For the best experience, open
https://m.justkannada.in
on your mobile browser.

ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಫೇರಿಪರಲ್ ರಿಂಗ್ ರೋಡ್ ನಿರ್ಮಾಣ – ಸಚಿವ ಭೈರತಿ ಸುರೇಶ್.

05:28 PM Nov 06, 2023 IST | prashanth
ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಫೇರಿಪರಲ್ ರಿಂಗ್ ರೋಡ್ ನಿರ್ಮಾಣ – ಸಚಿವ ಭೈರತಿ ಸುರೇಶ್

ಮೈಸೂರು,ನವೆಂಬರ್ ,6,2023(www.justkannada.in): ಮೈಸೂರು ನಗರವು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ನಗರದ ಹೊರ ವರ್ತುಲದಲ್ಲಿ ಪೇರಿಪರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರಾದ ಬಿ. ಎಸ್. ಸುರೇಶ್ ಅವರು ತಿಳಿಸಿದರು.

ಇಂದು ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಮೈಸೂರು ನಗರಾಭಿವದ್ಧಿ ಪ್ರಾಧಿಕಾರದ ವತಿಯಿಂದ ನಗರದ ಹೊರ ವರ್ತುಲ ರಸ್ತೆ ನಿರ್ಮಿಸುವ ಹಾಗೂ ಮೈಸೂರು- ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ  ಜಂಕ್ಷನ್ ಬಳಿ ಫ್ಲೈ ಓವರ್ ನಿರ್ಮಿಸುವ ಕುರಿತ ವಿಸ್ಕೃತ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಮೈಸೂರು ಹೈವೇ ನ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಅವರಿಂದ ಪ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದ್ದು,   ನಿರ್ಮಾಣ ಕಾಮಗಾರಿಯು  ವೈಜ್ಞಾನಿಕವಾಗಿ ನಿರ್ಮಾಣವಾಗಬೇಕು. ಮೈಸೂರು ನಗರವು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೇರಿಪರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಪೆರಿಪರಲ್ ರಿಂಗ್ ರೋಡ್ ಗೆ ಭೂಮಿ ನೀಡಿದವರಿಗೆ ಆ ಜಾಗದ ಬೆಲೆಯ ಹಣ ಅಥವಾ ಬೇರೆ ಭೂಮಿಯನ್ನು ನೀಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್. ಸಿ. ಮಹದೇವಪ್ಪ ಅವರು ಮಾತನಾಡಿ ಬೆಂಗಳೂರು- ಮೈಸೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯನ್ನು ಸರ್ವೇ ಮೂಲಕ ಗುರುತಿಸಿಕೊಳ್ಳಿ, ಇದರಲ್ಲಿ ಬೆಂಗಳೂರು ಕಡೆಯಿಂದ ಬಂದು ಟಿ ನರಸೀಪುರ, ಹುಣಸೂರು, ನಂಜನಗೂಡು ಕಡೆಗೆ ಹೋಗುವ ವಾಹನಗಳ ಸಂಖ್ಯೆ ತಿಳಿದರೆ ರಸ್ತೆ ಸೌಲಭ್ಯ, ಸರ್ವಿಸ್ ರಸ್ತೆ ಕಲ್ಪಿಸಲು ಅನುಕೂಲವಾಗುತ್ತದೆ.

ಮೈಸೂರು ಜಿಲ್ಲೆಯು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿದೆ. ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ನಿರ್ಮಾಣವಾಗುವ ರಸ್ತೆಗಳು, ಫ್ಲೈ ಓವರ್ ಗಳು ಮುಂದಿನ 20 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡಬೇಕು. ಗುಜರಾತ್, ಮಹಾರಾಷ್ಟ್ರದ ಅಧಿಕಾರಿಗಳು ಮೈಸೂರಿನ ಇನ್ಫ್ರಾಸ್ಟ್ರಕ್ಚರ್ ನ್ನು ಅಧ್ಯಯನ ಮಾಡಲು ಜಿಲ್ಲೆಗೆ ಭೇಟಿ ನೀಡಿ ಇದನ್ನು ತಮ್ಮ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲು ವರದಿ ತಯಾರಿಸಿಕೊಳ್ಳುತ್ತಾರೆ. ನಗರದಲ್ಲಿ ಅಗತ್ಯ ಇರುವೆಡೆ ಸ್ಕೈ ವಾಕ್ ಗಳನ್ನು ನಿರ್ಮಿಸಲು ಯೋಜನೆ ತಯಾರಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಕೆ. ಹರೀಶ್ ಗೌಡ, ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಎಂ‌.ಎನ್. ಅಜಯ್ ನಾಗಭೂಷಣ್, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Construction -Fairipal Ring Road - solve – city- traffic –problem-Minister -Bhairati Suresh.

Tags :

.