For the best experience, open
https://m.justkannada.in
on your mobile browser.

ಶಿಕ್ಷಣದೊಂದಿಗೆ ಸೇವಾ ಮನೋಭಾವ ಬೆಳಸಿಕೊಳ್ಳಿ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ.

01:48 PM Jun 03, 2024 IST | prashanth
ಶಿಕ್ಷಣದೊಂದಿಗೆ ಸೇವಾ ಮನೋಭಾವ ಬೆಳಸಿಕೊಳ್ಳಿ  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ

ಮೈಸೂರು, ಜೂನ್,3,2024 (www.justkannada.in): ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ನೇತೃತ್ವದಲ್ಲಿ ನಿವೇದಿತ ನಗರದ ಎಸ್.ಆರ್.ಸುಬ್ಬರಾವ್ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜ ಸೇವೆ ಮಾಡಲು ಮುಂದಾಗಬೇಕು.  ತಮ್ಮ ಅಭಿವೃದ್ಧಿಯ ಜತೆಗೆ ಸಮಾಜದ ಅಭಿವೃದ್ಧಿಗೆ ಮತ್ತು ದೇಶದ ಬೆಳವಣಿಗೆಗೂ ಸಹಕಾರ ನೀಡಬೇಕು ಎಂದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಮಕ್ಕಳು ವಿದ್ಯಾವಂತರಾಗಿ, ಉತ್ತಮ ಜೀವನ ರೂಪಿಸಿಕೊಳ್ಳಬೇಕು. ತಂದೆ ತಾಯಿಗಳನ್ನು ಗೌರವದಿಂದ ಕಾಣವ ಜತೆಗೆ ಚೆನ್ನಾಗಿ ನೋಡಿಕೊಳ್ಳಬೇಕು. ದೇಶದ ಉತ್ತಮ ಪ್ರಜೆ ಆಗಿ ಬೆಳೆಯಬೇಕು. ಶಿಕ್ಷಣದ ಜತೆಗೆ ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲೂ ಭಾಗಿಯಾಗಬೇಕು ಎಂದು ತಿಳಿಸಿದರು.

ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್‌ಗೌಡ ಮಾತನಾಡಿ, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ವೈದ್ಯ, ಕಲಾವಿದ, ವಕೀಲ, ಉತ್ತಮ ಅಧಿಕಾರಿ, ಇಂಜಿನಿಯರ್ ಆಗಬಹುದು.  ಪಿಯುಸಿ ನಂತರ ಅನೇಕ ಅವಕಾಶ ಇದೆ. ಒಂದೇ ಕ್ಷೇತ್ರದಲ್ಲೇ ಸಾಧನೆ ಮಾಡಬೇಕು ಅಂತ ಇಲ್ಲ.  ನಿಮ್ಮ ಮುಂದೆ ಅಪಾರ ಅವಕಾಶ ಇದ್ದು, ನಿಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ದೊಡ್ಡ ಮಟ್ಟದ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಸಿಇಟಿ ಬರೆದಿರುವ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್ ಸೀಟ್ ಸಿಗುತ್ತಾ, ಇಲ್ಲವಾ ಎಂದು ಆತಂಕಕ್ಕೆ ಒಳಗಾಗಬಾರದು. ಕಷ್ಟಪಟ್ಟು ಓದಿದ್ದರೆ ಕಂಡಿತಾ ಸೀಟು ಸಿಗುತ್ತದೆ. ಎಲ್ಲರಿಗೂ ಉಜ್ವಲ ಭವಿಷ್ಯ ಇದೆ ಎಂದರು.

ಯುವ ಜನತೆಯೇ ಭಾರತದ ದೊಡ್ಡ ಶಕ್ತಿ. ಮಾನವ ಸಂಪನ್ಮೂಲದಲ್ಲಿ ಶಕ್ತಿ ತುಂಬುವುದು ಯುವಜಬರೆ ಆಗಿದ್ದಾರೆ. ಭಾರತ ಅಭಿವೃದ್ಧಿ ಆಗುತ್ತಿರುವುದು ಶಿಕ್ಷಣದಿಂದ ಮಾತ್ರ ಅಲ್ಲ. ಇಲ್ಲಿ ಸಂಸ್ಕೃತಿಯಿಂದಲೂ. ನಮ್ಮ ಮಾನವ ಸಂಪನ್ಮೂಲದಿಂದಲೂ ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜಗದೀಶ್ ಅವರು ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ತಮ್ಮ ಬಡಾವಣೆಯ ಮಕ್ಕಳಿಗೆ ಸನ್ಮಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ದೊರೆಯುತ್ತದೆ. ಮುಂದೆ ಚೆನ್ನಾಗಿ ಓದಲು ಉತ್ಸಾಹ ಬರುತ್ತದೆ. ಇಂತಹ ಕೆಲಸವನ್ನು ಎಲ್ಲ ಜನ ಪ್ರತಿನಿಧಿಗಳು ಮಾಡಬೇಕು ಎಂದರು.

ಮಂಗಳವಾರದಿಂದ ನಾನು ಮಾಜಿ ಸಂಸದನಾಗುತ್ತೇನೆ. ಅಂದಿನಿಂದ ಮೈಸೂರಿನ ನಾಗರಿಕನಾಗಿ ನಿಮಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಮೈಸೂರು ಜನ ನನಗೆ ಹತ್ತು ವರ್ಷ ಅವಕಾಶ ನೀಡಿದ್ದಾರೆ. ಅದರಂತೆ ನಾನು ಕೂಡ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ನನ್ನ ಕೆಲಸಗಳನ್ನು ನಮ್ಮ ಜನ ನೆನಪು ಮಾಡಿಕೊಳ್ಳುತ್ತಾರೆ ಎಂದರು.

ಇದೇ ವೇಳೆ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದಿರುವ 300 ಕ್ಕೂ ಹೆಚ್ಚು ಮಕ್ಕಳನ್ನು ಪುರಸ್ಕರಿಸಲಾಯಿತು. ಭಾರತೀಯ ಅರಣ್ಯ ಸೇವೆಗೆ 33 ರ್ಯಾಂಕ್ (ಐಎಫ್‌ಎಸ್) ಪಡೆದಿರುವ ಸೌಮ್ಯಾ ರಾಂಪುರೆ ಅವರನ್ನು ಸನ್ಮಾನಿಸಲಾಯಿತು.

ನೈಪುಣ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಘು ಆರ್.ಕೌಟಿಲ್ಯ ವಿದ್ಯಾರ್ಥಿಗಳನ್ನು ಕುರಿತು ಶುಭ ನುಡಿ ಆಡಿದರು. ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ನಗರ ಪಾಲಿಕೆ ಮಾಜಿ ಸದಸ್ಯರಾದ ಜೆ.ಎಸ್.ಜಗದೀಶ್, ಕೆ.ವಿ.ಶ್ರೀಧರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಮುಖಂಡ ಜೋಗಿ ಮಂಜು ಇತರರಿದ್ದರು.

Key words: Cultivate, service, spirit, education, Yaduveer

Tags :

.