ಕಾಂಗ್ರೆಸ್ ಪಾರ್ಟಿ ಅಂದರೆ ಶೇಮ್ ಲೆಸ್ ಪಾರ್ಟಿ- ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಟೀಕೆ.
ಮೈಸೂರು,ನವೆಂಬರ್,7,2023(www.justkannada.in): ಬಿಜೆಪಿ ಲೀಡರ್ ಲೆಸ್ ಪಾರ್ಟಿ ಎಂದು ಟೀಕಿಸಿದ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದು, ಕಾಂಗ್ರೆಸ್ ಪಾರ್ಟಿ ಅಂದರೆ ಶೇಮ್ ಲೆಸ್ ಪಾರ್ಟಿ ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಪ್ರತಿಪಕ್ಷ ನಾಯಕನಿಲ್ಲದಿದ್ದರೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ ಮಾಡುತ್ತಿದೆ. ಸದನದ ಒಳಗೆ ಹಾಗೂ ಹೊರಗೂ ಬಿಜೆಪಿ ಹೋರಾಟ ಮಾಡುತ್ತಿದೆ. ಪ್ರತಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ. ಮುಂದಿನ ನಾಲ್ಕು ದಿನ ಅಥವಾ ನಲವತ್ತು ದಿನದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಆಗಬಹುದು. ಹಾಗಂತ ನಾವ್ಯಾರು ಸುಮ್ಮನೆ ಕುಳಿತಿಲ್ಲ. ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಬಿಜೆಪಿ ಎಂದೂ ಕೂಡ ಲೀಡರ್ ಲೆಸ್ ಪಾರ್ಟಿಯಲ್ಲ. ಕಾಂಗ್ರೆಸ್ ಪಕ್ಷವೇ ಶೇಮ್ ಲೆಸ್ ಪಾರ್ಟಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಅಸ್ಥಿರತೆಯ ಭೀತಿ.
ಸಿಎಂ ಸಿದ್ದರಾಮಯ್ಯ ಸರ್ಕಾರ ಅಸ್ಥಿರತೆಯ ಭೀತಿ ಎದುರಿಸುತ್ತಿದೆ. ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಾದ್ಯಂತ ಭೀಕರ ಬರಗಾಲ ಉಂಟಾಗಿದೆ. ಆದರೆ ಇತ್ತ ಗಮನ ಹರಿಸದ ರಾಜ್ಯ ಸರ್ಕಾರ ಆಂತರಿಕ ಗೊಂದಲದಲ್ಲಿ ಮುಳುಗಿದೆ. ರಾಜ್ಯ ಸರ್ಕಾರ ಅಸ್ಥಿರವಾಗಿದೆ. ಸಿಎಂ ಸಿದ್ದರಾಮಯ್ಯನವರಿಗೂ ಅಸ್ಥಿರತೆಯ ಭೀತಿ ಕಾಡುತ್ತಿದೆ. ಅವರನ್ನು ಕೆಳಗಿಳಿಸುತ್ತಾರೆಂಬ ಭೀತಿ ಆವರಿಸಿದೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿ ಸ್ಥಾನ ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಲಹದಿಂದಲೇ ಸರ್ಕಾರ ಅಸ್ಥಿರತೆ ಎದುರಿಸುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು.
Key words: Congress party –means- shameless- party-MLA-Basavanagowda Patil Yatnal