ಕಾಂಗ್ರೆಸ್ ಸರ್ಕಾರ ಬಲಿಷ್ಠ: ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್
ಶಿವಮೊಗ್ಗ, ಫೆಬ್ರವರಿ,24,2024(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಲಿಷ್ಠವಾಗಿದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಇಂದು ಶಿವಮೊಗ್ಗದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುವಭಿಗಳ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿದರು.
ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಒಂದುವರೆ ಕೋಟಿ ಮನೆಗಳು ಪಡೆಯುತ್ತಿವೆ. ಅನ್ನ ಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಮತ್ತು ಹೆಚ್ಚುವರಿ 5 ಕೆ.ಜಿ. ಅಕ್ಕಿಯ ಹಣವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರರೂಗಳನ್ನು ಹಾಕಲಾಗುತ್ತಿದೆ. ಯುವನಿಧಿ ಯೋಜನೆಯಡಿ ಪದವಿಧರರಿಗೆ 3 ಸಾವಿರ ರೂ. ನೀಡುವ ಯೋಜನೆಯಡಿ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನೀಡಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
'ದೇವಸ್ಥಾನಗಳು ಯಾರ ಆಸ್ತಿಯೂ ಅಲ್ಲ, ರಾಮ ಮಂದಿರ ಪೂಜೆಗೆ ಅವಕಾಶ ನೀಡಿದ್ದೇ ರಾಜೀವ್ ಗಾಂಧಿಯವರು. ಧರ್ಮದ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಗ್ಯಾರಂಟಿ ಯೋಜನೆ ನೀಡಿದ್ದು ಜಾತಿ ಮೇಲೆ ಅಲ್ಲ, ನೀತಿ ಮೇಲೆ. ಹೆಚ್ಚುವರಿ 5 ಕೆಜಿ ಅಕ್ಕಿ ಕೇಳಿದ್ದಕ್ಕೆ ಕೇಂದ್ರ ಸರ್ಕಾರ ನೀಡಿಲ್ಲ. ಆದರೂ, ನಾವು ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡಿದ್ದೇವೆ. ದರಿದ್ರ ಲಕ್ಷ್ಮೀ ಹೋಗಿ, ಈಗ ಗೃಹಲಕ್ಷ್ಮೀ ಯೋಜನೆ ಜಾರಿ ಆಗಿದೆ ಎಂದರು.
ಇನ್ನು ಮಲೆನಾಡು ದೊಡ್ಡ ಇತಿಹಾಸ ಹೊಂದಿರುವ ಜಿಲ್ಲೆ ಆಗಿದೆ. ನಾನು ಮಾಜಿ ಸಿಎಂ ಬಂಗಾರಪ್ಪ ಅವರ ಶಿಷ್ಯ ಆಗಿರುವೆ. ಇನ್ನೂ ಎರಡು ಕ್ಷೇತ್ರ ಶಿವಮೊಗ್ಗದಲ್ಲಿ ಮಿಸ್ ಆಗಿದೆ. ವಿಧಾನಸಭೆ ಚುನಾವಣೆಯಲ್ಲಿ 141 ಕ್ಷೇತ್ರ ನನ್ನ ಗುರಿ ಇತ್ತು. ಕಾಂಗ್ರೆಸ್ ಸರಕಾರ ಬಲಿಷ್ಠ ಆಗಿದೆ. ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: Congress -government - strong: Guarantee - not stop - DCM -DK Shivakumar