HomeBreaking NewsLatest NewsPoliticsSportsCrimeCinema

ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಕಾಂಗ್ರೆಸ್‌ ನದ್ದು ಲೂಟಿ ಮಾಡಲ್‌: ಆರ್‌. ಅಶೋಕ್ ಆಕ್ರೋಶ

01:16 PM Jul 03, 2024 IST | prashanth

ಬೆಂಗಳೂರು, ಜುಲೈ 3, 2024 (www.justkannada.in): ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡಾಗಲೇ ಲೂಟಿ ಹೊಡೆಯಲು ಸುರಂಗ ಕೊರೆದಿದ್ದಾರೆ. ಈಗ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಈ ಸರ್ಕಾರ ಲೂಟಿ ಮಾಡಲ್‌ ನೀಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನಿಲುವು ವಿರುದ್ಧ ಬಿಜೆಪಿ ಶಾಸಕರೊಂದಿಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಆರ್‌.ಅಶೋಕ್  ಮುತ್ತಿಗೆ ಹಾಕಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ  ಆರ್.ಅಶೋಕ್ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ದಲಿತರ ಹಣವನ್ನು ತೆಲಂಗಾಣದ ಬಾರ್‌ ಅಂಡ್‌ ರೆಸ್ಟೋರೆಂಟ್‌ ಗೆ, ಚಿನ್ನದ ಅಂಗಡಿಗಳಿಗೆ ಟಕಾಟಕ್‌ ಎಂದು ವರ್ಗಾವಣೆ ಮಾಡಿದ್ದಾರೆ. ಬಿಜೆಪಿಯ ಹೋರಾಟದ ಫಲವಾಗಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರೂ, ಸ್ವಯಂಪ್ರೇರಣೆಯಿಂದ ನೀಡಿದ್ದಾರೆ ಎಂದು ಕಾಂಗ್ರೆಸ್‌ ನವರು ಹೇಳುತ್ತಿದ್ದಾರೆ. ಈಗ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.

ಹಿಂದೆ ತುರ್ತು ಪರಿಸ್ಥಿತಿ ಜಾರಿ ಮಾಡಿದಂತೆಯೇ ಈಗ ಕಾಂಗ್ರೆಸ್‌ ಸರ್ಕಾರ ಬೆಂಗಳೂರಿನಲ್ಲಿ ತುರ್ತು ಸ್ಥಿತಿ ಜಾರಿಗೊಳಿಸಿದೆ. ಬಿಜೆಪಿ ಶಾಸಕರು ಸಿಎಂ ಮನೆಗೆ ಬರಬಾರದೆಂದು ನೂರಾರು ಪೊಲೀಸರನ್ನು ನಿಯೋಜಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಿದ ಭಯೋತ್ಪಾದಕರನ್ನು ಹಿಡಿಯಲು ಐದಾರು ಪೊಲೀಸರನ್ನು ಕಳುಹಿಸಿದ್ದರು. ಇಲ್ಲಿ ಶಾಸಕರನ್ನು ಹಿಡಿಯಲು ನೂರಾರು ಪೊಲೀಸರನ್ನು ಕಳುಹಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 50:50 ಅನುಪಾತದಲ್ಲಿ ನಿವೇಶನಗಳನ್ನು ಹಂಚಿ 3-4 ಸಾವಿರ ಕೋಟಿ ರೂ. ಲೂಟಿ ಮಾಡಲಾಗಿದೆ. 86 ಸಾವಿರ ಅರ್ಜಿಗಳನ್ನು ಸಲ್ಲಿಸಿದ ಬಡವರಿಗೆ ನಿವೇಶನ ನೀಡಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ನಿವೇಶನ ನೀಡಿದ್ದಾರೆ. 15 ನಿವೇಶನ ನೀಡಬೇಕಾದಲ್ಲಿ 60 ನಿವೇಶನ ನೀಡಿದ್ದಾರೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ನಿವೇಶನ ದೋಚಿದ್ದಾರೆ. ಕಾಂಗ್ರೆಸ್‌ ನದ್ದು ಲೂಟಿ ಮಾಡಲ್‌ ಎಂದರು.

ಕಾಂಗ್ರೆಸ್‌ ಸರ್ಕಾರ ಕೂಡಲೇ ಈ ನಿವೇಶನ ಯೋಜನೆಯನ್ನು ರದ್ದು ಮಾಡಬೇಕು. ತನಿಖೆಯನ್ನು ಸಿಬಿಐಗೆ ವಹಿಸಿದರೆ ಸತ್ಯ ಹೊರಬರಲಿದೆ. ಈ ವಿಚಾರವನ್ನು ಸದನದಲ್ಲಿ ಮಾತನಾಡಿ ಸತ್ಯ ಬಯಲಿಗೆ ತರುತ್ತೇವೆ ಎಂದರು.

Key words: corruption, Muda, Congress, R. Ashok

Tags :
congresscorruptionMUDAR.ashok
Next Article