For the best experience, open
https://m.justkannada.in
on your mobile browser.

ಕಾಂಗ್ರೆಸ್ ಶ್ರೀರಾಮನ ವಿರುದ್ಧ ಎಂಬ ಅಪಪ್ರಚಾರ ಖಂಡನೀಯ- ಸಿಎಂ ಸಿದ್ದರಾಮಯ್ಯ

06:25 PM Jan 22, 2024 IST | prashanth
ಕಾಂಗ್ರೆಸ್ ಶ್ರೀರಾಮನ ವಿರುದ್ಧ ಎಂಬ ಅಪಪ್ರಚಾರ ಖಂಡನೀಯ  ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜನವರಿ 22,2024(www.justkannada.in):  ಕಾಂಗ್ರೆಸ್ ನವರು ಶ್ರೀರಾಮನ ವಿರುದ್ಧ ಇದ್ದಾರೆ ಎಂದು ಅಪಪ್ರಚಾರ ಮಾಡುವುದನ್ನು ನಾವು ಖಂಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಶ್ರೀ ರಾಮ ಟೆಂಪಲ್ ಟ್ರಸ್ಟ್  ವತಿಯಿಂದ ಆಯೋಜಿಸಿದ್ದ ಶ್ರೀ ಸೀತಾ, ರಾಮ, ಲಕ್ಷ್ಮಣ ಹಾಗೂ 33 ಅಡಿ ಎತ್ತರದ ಏಕಶಿಳಾ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಮಮಂದಿರವನ್ನು ರಾಜಕೀಯಗೊಳಿಸಬಾರದು. ಶ್ರೀರಾಮಚಂದ್ರ ಎಲ್ಲರ ದೇವರು . ಕೇವಲ ಬಿಜೆಪಿಯವರ ದೇವರಲ್ಲ. ಎಲ್ಲಾ ಹಿಂದೂಗಳ ದೇವರು. ನಾವೂ ಶ್ರೀರಾಮಚಂದ್ರನ ಭಕ್ತರೇ. ಶ್ರೀರಾಮಚಂದ್ರನಿಗೆ ವಿರುದ್ಧವಾಗಿದ್ದೇವೆ ಎಂದು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಈ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು.

ದೇವಸ್ಥಾನ ಉದ್ಘಾಟನೆ: ರಾಜಕೀಯ ಇಲ್ಲ

ಇಂದು ಶ್ರೀ ರಾಮ ಟೆಂಪಲ್ ಟ್ರಸ್ಟ್  ವತಿಯಿಂದ ಆಯೋಜಿಸಿದ್ದ  ಶ್ರೀರಾಮ ದೇವಸ್ಥಾನವನ್ನು ಇದರೊಂದಿಗೆ ಆಂಜನೇಯ ವಿಗ್ರಹವನ್ನೂ ಉದ್ಘಾಟಿಸಿದ್ದೇನೆ. ಇದನ್ನು ನಾವು  ರಾಜಕಾರಣಕ್ಕಾಗಿ ಮಾಡಿರುವುದಲ್ಲ. ಕರ್ನಾಟಕ ರಾಜ್ಯದಲ್ಲಿ ಶ್ರೀರಾಮಚಂದ್ರನ ಬಹಳಷ್ಟು ದೇವಸ್ಥಾನಗಳಿವೆ. ನಮ್ಮೂರಿನಲ್ಲಿಯೂ ನಾನೇ ಶ್ರೀರಾಮಚಂದ್ರನ ದೇವಸ್ಥಾನವನ್ನು ಕಟ್ಟಿಸಿದ್ದೇನೆ. ಇದರಲ್ಲಿ ರಾಜಕೀಯ ಇಲ್ಲ. ಸಮಯ ದೊರೆತಾಗ ಅಯೋಧ್ಯೆಗೆ ನಾನು ಹೋಗುತ್ತೇನೆ. ಶ್ರೀರಾಮಚಂದ್ರನ ಮೂರ್ತಿ ಎಲ್ಲೆಡೆ ಒಂದೇ. ಅಯೋಧ್ಯೆಯಲ್ಲಿ  ಮಾಡಿದರೂ ಒಂದೇ, ನಮ್ಮೂರಿನಲ್ಲಿ ಪೂಜೆ ಮಾಡಿದರೂ ಒಂದೇ. ಬಿಜೆಪಿಯವರು ಅಯೋಧ್ಯೆಯಲ್ಲಿ ರಾಮನನ್ನು ಮಾತ್ರ ಪ್ರತಿಷ್ಠಾಪಿಸಿದ್ದಾರೆ. ರಾಮ, ಆಂಜನೇಯ, ಸೀತೆ ಲಕ್ಷ್ಮಣನನ್ನು ಬೇರ್ಪಡಿಸಲಾಗುವುದಿಲ್ಲ. ಶ್ರೀರಾಮಚಂದ್ರ ಒಬ್ಬನೇ ಇರದೇ ಸೀತಾದೇವಿ, ಲಕ್ಷ್ಮಣ, ಆಂಜನೇಯ ಇದ್ದಾಗ ಮಾತ್ರ ಪರಿಪೂರ್ಣವಾಗುತ್ತದೆ. ಇವರು ಶ್ರೀರಾಮಚಂದ್ರನನ್ನೇ ಬೇರ್ಪಡೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಸರಿ ಇಲ್ಲ ಎಂದು ಅಭಿಪ್ರಾಯಪಟ್ಟರು.

ಮಹಾತ್ಮಾಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತೇವೆ

ಮಹಾತ್ಮಾಗಾಂಧಿಜಿ ರಘುಪತಿ ರಾಘವ ರಾಜಾರಾಮ್ ಎಂದು ಭಜಿಸುತ್ತಿದ್ದು, ಸಾಯುವಾಗಲೂ ಹೇ ರಾಮ್ ಎಂದೇ ಜೀವ ಬಿಟ್ಟರು. ಕಾಂಗ್ರೆಸ್ ಮಹಾತ್ಮಾಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತದೆ. ಬಿಜೆಪಿ ಹೇಳಿದ ರಾಮನನ್ನು ಅಲ್ಲ  ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಅನೇಕ ರಾಜ್ಯಗಳು ರಜೆ ಘೋಷಿಸಿಲ್ಲ

ಕರ್ನಾಟಕದಲ್ಲಿ ಕಾರ್ಯಕ್ರಮದ ಅಂಗವಾಗಿ ರಜೆ ಗೋಷಣೆ ಮಾಡಿಲ್ಲ ಎಂಬಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಅರ್ಧ ದಿನ ರಜೆ ಕೊಟ್ಟಿದ್ದಾರೆ. ದೆಹಲಿ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಲ, ತಮಿಳುನಾಡು,ಕೇರಳದಲ್ಲಿಯೂ ರಜೆ ಕೊಟ್ಟಿಲ್ಲ ಎಂದರು.

ಪಿ ಎಸ್ ಐ ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ವೀರಪ್ಪನವರ ಅಧ್ಯಕ್ಷತೆಯ ಏಕಸದಸ್ಯ ಆಯೋಗ ತನಿಖೆ ಮಾಡಿ ಇಂದು ವರದಿಯನ್ನು ಸಲ್ಲಿಸಿದ್ದಾರೆ, ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words:  Congress –against- Shri Ram -condemnable- CM- Siddaramaiah

Tags :

.