For the best experience, open
https://m.justkannada.in
on your mobile browser.

ದಸರಾ ಆನೆ ಅರ್ಜುನ ಸ್ಮಾರಕ ವಿವಾದ: ಹಣ ಸಂಗ್ರಹಿಸಿ ಪೇಚಿಗೆ ಸಿಲುಕಿದ್ದ ಯುವಕರ ಸ್ಪಷ್ಟನೆ ಏನು..?

05:45 PM May 28, 2024 IST | prashanth
ದಸರಾ ಆನೆ ಅರ್ಜುನ ಸ್ಮಾರಕ ವಿವಾದ  ಹಣ ಸಂಗ್ರಹಿಸಿ ಪೇಚಿಗೆ ಸಿಲುಕಿದ್ದ ಯುವಕರ ಸ್ಪಷ್ಟನೆ ಏನು

ಮೈಸೂರು,ಮೇ,28,2024 (wwww.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದ ಯುವಕರ‌ ಮೇಲೆ ಎಫ್ ಐಆರ್ ವಿಚಾರ ಸಂಬಂಧ ಸ್ಮಾರಕ ನಿರ್ಮಾಣಕ್ಕೆ ಅರಣ್ಯಾಧಿಕಾರಿಗಳು ಮೌಖಿಕ ಅನುಮತಿ ಕೊಟ್ಟಿದ್ದರು ಎಂದು ಯುವಕರು ಸ್ಪಷ್ಟನೆ ನೀಡಿದ್ದಾರೆ.

ದಸರಾ ಆನೆ ಅರ್ಜುನ  ಸ್ಮಾರಕಕ್ಕಾಗಿ ಹಣ ಸಂಗ್ರಹಿಸಿ ಪೇಚಿಗೆ ಸಿಲುಕಿದ  ಯುವಕರು ಇಂದು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನ ಎಚ್.ಎನ್.ನವೀನ್, ಸಿದ್ದಪ್ಪಾಜಿ, ಚೇತನ್ ಎಂಬ ಯುವಕರು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಅರ್ಜುನ ಪಡೆ ವಾಟ್ಸಪ್ ಗ್ರೂಪ್ ಅಡ್ಮಿನ್ ಎಚ್.ಎನ್.ನವೀನ್  ಮಾತನಾಡಿ,ನಾವು ಅರ್ಜುನ ಆನೆ ಅಭಿಮಾನಿಗಳು. ಮಳೆಗಾಲದ ಆರಂಭದಲ್ಲೇ ಸ್ಮಾರಕ ಆಗಬೇಕು ಎಂಬುದು ನಮ್ಮ ಉದ್ದೇಶ ಆಗಿತ್ತು.  ಅದಕ್ಕಾಗಿ ವಾಟ್ಸಪ್‌ ನಲ್ಲಿ ಮೇ 1ರಂದು 'ಅರ್ಜುನ ಪಡೆ' ಗ್ರೂಪ್ ಕ್ರಿಯೇಟ್ ಮಾಡಿದೆವು.  ಸುಮಾರು 900 ಮೆಂಬರ್ ಆಗಿದ್ದಾರೆ.  ಇದೇ ವೇಳೆ ನಟ ದರ್ಶನ್ ಅವರು ಸ್ಮಾರಕ ನಿರ್ಮಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ನಾನು ಯಾರ ಬಳಿಯೂ ದುಡ್ಡು ಕೇಳಿಲ್ಲ.  ಅರ್ಜುನನ ಮೇಲಿನ ಅಭಿಮಾನಕ್ಕೆ ಅರ್ಜುನ ಪಡೆ ವಾಟ್ಸಪ್ ಗ್ರೂಪ್‌ ನಲ್ಲಿರುವವರು ನನ್ನ ಅಕೌಂಟ್‌ಗೆ ಹಣ ಹಾಕಿದ್ದಾರೆ. ಸುಮಾರು 50 ಸಾವಿರ ರೂ. ಕಲೆಕ್ಟ್ ಆಗಿದೆ. ನಟ ದರ್ಶನ್ ಕಡೆಯವರಾದ ಸಂಪತ್ ಕಲ್ಲು ಕೊಡಿಸಿದರು.

