ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ನಡೆಸಿದ ಪ್ರತಿಭಟನೆಗೂ ಕಾಂಗ್ರೆಸ್’ಗೂ ಸಂಬಂಧವಿಲ್ಲ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್
ಮೈಸೂರು, ಡಿಸೆಂಬರ್ 17, 2023 (www.justkannada.in): ಸಂಸದ ಪ್ರತಾಪ್ ಸಿಂಹ ಅವರನ್ನು ಭಯೋತ್ಪಾದಕನಂತೆ ಬಿಂಬಿಸಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ನಡೆಸಿದ ತಿಭಟನೆಗೂ, ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.
ಪ್ರತಾಪ್ ಸಿಂಹ ಮುಸ್ಲಿಂ ವೇಷಧಾರಿಯಾಗಿರುವಂತೆ ಮಾಡಿ, ಕೈ ನಲ್ಲಿ ಬಾಂಬ್ ಹಿಡಿದಿರುವ ಮಾದರಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಶಿವರಾಮ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೇ ಕೆಲವರು ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಭಯೋತ್ಪಾದಕರಂತೆ ಭಾವಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುತ್ತಿದ್ದಾರೆ. ಶಿವರಾಮ್ ಗೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ. ಶಿವರಾಮ್ ಕಾಂಗ್ರೆಸ್ ಕಾರ್ಯಕರ್ತರಲ್ಲ. ಸಿಎಂ ಸಿದ್ದರಾಮಯ್ಯ ಬಂದಾಗ ಹಿಂದೆ ಮುಂದೆ ಶಿವರಾಮ್ ನಿಂತಿರುತ್ತಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಿವರಾಮ್ ಮಾಡಿರುವ ಪ್ರತಿಭಟನೆಗೂ ಕಾಂಗ್ರೆಸ್ ಗೂ ಸಂಬಂಧವಿಲ್ಲ. ಸಂಸದ ಪ್ರತಾಪ್ ಸಿಂಹ ಅವರನ್ನು ಭಯೋತ್ಪಾದಕ ಎಂದು ಕಾಂಗ್ರೆಸ್ ಎಂದೂ ಹೇಳಿಲ್ಲ. ಪ್ರತಾಪ್ ಸಿಂಹ ಗೌರವಾನ್ವಿತ ಸಂಸತ್ ಸದಸ್ಯರು ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪುಸುಲ್ತಾನ್ ಹೆಸರಿಡಬೇಕು. ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಣ್, ಇದಕ್ಕೆ ಪ್ರತಿಯಾಗಿ ಸಂಸದ ಪ್ರತಾಪ್ ಸಿಂಹ ಪತ್ರ ಬರೆದಿರುವುದಕ್ಕೆ ಎಂ ಲಕ್ಷ್ಮಣ್ ಟಾಂಗ್ ನೀಡಿದರು. ಇದು ಪ್ರತಾಪಸಿಂಹ ಪ್ರಸ್ತಾವನೆ ಮಾಡಿ ಸೂಚಿಸಿರುವುದಲ್ಲ. 2015ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರೇ ಇದನ್ನು ಸೂಚಿಸಿದ್ದಾರೆ. ಆಗಲೇ ಸಚಿವ ಸಂಪುಟ ಒಪ್ಪಿಗೆಯನ್ನು ಸಹ ನೀಡಿದೆ. ಆದರೆ ಕೇಂದ್ರ ಸರ್ಕಾರ 8 ವರ್ಷದಿಂದ ಏನನ್ನೂ ಮಾಡಿಲ್ಲ. ಮೊದಲು ಕೇಂದ್ರದ ಜೊತೆ ಈ ಬಗ್ಗೆ ಪ್ರತಾಪ್ ಸಿಂಹ ಮಾತನಾಡಲಿ ಎಂದು ಎಂ.ಲಕ್ಷ್ಮಣ್ ಹೇಳಿದ್ದಾರೆ.
ಬೆಳಗಾವಿಯ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಘಟನೆ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಹಲವಾರು ಸಚಿವರು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಆದರೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಸೂಚನೆ ಮೇರೆಗೆ ಬಿಜೆಪಿ ನಾಯಕರು ವಂಟಮುರಿಗೆ ಭೇಟಿ ನೀಡಿದ್ದಾರೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳು ನಡೆದಿವೆ. ಇದು ಅಂಕಿ ಅಂಶಗಳ ಮೂಲಕ ಸಾಬೀತಾಗಿದೆ. ಮಣಿಪುರದಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಬೆತ್ತಲೆ ಮೆರವಣಿಗೆ ಮಾಡಿದರು. ಆಗ ಬಿಜೆಪಿಯವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಲಕ್ಷ್ಮಣ್ ಟೀಕಿಸಿದ್ದಾರೆ.