಯೇ ಎಸ್‌ಡಿಪಿಐ. ಅಲ್ಲಿ ಇದ್ದವರೇ ಇಲ್ಲಿ ಬಂದು ಸೇರಿಕೊಂಡಿದ್ದಾರೆ. ಕೋರ್ಟ್‌ ಆದೇಶದ ಪ್ರಕಾರ ಜ್ಞಾನವಾಪಿಯಲ್ಲಿ ಶಿವನ ಪೂಜೆಗೆ ಅವಕಾಶ ಸಿಕ್ಕಿದೆ. ಜ್ಞಾನವಾಪಿ ಹಿಂದೂ ಮಂದಿರ ಎನ್ನುವುದು ಜಗತ್ತಿಗೇ ಗೊತ್ತಿದೆ. ಇದು ತಪ್ಪು ಎಂದಾದರೆ ಸುಪ್ರೀಂ ಕೋರ್ಟ್‌ಗೆ ಹೋಗಲಿ. ಪುರಾತತ್ವ ಇಲಾಖೆಯವರು ಎಲ್ಲವನ್ನೂ ಸಮೀಕ್ಷೆ ಮಾಡಲಿ. ಮಂದಿರಗಳನ್ನು ಮರಳಿ ಹಿಂದೂಗಳಿಗೆ ನೀಡಬೇಕೆನ್ನುವುದು ಬಿಜೆಪಿ ನಿಲುವು. ಅದನ್ನು ಕಾನೂನು ಪ್ರಕಾರವೇ ಮಾಡಲಾಗುವುದು ಎಂದರು.

Key words :  congress ̲ corruption ̲ kempanna ̲ cbi ̲ enquri ̲ bjp ̲ ashok

 

 

 

Tags :
congress ̲ corruption ̲ kempanna ̲ cbi ̲ enquri ̲ bjp ̲ ashok
Next Article