For the best experience, open
https://m.justkannada.in
on your mobile browser.

ಕುಡಿಯುವ ನೀರು ಕಲುಷಿತಗೊಳ್ಳದಂತೆ ಎಚ್ಚರವಹಿಸಿ-ಮೈಸೂರು ಡಿಸಿ ಡಾ ಕೆ.ವಿ.ರಾಜೇಂದ್ರ ಸೂಚನೆ.

02:18 PM May 22, 2024 IST | prashanth
ಕುಡಿಯುವ ನೀರು ಕಲುಷಿತಗೊಳ್ಳದಂತೆ ಎಚ್ಚರವಹಿಸಿ ಮೈಸೂರು ಡಿಸಿ ಡಾ ಕೆ ವಿ ರಾಜೇಂದ್ರ ಸೂಚನೆ

ಮೈಸೂರು ಮೇ. 22,2024 (www.justkannada.in): ನೀರಿನ ಮೂಲಗಳು ಕಲುಷಿತಗೊಳ್ಳದಂತೆ ಎಚ್ಚರ ವಹಿಸಬೇಕು. ಕುಡಿಯುವ ನೀರಿನ ಮೂಲಗಳಿಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿರುವ ಬಗ್ಗೆ ದೂರು ಬಂದಲ್ಲಿ ತಕ್ಷಣ ಆಯಾ ತಾಲೂಕಿನ ತಹಶೀಲ್ದಾರ್,  ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕಲುಷಿತ ನೀರು ಶುದ್ಧನೀರಿನ ಮೂಲಗಳಿಗೆ ಸೇರದಂತೆ ತಡೆಯುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು  ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಜಿಲ್ಲಾ ಪಂಚಾಯತ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯಾ ತಾಲೂಕಿನ ತಹಶೀಲ್ದಾರ್,  ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ನಗರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕುಡಿಯುವ ನೀರು ಪೂರೈಕೆ ಸಂಬಂಧ ಸಭೆ ನಡೆಸಿ ಮಾತನಾಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಗ್ರಾಮ ಸ್ವಚ್ಛತೆ ಕುರಿತು ಗ್ರಾಮದ ಕೆಲವು ವಾರ್ಡ್‌ಗಳಲ್ಲಿನ ಚರಂಡಿ ನಿರ್ವಹಣೆ ಹಾಗೂ ಸ್ವಚ್ಛತೆಯ ಬಗ್ಗೆ ಅಧಿಕಾರಿಗಳು ಅಗತ್ಯವಾಗಿ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.

ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ನೀರು ಗಂಟ್ಟಿ, ಆಶಾ ಕಾರ್ಯಕರ್ತೆಯರು ಗ್ರಾಮದ  ಪ್ರತಿ ಮನೆಗೂ ಭೇಟಿ ನೀಡಿ ನೀರಿನ ಶೇಖರಣೆ ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ಕರಳು ಬೇನೆ (ಗ್ಯಾಸ್ಟ್ರೋ ಎಂಟರಿಟೈಸ್) ಸೇರಿದಂತೆ ಕರುಳು ಸಂಬಂಧಿ ರೋಗಕ್ಕೀಡಾಗುವವರಿಗಾಗಿ ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ 5 ಬೆಡ್ ಕಾಯ್ದಿರಿಸಿಬೇಕು. ಈ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ದಾಖಲಾದರೆ   ಸಂಬಂಧಪಟ್ಟ ತಾಲೂಕು ಆಸ್ಪತ್ರೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹೋಟೆಲ್ ಗಳಲ್ಲಿ, ರಸ್ತೆಯ ಬದಿಯ ಪಾನಿಪುರಿ ಇನ್ನಿತರ ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಸ್ವಚ್ಚತೆ ಕಾಪಾಡುವುದರ ಬಗ್ಗೆ ತಿಳಿಸಬೇಕು. ಜೊತೆಗೆ ಶುದ್ಧ ಕುಡಿಯುವ ನೀರನ್ನು ಗ್ರಾಹಕರಿಗೆ ನೀಡಬೇಕು ಹಾಗೂ ಬಿಸಿ ನೀರು ನೀಡಬೇಕು ಎಂದು ಸಲಹೆ ನೀಡಬೇಕು ಎಂದರು.

ಗ್ರಾಮೀಣ ಜನವಸತಿ ಪ್ರದೇಶಗಳಿಗೆ ನೀರನ್ನು ಸರಬರಾಜು ಮಾಡುವ ಮುನ್ನ ನೀರಿನ ಮೂಲ, ನೀರಿನ ಸಂಗ್ರಹಣೆ ಹಾಗೂ ನೀರು ಪೂರೈಕೆಯ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ನಂತರ ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸೂಚಿಸಿದರು.

ಎತ್ತರ ಇರುವ ಬೋರ್ ವೆಲ್ ಗಳ ಸುತ್ತಲು ಪ್ಲಾಟ್ ಫಾರಂಗಳನ್ನು ನಿರ್ಮಿಸಿ ಚರಂಡಿ ನೀರು ಹೋಗದಂತೆ ತಡೆಯಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ಸಹಾಯವಾಣಿ 0821-252 6355 ಅಧವಾ ಸಂ. 0821-2423800, 1077 ಕಂಟ್ರೋಲ್ ರೂಂ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಪೈಪುಗಳು ರಸ್ತೆ, ಚರಂಡಿಗಳ ಮೂಲಕ ಹಾದು ಹೊಗಿ ಒಡೆದಿದ್ದರೆ, ತಕ್ಷಣ ಸರಿಪಡಿಸಿ, ಇಲ್ಲದಿದ್ದರೆ ಒಡೆದ ಪೈಪ್‌ ನಿಂದ ಸೋರಿಕೆಯಾದ ನೀರು ಕಲುಷಿತ ನೀರಿನೊಂದಿಗೆ ಬೆರೆಯುವ ಸಂಭವವಿರುವುದರಿಂದ  ಇದರ ಬಗ್ಗೆ ಮುನ್ನಚ್ಚರಿಕೆ ವಹಿಸಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಕಾರ್ಯಪಾಲಕ ಅಭಿಯಂತರರು ಹಾಗೂ ಎಲ್ಲಾ ತಾಲೂಕಿನಲ್ಲಿ ತಹಶೀಲ್ದಾರ್ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

Key words: contaminate, water, Mysore DC,  KV Rajendra

Tags :

.