ತಾತ್ಕಾಲಿಕವಾಗಿ ಸ್ಮಾರಕ ನಿರ್ಮಿಸಲು ಎಸಿಎಫ್ ಮೌಖಿಕವಾಗಿ ಅನುಮತಿ ಕೊಟ್ಟಿದ್ದರು.  ಕೆಲಸ ಮಾಡಲು ಹೋದಾಗ ಆರ್‌ಎಫ್‌ ಒ ತಡೆದರು.  ಡಿಸಿಎಫ್ ಜತೆ ಮಾತನಾಡಿದ ಅರಣ್ಯ ಇಲಾಖೆಯೇ ಸ್ಮಾರಕ ನಿರ್ಮಿಸುತ್ತೆ ಅಂತ ಹೇಳಿದರು. ಕಲ್ಲು ವಾಪಸ್ ತೆಗೆದುಕೊಂಡು ಹೋಗಿ ಅಂತ ಹೇಳಿದರು.  ಸಾಮಾಜಿಕ ಜಾಲತಾಣದಲ್ಲಿ ವಿವಾದವಾದ ಬಳಿಕ ಅರಣ್ಯ ಇಲಾಖೆಯವರು ತರಾತುರಿಯಲ್ಲಿ ತಾತ್ಕಾಲಿಕವಾಗಿ ಸ್ಮಾರಕ ನಿರ್ಮಿಸಿದ್ದಾರೆ.  ಆರ್‌ಎಫ್‌ಒ 30 ಸಾವಿರ ರೂ. ಕಲ್ಲಿನ ಹಣವನ್ನು ನನ್ನ ಅಕೌಂಟ್‌ ಗೆ ಹಣ ಹಾಕಿದ್ದಾರೆ. ನಾವು ನಟ ದರ್ಶನ್, ಅರ್ಜುನ ಆನೆ ಹೆಸರು ಬಳಸಿಕೊಂಡು ಹಣ ವಸೂಲಿ ಮಾಡಿಲ್ಲ.  ಮಲೆನಾಡು ರಕ್ಷಣಾ ವೇದಿಕೆಯ ಸಾಗರ್ ಪ್ರಚಾರಕ್ಕಾಗಿ ವಿಡಿಯೋದಲ್ಲಿ ಏನೇನೋ ಮಾತನಾಡಿದ್ದಾರೆ.ನಾನು ಅರ್ಜುನನ ಅಭಿಮಾನಿಗಳು, ಕಳ್ಳ ಅಲ್ಲ ಎಂದು ತಿಳಿಸಿದ್ದಾರೆ.

ಯುವಕರ ಪ್ರಕಾರ ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೆ ಅರಣ್ಯಧಿಕಾರಿಗಳು ಮೌಖಿಕವಾಗಿ ಅನುಮತಿ ಕೊಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದ‌ ಯುವಕರು ವೀಡಿಯೋ ಸಾಕ್ಷಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಪೋನ್ ಮೂಲಕ ನೇಹಾ ಮತ್ತು ಎಸಿಎಫ್ ಮಹದೇವ್ ಜೊತೆ ಮಾತನಾಡಿದ್ದಾರೆ ಎನ್ನ‌ಲಾದ ಆಡಿಯೋ ವೀಡಿಯೋವನ್ನ ಯುವಕರು ರೆಕಾರ್ಡ್ ಮಾಡಿಕೊಂಡಿದ್ದು, ಈ ವೇಳೆ‌ ಸಿಮೆಂಟ್ ಬಳಸದೆ ಕಲ್ಲಿನಲ್ಲಿ ಕಟ್ಟಲು ಅನುಮತಿ ಕೊಟ್ಟಿರುವುದಾಗಿ ಆಡಿಯೋ ಸಂಭಾಷಣೆ ಇದೆ. ಈ ಬಗ್ಗೆ ಇಬ್ಬರು ಅಧಿಕಾರಿಗಳ ಜೊತೆ ನವೀನ್ ಮಾತನಾಡಿದ್ದು,  ಇದಕ್ಕೂ  ಮುನ್ನ ತಾತ್ಕಾಲಿಕ ಸ್ಮಾರಕ ನಿರ್ಮಾಣಕ್ಕೆ ಅನುಮತಿ ಮನವಿ ಪತ್ರವನ್ನ ಯುವಕರು ನೀಡಿದ್ದಾರೆ. ಅರ್ಜುನ ಪಡೆ ಕರ್ನಾಟಕ ಹೆಸರಿನಲ್ಲಿ ಹಾಸನದ ಯಳಸೂರು ವಲಯ ಅರಣ್ಯಧಿಕಾರಿಗೆ ಮನವಿ ಪತ್ರವನ್ನ ನೀಡಿದ್ದಾರೆ ಎನ್ನಲಾಗಿದೆ.

Key words: Dasara, Elephant, Arjuna, statue

Tags :

.