ಪತ್ನಿ ಹತ್ಯೆಗೈದಿದ್ದ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಕೋರ್ಟ್.
ಚಾಮರಾಜನಗರ,ಏಪ್ರಿಲ್,24,2024 (www.justkannada.in): ಶೀಲ ಶಂಕಿಸಿ ಪತ್ನಿಯನ್ನ ಹತ್ಯೆಗೈದಿದ್ದ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಆರೋಪಿ ಪತಿಗೆ ಕೊಳ್ಳೇಗಾಲದ ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ, ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಮಲೈ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ಸೇರಿದ ಆನೆಹೊಲ ಗ್ರಾಮದ್ಹ ಆರೋಪಿ ಮಾದೇವ ಬಿನ್ ಲೇಟ್ ಚಿಕ್ಕಮಾದಯ್ಯ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ.
ಪ್ರಕರಣದ ಹಿನ್ನೆಲೆ..
ಆರೋಪಿ ಮಾದೇವ ಎಂಬಾತ 23/10/2020 ರಂದು ಮಧ್ಯಾಹ್ನ 03.00 ಗಂಟೆ ಸಮಯದಲ್ಲಿ ತನ್ನ ಹೆಂಡತಿ ಸಿದ್ದಮ್ಮ ಎಂಬುವವರ ಶೀಲದ ಮೇಲೆ ಅನುಮಾನ ಪಟ್ಟು ಜಗಳವಾಡಿ ಕುತ್ತಿಗೆ ಹಿಚುಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದನು. ಈ ನಡುವೆ ಜಗಳ ಬಿಡಿಸಲು ಬಂದಿದ್ದ ಪುತ್ರ ಮನುಕುಮಾರ್ ಮತ್ತು ಇತರರಿಗೆ ಬೆದರಿಕೆ ಹಾಕಿದ್ದನು ಎನ್ನಲಾಗಿದೆ. ಈ ಕುರಿತು ಮಲೈ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೊಲೆ ಮಾಡಿರುವ ಬಗ್ಗೆ ಆರೋಪಿ ಮಾದೇವ ವಿರುದ್ಧ ಭಾರತ ದಂಡ ಸಂಹಿತೆ ಕಲಂ: 302 ಹಾಗೂ 506 ಅನುಸಾರ ಶಿಕ್ಷಾರ್ಹ ಅಪರಾಧಕ್ಕಾಗಿ ನ್ಯಾಯಾಲಯಕ್ಕೆ ಮಲೈ ಮಹದೇಶ್ವರ ಬೆಟ್ಟ ಪೊಲೀಸರು ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಕೊಳ್ಳೆಗಾಲದ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಆರೋಪಿಯ ವಿರುದ್ಧ ವಿಚಾರಣೆ ನಡೆಸಿದ್ದು ಆರೋಪಿತನ ವಿರುದ್ಧ ಭಾರತ ದಂಡ ಸಂಹಿತೆ ಕಲಂ: 392 ಮತ್ತು 506 ಅನುಸಾರ ಶಿಕ್ಷಾರ್ಹ ಅಪರಾಧಕ್ಕಾಗಿ ಆರೋಪ ಸಾಭೀತಾದ ಕಾರಣ ಸದರಿ ಆರೋಪಿಗೆ ನ್ಯಾಯಾಧೀಶ ಎನ್.ಆರ್.ಲೋಕಪ್ಪ ಅವರು ಇಂದು ಆರೋಪಿ ಮಾದೇವನಿಗೆ ಭಾರತ ದಂಡ ಸಂಹಿತೆ ಕಲಂ 302 ರ ಕೊಲೆ ಅಪರಾಧಕ್ಕಾಗಿ ಜೀವಾವಧಿ ಜೈಲು ಶಿಕ್ಷೆ ಹಾಗೂ ರೂ.10,000/- ದಂಡ. ದಂಡ ಪಾವತಿಸಲು ವಿಫಲರಾದರೆ ಮತ್ತೆ 03 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಹಾಗೆಯೇ ಭಾರತ ದಂಡ ಸಂಹಿತೆ ಕಲಂ. 506 ರ ಬೆದರಿಕೆ ಅಪರಾಧಕ್ಕಾಗಿ 2 ವರ್ಷ ಜೈಲು ಶಿಕ್ಷೆ ಹಾಗೂ ರೂ.5,000/- ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲರಾದರೆ ಮತ್ತೆ 01 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ಅವರು ವಾದ ಮಂಡಿಸಿದ್ದರು.
Key words: court, life imprisonment, accused